Advertisement

ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ

02:08 AM Jul 26, 2019 | sudhir |

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಲಾಗಿದೆ.

Advertisement

ಬ್ಯಾರಿ ಸಾಹಿತ್ಯ ಕ್ಷೇತ್ರ ದಲ್ಲಿ ಝುಲೇಖಾ ಮುಮ್ತಾಝ್, ಬ್ಯಾರಿ ಕಲಾ ಕ್ಷೇತ್ರದಲ್ಲಿ ಖಾಲಿದ್‌ ತಣ್ಣೀರುಬಾವಿ ಮತ್ತು ಬ್ಯಾರಿ ಜಾನಪದ ಕ್ಷೇತ್ರಗಳಲ್ಲಿ ನೂರ್‌ ಮುಹಮ್ಮದ್‌ ಅವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಇದೇ ರೀತಿ, ಮುಹಮ್ಮದ್‌ (ಜೀವರಕ್ಷಕ) ಮತ್ತು ಬಿ.ಎಂ. ಉಮ್ಮರ್‌ ಹಾಜಿ (ಸಮಾಜ ಸೇವೆ) ಅವರನ್ನು ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ಕರಂಬಾರ್‌ ಮುಹಮ್ಮದ್‌ ಅವರು ಗುರುವಾರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ವಿಜೇತರು

ಝುಲೇಖಾ ಮುಮ್ತಾಝ್: ಕೆ. ಕಾಟುಬಾವ ಮತ್ತು ಆಯಿಶಾ ದಂಪತಿಯ ಪುತ್ರಿ ಝುಲೇಖಾ ಹತ್ತನೇ ತರಗತಿಯವರೆಗೆ ಕಲಿತಿದ್ದಾರೆ. ಇವರ ಹಲವಾರು ಬರಹಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬ್ಯಾರಿ ಸಾಹಿತ್ಯ ಸ್ಪರ್ಧೆ, ಓದುವ ಸ್ಪರ್ಧೆ, ಗಾದೆ ಸ್ಪರ್ಧೆ, ಚುಟುಕು ಸ್ಪರ್ಧೆ, ಅನುವಾದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ. ಇವರು ಬ್ಯಾರಿ ಅಕಾಡಮಿಯ ಗೌರವ ಪ್ರಶಸ್ತಿಗೆ ಭಾಜನರಾದ ಪ್ರಥಮ ಮಹಿಳಾ ಸಾಹಿತಿ.

ಖಾಲಿದ್‌ ತಣ್ಣೀರುಬಾವಿ: 42 ವರ್ಷಗಳಿಂದ ಬ್ಯಾರಿ ಮತ್ತು ತುಳು ಭಾಷೆಯಲ್ಲಿ ಸಂಗೀತ-ಗಾಯನದಲ್ಲಿ ತೊಡಗಿಸಿಕೊಂಡಿರುವ ಖಾಲಿದ್‌ ತಣ್ಣೀರುಬಾವಿ ಅವರು ಮಂಗಳೂರು ಆಕಾಶವಾಣಿ – ದೂರದರ್ಶನದಲ್ಲಿ ನೂರಾರು ಹಾಡುಗಳನ್ನು ಹಾಡಿದ್ದಾರೆ.ಬ್ಯಾರಿ ಮತ್ತು ತುಳು ಭಾಷೆಯಲ್ಲಿ ಹಲವು ಗೀತೆಗಳು ಸಿಡಿ ಆಗಿ ಬಿಡುಗಡೆಗೊಂಡಿವೆ. ದ.ಕ. ಜಿಲ್ಲಾ ರಾಜ್ಯೋ ತ್ಸವ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿಯ ಬ್ಯಾರಿ ಸಿರಿ ಸಮ್ಮಾನ ಸೇರಿದಂತೆ ಹಲವು ಪ್ರಶಸ್ತಿ-ಸಮ್ಮಾನಗಳನ್ನು ಪಡೆದುಕೊಂಡಿದ್ದಾರೆ.

Advertisement

ನೂರ್‌ ಮುಹಮ್ಮದ್‌: ದಫ್ ಕಲಾರಂಗದಲ್ಲಿ ಪ್ರಸಿದ್ಧಿ ಪಡೆದಿರುವ ಇವರು ತನ್ನ 10ನೇ ವಯಸ್ಸಿನಲ್ಲಿಯೇ ದಫ್ ಕಲೆಯನ್ನು ಅಂದಿನ ಖ್ಯಾತ ದಫ್ ಉಸ್ತಾದ್‌ ಡಾ| ಎಂ.ಬಿ. ಮುಹಮ್ಮದ್‌ ಮಂಜನಾಡಿ ಬಳಿ ಕಲಿತರು. 1990ರಲ್ಲಿ ಮುಲ್ಕಿ ಜಮಾಅತಿನ ಅಂಗರಗುಡ್ಡೆ ಎಂಬಲ್ಲಿ ಶಾಲೆಯ ಮಕ್ಕಳಿಗೆ ದಫ್ ಕಲಿಸುವ ಮೂಲಕ ಗಮನ ಸೆಳೆದರು. ಬಳಿಕ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಾದ್ಯಂತ 200 ಕ್ಕಿಂತಲೂ ಹೆಚ್ಚಿನ ಊರುಗಳಲ್ಲಿ 5 ಸಾವಿರಕ್ಕೂ ಅಧಿಕ ಮಂದಿಗೆ ದಫ್ ಕಲೆಯನ್ನು ಕಲಿಸಿದ್ದಾರೆ. ಬ್ಯಾರಿ, ಕನ್ನಡ, ಮಲಯಾಳಂ, ಹಿಂದಿ, ಇಂಗ್ಲಿಷ್‌ ಭಾಷೆಗಳಲ್ಲಿ ಹಾಡಿ ಜನಮನ ಗೆದ್ದಿದ್ದಾರೆ. 2008ರಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ದಫ್ ವೀಡಿಯೋ ಆಲ್ಬಂ ಹೊರತಂದಿದ್ದಾರೆ.

