Advertisement
ಬೋಸ್ ಅವರ ನೇತೃತ್ವದ ಭಾರತೀಯ ರಾಷ್ಟ್ರೀಯ ಸೇನೆಯ (ಐಎನ್‌ಎ) 50 ಸಾವಿರ ಸೈನಿಕರು ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಬರ್ಮಾ ಮೂಲಕ (ಈಗಿನ ಮ್ಯಾನ್ಮಾರ್) ಭಾರತದೊಳಗೆ ನುಗ್ಗಿ ಬ್ರಿಟಿಷರ ವಿರುದ್ಧ ಮೇಲುಗೈ ಸಾಧಿಸುವ ಹಂತಕ್ಕೆ ಕೂಡಾ ಬಂದಿದ್ದರು. ಈ ಸೇನೆಯ ಸಂಪೂರ್ಣ ಆರ್ಥಿಕ ವ್ಯವಹಾರಗಳನ್ನು ವಸ್ತುಶಃ ಏಕಾಂಗಿಯಾಗಿ ನಡೆಸಿದವರು ಎಲ್ಲಪ್ಪ.
Related Articles
Advertisement
ಆ ಸಂದರ್ಭದಲ್ಲಿ ನೇತಾಜಿ ಸೂಚನೆಯಂತೆ “ಕುಬೇರ’ ಬಿರುದಾಂಕಿತ ಎಲ್ಲಪ್ಪ ಅವರು ಸೈನ್ಯದ ವೆಚ್ಚ ನಿಭಾಯಿಸಲು ಆಜಾದ್ ಹಿಂದ್ ನ್ಯಾಶನಲ್ ಬ್ಯಾಂಕ್ ಸ್ಥಾಪಿಸಿದರು. ಐಎನ್‌ಎ ಕಚೇರಿ ರಂಗೂನ್‌ಗೆ ಸ್ಥಳಾಂತರವಾದಾಗ ಎಲ್ಲಪ್ಪರ ಜವಾಬ್ದಾರಿ ಹೆಚ್ಚಿತು. ಜಪಾನಿ ಯೋಧರೊಂದಿಗೆ ನೇತಾಜಿ, ಎಲ್ಲಪ್ಪ ಮುಂತಾದ ಐಎನ್‌ಎ ನಾಯಕರು ಸೇರಿ ಬ್ರಿಟಿಷರ ಪ್ರಮುಖ ಸಮರ ನೌಕೆಯನ್ನು ಮುಳುಗಿಸಿದರು. ದೇಶಾದ್ಯಂತ ನೇತಾಜಿ ಅವರಿಗೆ ಅಪಾರ ಬೆಂಬಲ ವ್ಯಕ್ತವಾಯಿತು.
ಈ ನಡುವೆ, ಅಮೆರಿಕದ ಅಣುಬಾಂಬಿಗೆ ಜಪಾನ್ ನಲುಗಿತು. ಜಪಾನ್ ಸೈನಿಕರ ನಿರ್ಗಮನದಿಂದ ಐಎನ್‌ಎ ಸಂಖ್ಯೆ ಕ್ಷೀಣಿಸಿತು. ಬ್ರಿಟಿಷರು ಐಎನ್‌ಎಯನ್ನು ಗುರಿಯಾಗಿ ಸಿಕೊಂಡರು. ಆದರೂ, ಹೋರಾಟ ಸ್ವಲ್ಪಕಾಲ ನಡೆದಿತ್ತು. ಮಂಗಳೂರಿನ ಸುಂದರರಾವ್ ಅವರು ಕೂಡಾ ಐಎನ್‌ಎಯಲ್ಲಿದ್ದು ಈ ಬಗ್ಗೆ ಕೃತಿಯನ್ನು ರಚಿಸಿದ್ದಾರೆ.
