Advertisement

ಬಸವ ಜಯಂತಿ ಅರ್ಥಪೂರ್ಣವಾಗಿ ಆಚರಿಸಿ

05:11 PM Apr 19, 2018 | |

ಕೂಡಲಸಂಗಮ: ಸರ್ಕಾರ ಬಸವ ಜಯಂತಿಯನ್ನು ಬೆಂಗಳೂರಿನಲ್ಲಿ ಮಾಡಿದರೆ ಅರ್ಥಪೂರ್ಣವಾಗುವುದಿಲ್ಲ. ಜನ್ಮ ಸ್ಥಳ ಬಸವನಬಾಗೇವಾಡಿ, ವಿದ್ಯಾಭೂಮಿ ಐಕ್ಯಸ್ಥಳ ಕೂಡಲಸಂಗಮ, ಕಾರ್ಯಕ್ಷೇತ್ರ ಬಸವ ಕಲ್ಯಾಣದಲ್ಲಿ ಮಾಡಿದರೆ ಅರ್ಥಪೂರ್ಣವಾಗುವುದು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಹೇಳಿದರು.

Advertisement

ಕೂಡಲಸಂಗಮ ಬಸವ ಧರ್ಮ ಪೀಠವತಿಯಿಂದ ನಡೆದ ಬಸವಣ್ಣನವರ 885ನೇ ಬಸವ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಮಹಾರಾಷ್ಟ್ರ, ಕರ್ನಾಟಕ, ತೆಲಗಾಂಣ ಸರ್ಕಾರ ಬಸವ ಜಯಂತಿಯನ್ನು ಎಲ್ಲ ಸರ್ಕಾರ ಕಚೇರಿಯಲ್ಲಿ ಆಚರಣೆ ಮಾಡುವುದು, ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸುವ ಮೂಲಕ ಬಸವ ತತ್ವ ಪ್ರಸಾರ ಕಾರ್ಯಕ್ಕೆ ಒತ್ತುಕೊಟ್ಟಿರುವುದು ಮಹತ್ವಪೂರ್ಣವಾಗಿದೆ. ಕೇಂದ್ರ ಸರ್ಕಾರವು ಇಂತಹ ಕಾರ್ಯ ಮಾಡಬೇಕು. ಬಸವಣ್ಣನವರು ಕೊಟ್ಟ ಸಂದೇಶ ಸರ್ವಕಾಲಿಕ ಇಂತಹ ಶರಣರ ಸಂದೇಶದ ಮೇಲೆ ಜೀವನ ಸಾಗಿಸಿದರೆ ಬದುಕು ಸುಂದರವಾಗುವುದರ ಜೊತೆಗೆ ಬಸವಣ್ಣನವರು ಕಂಡ ಕಲ್ಯಾಣ ರಾಜ್ಯದ ನಿರ್ಮಾಣವಾಗುವುದು.

ಇಂದಿನ ಯುವ ಜನಾಂಗ ಶರಣರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕು. ಬಸವಣ್ಣನವರ ಸಂದೇಶ ಬಹುಬೇಗನೆ ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ಬೆಂಗಳೂರಿನ ಬಸವ ಗಂಗೋತ್ರಿಯಲ್ಲಿ 111 ಅಡಿ ಎತ್ತರದ ಬಸವ ಪುತ್ಥಳಿ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದರು. 

ಬಸವ ಭಾರತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಂಭುಲಿಂಗ ಭದ್ರಶೆಟ್ಟಿ, ಬಸವ ಭಾರತಿ ಪ್ರಾಥಮಿಕ ಶಾಲೆಯ ಮುಖ್ಯಗುರು ಮಹಾಂತೇಶ ಎಮ್ಮಿ. ಪ್ರೌಢಶಾಲೆಯ ಮುಖ್ಯಗುರು ಸಂಗಮೇಶ ಎಮ್ಮಿ ಇದ್ದರು.ಬೆಳಗ್ಗೆ 7 ರಿಂದ 8 ಗಂಟೆಯವರೆಗೆ ಪೂಜಾ ವ್ರತ ಕಾರ್ಯಕ್ರಮ ನಡೆಯಿತು. 8:30ಕ್ಕೆ ಕೂಡಲಸಂಗಮ ಬಸವ ಧರ್ಮ ಪೀಠದ ಧ್ಯಾನಮಂಟಪದಲ್ಲಿ ಬಸವಣ್ಣನವರ 885 ಜಯಂತಿಯ ನಿಮಿತ್ತ ತೊಟ್ಟಿಲು ಕಾರ್ಯಕ್ರಮ ನಡೆಯಿತು. ನಂತರ ಬಸವಣ್ಣನವರ ಐಕ್ಯ ಸ್ಥಳದಲ್ಲಿ ಪೂಜೆ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next