Advertisement
ಈ ಕ್ಷೇತ್ರವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರತಿನಿ ಧಿಸುತ್ತಿದ್ದಾರೆ. ಹಿಂದೂಪರ ಹಾಗೂ ಪಂಚಮಸಾಲಿ ಮೀಸಲು ಹೋರಾಟದ ಮುಂಚೂಣಿಯಲ್ಲಿ ನಿಂತು ಸರಕಾರದ ವಿರುದ್ಧವೇ ಹರಿಹಾಯುತ್ತಿರುವ ಯತ್ನಾಳ, ವಿಪಕ್ಷಗಳಿಗಿಂತ ಸ್ವಪಕ್ಷದಲ್ಲೇ ದೊಡ್ಡ ಮಟ್ಟದ ವಿರೋಧಿ ಪಾಳೆಯವನ್ನು ಸೃಷ್ಟಿಸಿಕೊಂಡಿದ್ದಾರೆ. ಮತ್ತೂಂದೆಡೆ ಯತ್ನಾಳ ಅವರ ಈ ನಡೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ಸರಕಾರ ಹಾಗೂ ಪಕ್ಷಕ್ಕೆ ಸದಾ ಮುಜುಗುರ ತರುತ್ತಿರುವ ಅವರ ಬದಲು ತಮಗೇ ಟಿಕೆಟ್ ನೀಡುವಂತೆ ಬೇಡಿಕೆ ಮಂಡಿಸಿದ್ದಾರೆ.ಇನ್ನು ಯತ್ನಾಳ ಅವರು ಸಂಸದರಾಗಿದ್ದಾಗ ವಿಜಯಪುರ ನಗರ ಕ್ಷೇತ್ರವನ್ನು ಬಿಜೆಪಿ ಶಾಸಕರಾಗಿ ಎರಡು ಬಾರಿ ಆಯ್ಕೆಯಾಗಿದ್ದ ಅಪ್ಪು ಪಟ್ಟಣಶೆಟ್ಟಿ ಈ ಬಾರಿ ತಮಗೇ ಟಿಕೆಟ್ ನೀಡುವಂತೆ ಬೇಡಿಕೆ ಮಂಡಿಸಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಸಚಿವರೂ ಆಗಿದ್ದ ಅಪ್ಪು ಪಟ್ಟಣಶೆಟ್ಟಿ ಕಳೆದ ಬಾರಿಯಂತೆ ಈ ಬಾರಿ ತಮ್ಮ ಮನವೊಲಿಕೆ ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
Related Articles
Advertisement
ಪ್ರಮುಖವಾಗಿ ಪೈಪೋಟಿ ನಡೆದಿರುವುದು ಮಾಜಿ ಶಾಸಕ ಡಾ|ಎಂ.ಎಸ್. ಬಾಗವಾನ ಹಾಗೂ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಮಧ್ಯೆ. ಇದರ ಹೊರತಾಗಿ ಮಾಜಿ ಸಚಿವ ಎಂ.ಎಲ್.ಉಸ್ತಾದ್ ಅವರ ಪುತ್ರಿ ಸಲಿಮಾ ಉಸ್ತಾದ್, ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲರ ಪುತ್ರಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಯುಕ್ತಾ ಪಾಟೀಲ, ರಫೀಕ್ ಅಹ್ಮದ್ ಕಾಣಿ, ಮೊಹ್ಮದ್ ರಫೀಕ್ ಟಪಾಲ್, ಎಂ.ಎಸ್.ಹೊರ್ತಿ ಸಹಿತ ಇತರರು ಟಿಕೆಟ್‌ಗಾಗಿ ತಮ್ಮ ಆಪ್ತ ನಾಯಕರ ಮೂಲಕ ಲಾಬಿ ನಡೆಸಿದ್ದಾರೆ.
ಈ ನಡುವೆ ವಿಜಯಪುರ ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಏಳಕ್ಕೆ ಅಭ್ಯರ್ಥಿಗಳನ್ನು ಘೋಷಿಸಿರುವ ಜೆಡಿಎಸ್, ವಿಜಯಪುರ ನಗರ ಕ್ಷೇತ್ರವನ್ನು ಮಾತ್ರ ಕಾಯ್ದಿರಿಸಿಕೊಂಡಿದೆ. ಘೋಷಿತ ಏಳು ಜನರೂ ಮುಸ್ಲಿಮೇತರರೇ ಆಗಿದ್ದಾರೆ. ಹೀಗಾಗಿ ಪಕ್ಷ ವಿಜಯಪುರ ನಗರ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ಇದು ಇತರ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ಸಹಕಾರಿಯಾಗಲಿದೆ ಎಂಬುದರ ಜತೆಗೆ ಬಿಜೆಪಿ-ಕಾಂಗ್ರೆಸ್‌ನ ಅತೃಪ್ತ ನಾಯಕರಿಗೆ ಗಾಳ ಹಾಕುವ ಲೆಕ್ಕಾಚಾರವೂ ನಡೆದಿದೆೆ ಎನ್ನಲಾಗಿದೆ.
ಮೊದಲ ಬಾರಿಗೆ ಕಣಕ್ಕೆದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಸಾರಥ್ಯದ ಎಐಎಂಐಎಂ, ರವಿಕೃಷ್ಣಾರೆಡ್ಡಿ ನೇತೃತ್ವದ ಕೆಆರ್‌ಎಸ್ ಪಕ್ಷ ಸಹಿತ ಹಲವು ಪಕ್ಷಗಳು ಮೊದಲ ಬಾರಿಗೆ ವಿಜಯಪುರ ನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿವೆ. ಅಲ್ಲದೆ ಒಂದೊಮ್ಮೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದಲ್ಲಿ ಪ್ರಬಲ ಆಕಾಂಕ್ಷಿಗಳಲ್ಲಿ ಕೆಲವರು ಎಂಐಎಂ, ಆಮ್ ಆದ್ಮಿ ಸಹಿತ ಇತರ ಪಕ್ಷಗಳಿಗೆ ವಲಸೆ ಹೋಗಿ ಟಿಕೆಟ್ ಗಿಟ್ಟಿಸುವ ನಿರೀಕ್ಷೆ ಇದೆ. – ಜಿ.ಎಸ್. ಕಮತರ