ಬಾಗಲಕೋಟೆ: ಶತಮಾನ ಪೂರೈಸಿರುವ ಬಸವೇಶ್ವರ ಸಹಕಾರಿ ಬ್ಯಾಂಕ್ ಗ್ರಾಹಕರ ಜೀವನಾಡಿಯಾಗಿ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ| ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಡತ ಬಜಾರ್ ಶಾಖೆಯ ನವೀಕೃತ ಕಟ್ಟಡ ಹಾಗೂ ನೂತನ ಎಟಿಎಂ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶತಮಾನದ ಇತಿಹಾಸ ಹೊಂದಿರುವ ಈ ಬ್ಯಾಂಕ್ ಗ್ರಾಹಕರ ವಿಶ್ವಾಸ ಉಳಿಸಿಕೊಂಡು, ಉತ್ತಮವಾಗಿ ಕೆಲಸ ಮಾಡುತ್ತಿದೆ. 100 ವರ್ಷಗಳ ಹಿಂದೆ ಅಡತ ಬಜಾರ್ ಶಾಖೆಯಲ್ಲಿ ಬಸವೇಶ್ವರ ಬ್ಯಾಂಕ್ ಸಣ್ಣಪುಟ್ಟ ವಹಿವಾಟಿನೊಂದಿಗೆ ಆರಂಭಗೊಂಡು ಇಂದು ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದೆ. ಗ್ರಾಹಕರು, ವರ್ತಕರ ಬಹು ದಿನಗಳ ಬೇಡಿಕೆಯಂತೆ ಎಟಿಎಂಗೆ ಚಾಲನೆ ನೀಡಿದ್ದು, ಶಾಖೆಯ ಹಳೇ ಕಟ್ಟಡಕ್ಕೆ ಹೊಸ ರೂಪ ನೀಡಿರುವುದು ಉತ್ತಮ ಕೆಲಸ ಎಂದರು.
ಚರಂತಿಮಠದ ಶ್ರೀ ಪ್ರಭು ಸ್ವಾಮೀಜಿ ಮಾತನಾಡಿ, ಬಸವೇಶ್ವರ ಬ್ಯಾಂಕ್ ನಗರ ಹಾಗೂ ಜಿಲ್ಲೆಯ ಜನ ಸಾಮಾನ್ಯರ ಆರ್ಥಿಕ ಬಲವರ್ಧನೆಗೆ ಶ್ರಮಿಸುತ್ತಿದೆ. ಇಂದಿನ ವೈಜ್ಞಾನಿಕ ಕಾಲಕ್ಕೆ ತಕ್ಕಂತೆ ಗ್ರಾಹಕರಿಗೆ ಅನುಕೂಲವಾಗುವ ಸೇವೆ ಒದಗಿಸಿ, ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬ್ಯಾಂಕ್ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತನ್ನ ಸೇವೆ ವಿಸ್ತರಿಸಿಕೊಳ್ಳಲಿ ಎಂದರು.
ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ಈ ಅಡತ ಬಜಾರ್ ಶಾಖೆಯಿಂದ ಶತಮಾನದ ಹಿಂದೆ ಬಸವೇಶ್ವರ ಬ್ಯಾಂಕ್ ವಹಿವಾಟು ಆರಂಭಿಸಿತ್ತು. ಇದೀಗ ಶತಮಾನದ ಕಟ್ಟಡವನ್ನು ನವೀಕರಣಗೊಳಿಸಲಾಗಿದೆ. ವರ್ತಕರು, ಗ್ರಾಹಕರ ಆಸೆಯಂತೆ ಎಟಿಎಂ ಸೇವೆ ಒದಗಿಸಲಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಎಲ್ಲ ರೀತಿಯ ಸೇವೆ ನೀಡುತ್ತಿದೆ. ಜನ, ಸಾಮಾನ್ಯರ ಆರ್ಥಿಕ ಪ್ರಗತಿಯಲ್ಲಿ ಮಹತ್ತರ ಕೊಡುಗೆ ನೀಡುವಲ್ಲಿ ಬ್ಯಾಂಕ್ ಶ್ರಮಿಸುತ್ತಿದೆ ಎಂದು ಹೇಳಿದರು.
ಬ್ಯಾಂಕಿನ ಉಪಾಧ್ಯಕ್ಷ ಎಂ.ಜಿ. ವಾಲಿ, ಜಿಪಂ ಸದಸ್ಯ ಹಾಗೂ ಬ್ಯಾಂಕ್‌ನ ನಿರ್ದೇಶಕ ಹೂವಪ್ಪ ರಾಠೊಡ, ನಿರ್ದೇಶಕರಾದ ಎಸ್.ಸಿ. ಆರಬ್ಬಿ, ಮನೋಹರ ಏಳಮ್ಮಿ, ರವಿ ಪಟ್ಟಣದ, ವೀರಪ್ಪ ಶಿರಗಣ್ಣವರ, ಮುತ್ತು ಜೋಳದ, ರಂಗನಗೌಡ ದಂಡನ್ನವರ, ಶ್ರೀನಿವಾಸ ಬಳ್ಳಾರಿ, ಸುನೀತಾ ಮುಳಗುಂದ, ಪ್ರಧಾನ ವ್ಯವಸ್ಥಾಪಕ ಬಿ.ಪಿ. ಬಣಗಾರ, ಶಾಖಾ ವ್ಯವಸ್ಥಾಪಕಿ ರಾಜೇಶ್ವರಿ ಶೆಟ್ಟರ, ಬ್ಯಾಂಕ್‌ನ ಅಧಿಕಾರಿ ಪಿ.ಎನ್.ಹಳ್ಳಿಕೇರಿ ಉಪಸ್ಥಿತರಿದ್ದರು.