ಗೌರವ ಪುರಸ್ಕೃತರು

ಮುಹಮ್ಮದ್‌: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮುಹಮ್ಮದ್‌ ಅವರು ಉಪ್ಪಿನಂಗಡಿ ಸಹಸ್ರಲಿಂಗೇಶ್ವ ದೇವಾಲಯದ ಬಳಿ ಜೀವರಕ್ಷಕರಾಗಿ ನಿಯುಕ್ತಿಗೊಂಡಿ ದ್ದಾರೆ. ನೇತ್ರಾವತಿಯ ತುಂಬಿದ ನೆರೆ ನೀರಿನಲ್ಲಿ ಜೀವದ ಹಂಗು ತೊರೆದು ಪದ್ಮುಂಜ ಸಿ.ಎ. ಬ್ಯಾಂಕ್‌ ಮ್ಯಾನೇಜರ್‌ ತಿಮ್ಮಯ್ಯಗೌಡರನ್ನು ಪಾರು ಮಾಡಿದ್ದರು. ಶಾಂತಿಮೊಗರಿನಲ್ಲಿ ನೀರಿಗೆ ಬಿದ್ದ ಮೂವರ ಪೈಕಿ ಇಬ್ಬರ ಶವ ಮೇಲೆ ತ್ತಿರುವುದು, 2018ರ ಆಗಸ್ಟ್‌ನಲ್ಲಿಇಚ್ಲಂಪಾಡಿಯಲ್ಲಿ ನೆರೆಯಲ್ಲಿ ಸಿಲು ಕಿದ್ದ ಇಬ್ಬರು ಮಹಿಳೆಯರನ್ನು ಪಾರು ಮಾಡಿದ್ದು, ಪಯಸ್ವಿನಿ ನದಿಯಲ್ಲಿ ಹಲವು ಯುವಕರ ಜೀವ ರಕ್ಷಣೆ ಮಾಡಿದ್ದು ಸಾಧನೆ.

ಬಿ.ಎಂ. ಉಮ್ಮರ್‌ ಹಾಜಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಸವಾನಿಯಲ್ಲಿ ಜನಿಸಿದ ಬಿ.ಎಂ. ಉಮ್ಮರ್‌ ಉದ್ಯೋಗ ಅರಸಿ ಮಂಗಳೂರಿಗೆ ಬಂದು ಗ್ರಾನೈಟ್ ರಪ್ತುದಾರರೊಂದಿಗೆ ಸೇರಿಕೊಂಡರು. 2000ರಲ್ಲಿ ಸ್ವಂತ ಉದ್ಯಮಕ್ಕೆ ಕೈ ಹಾಕಿದರು. ಅದರೊಂದಿಗೆ ಹೆಣ್ಣು ಮಕ್ಕಳ ಮದುವೆ ಮತ್ತು ಶಿಕ್ಷಣ ವಂಚಿತರಾದವರ ನೆರವಿಗೆ ಸಹಾಯ ಹಸ್ತ ನೀಡಿ ಗಮನ ಸೆಳೆದರು. ಮಸೀದಿ, ದೇವಸ್ಥಾನ, ಚರ್ಚ್‌ಗಳಿಗೂ ನೆರವು ನೀಡಿದರು. 12ವರ್ಷದಿಂದ ಆರ್ಥಿಕವಾಗಿ ಹಿಂದು ಳಿದ ಒಬ್ಬರನ್ನು ಉಮ್ರಾ ಯಾತ್ರೆಗೆ ಕಳುಹಿಸಿಕೊಡುತ್ತಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟ್ರಾರ್‌ ಚಂದ್ರಹಾಸ ರೈ ಬಿ., ಸದಸ್ಯರಾದ ಬಶೀರ್‌ ಬೈಕಂಪಾಡಿ, ಅಬ್ದುಲ್ ರಹ್ಮಾನ್‌ ಕುತ್ತೆತ್ತೂರು, ಹುಸೈನ್‌ ಕಾಟಿಪಳ್ಳ, ಆರೀಫ್ ಕಲ್ಕಟ್ಟ, ಹಸನಬ್ಬ ಮೂಡುಬಿದಿರೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next