ಧಾರವಾಡ: ನನಗೆ ಬಹಳಷ್ಟು ಜನ ಸವಾಲು ಹಾಕುತ್ತಿದ್ದಾರೆ. ಧಾರವಾಡದಲ್ಲೂ ಒಬ್ಬರು ಸವಾಲು ಹಾಕಿದ್ದಾರೆ. ಶೀಘ್ರದಲ್ಲಿ ಅವರಿದ್ದಲ್ಲಿಗೇ ಹೋಗಿ ಉತ್ತರ ಕೊಡುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ತಾಲೂಕಿನ ಶ್ರೀಕ್ಷೇತ್ರ ಗರಗ ಮಡಿವಾಳೇಶ್ವರ ಮಠಕ್ಕೆ ಮುಮ್ಮಿಗಟ್ಟಿ ಬಳಿ ದ್ವಾರಬಾಗಿಲು ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಯತ್ನಾಳ್ ಧಾರವಾಡಕ್ಕೆ ಬಂದು ಹಿಜಾಬ್ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದ್ದರು. ಧಾರವಾಡದಲ್ಲಿ ಯಾವ ಚೌಕ್‌ನಲ್ಲಿ ಹೇಳುತ್ತಾರೋ ಅಲ್ಲಿ ಪೆಂಡಾಲ್ ಹಾಕಿ ಸಮಾವೇಶ ಮಾಡುತ್ತೇನೆ. ಧಮ್ ಇದ್ದರೆ ಬರಲಿ. ಇದು ಪಾಕಿಸ್ಥಾನ ಅಲ್ಲ, ಹಿಂದುಸ್ಥಾನ. ಇತ್ತೀಚೆಗೆ ಗೋಕಾಕ್‌ನಲ್ಲೂ ಕೆಲವರು ಸವಾಲು ಹಾಕಿದ್ದರು. ವೇದಿಕೆ ಹತ್ತದಂತೆ ತಡೆಯುವ ಎಚ್ಚರಿಕೆ ನೀಡಿದ್ದರು. ಅಲ್ಲಿ ಸಮಾವೇಶ ಮಾಡಿ ಕೆಲವರಿಗೆ ಉತ್ತರ ಕೊಟ್ಟಿದ್ದೇನೆ. ಧಾರವಾಡದಲ್ಲೂ ಸಮಾವೇಶ ಮಾಡುತ್ತೇನೆ. ಬಿಜೆಪಿ ಹೈಕಮಾಂಡ್ ನನ್ನನ್ನು ಸ್ಟಾರ್ ಪ್ರಚಾರಕನಾಗಿ ಮಾಡಿದೆ. ಹೀಗಾಗಿ ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಚುನಾವಣ ಪ್ರಚಾರಕ್ಕೆ ಹೋಗುತ್ತೇನೆ. ಶಿವಮೊಗ್ಗ, ಶಿಕಾರಿಪುರಕ್ಕೂ ಹೋಗುತ್ತೇನೆ ಎಂದರು.
ಆಂತರಿಕ ವಿಚಾರ:
ಸಿದ್ದರಾಮಯ್ಯ ಮತ್ತು ಡಿಕೆಶಿ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ಸಂತೋಷ್ ಲಾಡ್ ಹೇಳಿಕೆ ಅವರ ಪಕ್ಷದ ವಿಚಾರ. ಅವರಿಬ್ಬರು ಚುನಾವಣೆಯಲ್ಲಿ ಸೋಲಬಹುದು ಎಂಬ ಕಾರಣಕ್ಕೆ ಸಂತೋಷ ಲಾಡ್ ಹಾಗೆ ಹೇಳಿರಬಹುದು ಎಂದು ಯತ್ನಾಳ್ ಹೇಳಿದರು.