ವಿಜಯಪುರ : ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಹಾಗೂ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ಕುತ್ತು ತಂದ ಸಿಡಿ ಜಾಲ ಅಂತರ ರಾಜ್ಯ ಮಟ್ಟದಲ್ಲಿದೆ. ವಿದೇಶಿ ನಂಟೂ ಇದೆ. ವಿದೇಶದಲ್ಲೂ ಸಿಡಿ ತಯಾರಾಗಿವೆ. ಇದರಿಂದ ಎಸ್ ಐ ಟಿ ಬದಲು ಸಿಬಿಐ ತನಿಖೆಯೇ ಸೂಕ್ತ ಎಂ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದಲ್ಲಿ ಸಿಡಿ ತಯಾರಿಸುವ ಫ್ಯಾಕ್ಟರಿ ಇವೆ. ಈ ಹಿಂದಿನ ರಾಜ್ಯಾಧ್ಯಕ್ಷರ ಕಾಲದಲ್ಲಿ ಪಕ್ಷದ ಐಟಿ ವಿಭಾಗದಲ್ಲಿದ್ದವರು, ಇದೀಗ ವಿಜಯೇಂದ್ರ ಅವರ ಜೊತೆಗಿದ್ದು, ನಿಗಮ ಮಂಡಳಿ ಅಧ್ಯಕ್ಷರಾದವರಲ್ಲೂ ಕೆಲವರು ಇದರಲ್ಲಿ ಭಾಗಿಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಬಲ್ಲ ಮಹಾನ್ ನಾಯಕನೇ ಇದರ ರೂವಾರಿ ಎಂದರು. ವಿಧಾನಸೌಧದ ಮೊಗಸಾಲೆಯಲ್ಲಿ ಕೆಲವು ಸಚಿವರು, ಶಾಸಕರೇ ಇದರಲ್ಲಿ ದೊಡ್ಡ ಜಾಲವಿದೆ ಎಂದು ಹೇಳುತ್ತಿದ್ದಾರೆ.
ಅಸಲಿ-ನಕಲಿ ಎರಡೂ ರೀತಿಯ ಸಿಡಿ ಇವೆ ಎಂದು ಚರ್ಚಿಸುತ್ತಿದ್ದಾರೆ. ಬ್ಲ್ಯಾಕ್ ಮೇಲ್ ಮಾಡಲು ಅಗತ್ಯವಾದ ರೀತಿಯಲ್ಲಿ ಎಡಿಟ್ ಮಾಡುತ್ತಿದ್ದಾರೆ. ಇದರಿಂದ ಕರ್ನಾಟಕದ ರಾಜಕೀಯ ವ್ಯವಸ್ಥೆಗೆ ಕಳಂಕ ತರುವ ಹುನ್ನಾರವೂ ಅಡಗಿದೆ. ಹೀಗಾಗಿ ಸಿಬಿಐ ತನಿಖೆಯಿಂದ ಮಾತ್ರವೇ ಇಡೀ ಸಿಡಿ ಪ್ರಕರಣ ಹೊರಬರಲು ಸಾಧ್ಯ ಎಂದು ಆಗ್ರಹಿಸಿದರು.