ಬೆಂಗಳೂರು: ನಾವು ಮಠಕ್ಕೆ ಅನುದಾನವನ್ನೇ ಪಡೆಯುವುದಿಲ್ಲ. ಈ ಹಿಂದೆ ಕೊಟ್ಟ ಅನುದಾನ ಸರ್ಕಾರಕ್ಕೆ ಹಿಂತಿರುಗಿಸಿದ್ದೇವೆ ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದರು.
ಮಠದಿಂದಲೂ 30 ಪರ್ಸೆಂಟ್ ಕಮಿಷನ್ ಪಡೆದು ಅನುದಾನ ನೀಡಲಾಗುತ್ತದೆ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮಾಡಿದ ಆರೋಪದ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದರು.
ದಿಂಗಾಲೇಶ್ವರರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ಬಹುಶಃ ಅವರ ಬಳಿ ಆ ಕಮಿಷನ್ ಆರೋಪದ ಬಗ್ಗೆ ಮಾಹಿತಿ ಇರಬಹುದು. ಆದರೆ, ನಮಗಂತೂ ಸರ್ಕಾರದ ಅನುದಾನ ಬೇಕಾಗಿಲ್ಲ. ಸಮುದಾಯಕ್ಕೆ 2ಎ ಮೀಸಲಾತಿ ಬೇಕಷ್ಟೇ ಎಂದರು.
ಇದನ್ನೂ ಓದಿ:ಅಂದು ರಾಜಕೀಯ- ಇಂದು ಪ್ರಾಣಸಂಕಟ-ಮುಂದು ಸರಕಾರಕ್ಕೆ ಖೋತಾ!
ಮೀಸಲಾತಿ ನೀಡಲು ಸರ್ಕಾರಕ್ಕೆ ಏ. 21ರ ಅಂತಿಮ ಗಡುವು ನೀಡಲಾಗಿದೆ. ಇದು ಮಾಡು ಇಲ್ಲವೇ ಮಡಿ ಹೋರಾಟ. ಸ್ಪಂದಿಸದಿದ್ದರೆ, ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದೂ ಎಚ್ಚರಿಸಿದರು.