ಮಂಗಳೂರಿನಲ್ಲಿರುವ ಎಲ್ಲಪ್ಪರ ತಂಗಿಯ ಮಗ ಪ್ರಭಾಕರದಾಸ್ ಅವರಿಗೆ ಕ್ಯಾ| ಲಕ್ಷ್ಮೀ ಬರೆದಿರುವ ಪತ್ರದ ಪ್ರಕಾರ: “ಬಂದೂಕುಧಾರಿ ಎಲ್ಲಪ್ಪ ಸಾಹೇಬರನ್ನು ಕೊನೆಯದಾಗಿ ನೋಡಿದ್ದೇ ನಾನು. ಬರ್ಮಾದ ದಟ್ಟ ಕಾಡಲ್ಲಿ ಆಸ್ಪತ್ರೆ ನಿರ್ಮಿಸಿ ಗಾಯಾಳು ಯೋಧರನ್ನು ಶುಶ್ರೂಷೆ ಮಾಡುತ್ತಿದ್ದೆವು. ಅಲ್ಲಿಗೆ ಬಂದ ನೇತಾಜಿ, ಎಲ್ಲಪ್ಪರನ್ನು ಸಿಂಗಾಪುರಕ್ಕೆ ಆಹ್ವಾನಿಸಿ ತೆರಳಿದರು. ಎಲ್ಲಪ್ಪರು ಸೈನಿಕರನ್ನು ಹುರಿದುಂಬಿಸುತ್ತಿದ್ದಂತೆ ಬ್ರಿಟಿಷರು ವಿಮಾನದಿಂದ ಬಾಂಬಿನ ಸುರಿಮಳೆಗೈದರು. ಆಗ ಕಬ್ಬಿಣದ ಚೂರುಗಳು ಎಲ್ಲಪ್ಪರ ದೇಹದೊಳಗೆ ಸೇರಿ ಘಾಸಿಗೊಳಿಸಿದರೂ ಅವರು ಎದೆಗುಂದಲಿಲ್ಲ. ಬ್ರಿಟಿಷರು ನಮ್ಮನ್ನು ಬಂಧಿಸಿ ಗುವಾಹಟಿಗೆ ಒಯ್ದರು. ಗಾಯಾಳು ಎಲ್ಲಪ್ಪರನ್ನು ಅಲ್ಲೇ ಉಳಿಸಲಾಗಿತ್ತು. ಆದರೆ, ಬ್ರಿಟಿಷರು ಅವರಿದ್ದ ಗುಡಿಸಲನ್ನು ಸುತ್ತುವರಿದು ಗುಂಡಿನ ಮಳೆಗರೆದು ಸುಟ್ಟು ಹಾಕಿದ ಸುದ್ದಿ ನಮಗೆ ತಲುಪಿತು…’
ಆದರೆ, ಎಲ್ಲಪ್ಪ ಚಾಣಾಕ್ಷ ಯೋಧ. ಹಾಗೆಲ್ಲ ಸಿಕ್ಕಿ ಬೀಳುವವರಲ್ಲ ಅಂತ ಅವರ ಅಭಿಮಾನಿಗಳ ಅಭಿಪ್ರಾಯವಾಗಿತ್ತು. ನೇತಾಜಿ ಸಾವಿನಷ್ಟೇ ನಿಗೂಢ ಎಲ್ಲಪ್ಪರ ಅಂತ್ಯ. ಅದು ಹೌದೆಂದರೆ, ಆಗ ಎಲ್ಲಪ್ಪರ ವಯಸ್ಸು ಕೇವಲ 33. ಆ ವೇಳೆಗೆ ಮಂಗಳೂರಿನಲ್ಲಿ ಎಲ್ಲಪ್ಪರ ಕುಟುಂಬ ಬಡತನದ ಸ್ಥಿತಿಗೆ ಬಂದಿತ್ತು. ಆಗರ್ಭ ಶ್ರೀಮಂತ, ಐಎನ್‌ಎಯ ಸಮಸ್ತ ಆರ್ಥಿಕ ವ್ಯವಹಾರ ನೋಡುತ್ತಿದ್ದ ಎಲ್ಲಪ್ಪರ ಮಂಗಳೂರಿನ ಭೂಮಿಯೂ ಕೈಬಿಟ್ಟಿತ್ತು. ಆ ಕಾಲದಲ್ಲಿ ಸಂಪಾದಿಸಿದ್ದ ಕೋಟ್ಯಂತರ ರೂ.ಗಳನ್ನು ಐಎನ್‌ಎಗೆ ಅರ್ಪಿಸಿದವರು ಅವರು.
ಎಲ್ಲಪ್ಪ ಅವರ ಜನ್ಮಶತಮಾನೋತ್ಸವ ಮಂಗಳೂರು ಸಹಿತ ವಿವಿಧೆಡೆ ಆಚರಣೆಯಾಗಿದೆ. ಜೀವನ ಕಥನ, ಸ್ಮರಣ ಸಂಚಿಕೆ, ಲೇಖನಗಳು ಪ್ರಕಟವಾಗಿವೆ. ಅವರ ಹೆಸರಲ್ಲಿ ಆಸ್ಪತ್ರೆ ಸಹಿತ ಸ್ಮಾರಕಗಳು ನಿರ್ಮಾಣವಾಗಿವೆ.1937ರಲ್ಲಿ ಎಲ್ಲಪ್ಪ ಅವರು ಸೀತಮ್ಮರನ್ನು ಮಂಗಳೂರಿನಲ್ಲಿ ವಿವಾಹವಾದರು. ಪತ್ನಿಯೊಂದಿಗೆ 17 ದಿನ ಮಾತ್ರ ಕಳೆದು ಲಂಡನ್, ಸಿಂಗಾಪುರಕ್ಕೆ ತೆರಳಿದರು. ಮುಂದೆ, ನೇತಾಜಿ ಅವರಿದ್ದ ವಿಮಾನ ಅಪಘಾತಕ್ಕೀಡಾಗಿ ಎಲ್ಲಪ್ಪ ಸಹಿತ ಎಲ್ಲಾ ನಿಕಟವರ್ತಿಗಳು ಮೃತರಾದರೆಂದು ಬಿಬಿಸಿ ರೇಡಿಯೋ ಸುದ್ದಿ ಬಿತ್ತರಿಸಿತ್ತು. ಇದನ್ನು ಕೇಳಿದ್ದ ಸೀತಮ್ಮ (ಮಕ್ಕಳಿಲ್ಲ) ತಾಯಿ ಮನೆಗೆ ಹೋಗುವೆನೆಂದು ಹೇಳಿ ಮಂಗಳೂರಿನ ದೇಗುಲವೊಂದರ ಸಮೀಪದ ಕೆರೆಯಲ್ಲಿ ತಮ್ಮ ಬದುಕಿಗೆ ಅಂತ್ಯ ಹೇಳಿದರು… ಮನೋಹರ ಪ್ರಸಾದ್