Advertisement

ಪಾದಚಾರಿಗಳಿಗೆ ತಡೆ; ತಳ್ಳುಗಾಡಿಗಳಿಗೆ ಮಣೆ !

12:50 AM Jan 22, 2019 | Team Udayavani |

ಉಡುಪಿ: ದಿನವಿಡೀ ವಾಹನ, ಜನ ಜಂಗುಳಿಯಿಂದ ತುಂಬಿರುವ ಉಡುಪಿ ಸಿಟಿ ಬಸ್‌ ನಿಲ್ದಾಣ ಮತ್ತು ಸರ್ವಿಸ್‌ ಬಸ್‌ ನಿಲ್ದಾಣ ಸಂಪರ್ಕಿಸುವ ಸ್ಥಳವಾದ ಐರೋಡಿಕಾರ್‌ ಗಿಫ್ಟ್ ಸೆಂಟರ್‌ ಎದುರಿನ ಜಂಕ್ಷನ್‌ನಲ್ಲಿ ಸಂಚಾರ ಸುಗಮಗೊಳಿಸಲು ಕ್ರಮ ತೆಗೆದುಕೊಳ್ಳುವ ಬದಲು ಮತ್ತಷ್ಟು ತಳ್ಳುಗಾಡಿಗಳಿಗೆ ಅವಕಾಶ ಮಾಡಿಕೊಟ್ಟು ಸಂಕಷ್ಟ ತಂದಿಡಲಾಗಿದೆ.

Advertisement

ಸಿಟಿ ಬಸ್‌ ನಿಲ್ದಾಣದಿಂದ ಐರೋಡಿ ಜಂಕ್ಷನ್‌ವರೆಗೆ ಏಕಮುಖ ಸಂಚಾರವಿದೆ. ಆದರೆ ಸಿಟಿ ಬಸ್‌ನಿಲ್ದಾಣದಿಂದ ಮೇಲೆ ಹತ್ತಿ ಜಂಕ್ಷನ್‌ ತಲುಪುವಾಗ ಕಿದಿಯೂರು ಹೊಟೇಲ್‌ ರಸ್ತೆ, ಸಿಟಿ ಬಸ್‌ ನಿಲ್ದಾಣ ಮೇಲಾºಗದ ರಸ್ತೆ, ಹೂವಿನ ಮಾರ್ಕೆಟ್‌ ರಸ್ತೆಗಳು ಸಂಧಿಸುತ್ತವೆ. ಹಾಗಾಗಿ ಇಲ್ಲಿ ವಾಹನ ದಟ್ಟಣೆ ನಿರಂತರವಾಗಿರುತ್ತದೆ. ಮಾತ್ರವಲ್ಲದೆ ಪಾದಚಾರಿಗಳು ಕೂಡ ಭಾರೀ ಪ್ರಯಾಸದಿಂದ ಅಪಾಯಕಾರಿಯಾಗಿ ರಸ್ತೆ ದಾಟುವ ಸ್ಥಿತಿ ಇದೆ. ಈ ಕುರಿತು “ಉದಯವಾಣಿ’ ಗಮನ ಸೆಳೆದಿತ್ತು. ಆ ಬಳಿಕ ಇಲ್ಲಿ ಕೆಲವೊಮ್ಮೆ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. 

ರಿಬ್ಬನ್‌ ಕಟ್ಟಿ ದಾರಿ ಬಂದ್‌ 
ಸರ್ವಿಸ್‌ ಬಸ್‌ ನಿಲ್ದಾಣ ಕಡೆಯಿಂದ ಜಂಕ್ಷನ್‌ ಆಗಿ ಸಿಟಿ ಬಸ್‌ ನಿಲ್ದಾಣ ಕಡೆಗೆ(ಉಡುಪಿ-ಮಣಿಪಾಲ ಹೆದ್ದಾರಿ) ವಾಹನಗಳು ಸಂಚರಿಸುವುದನ್ನು ನಿಷೇಧಿಸಿ ಮೇಲ್ಭಾಗದಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಆದರೆ ಇತ್ತೀಚೆಗೆ ಇಲ್ಲಿ ಬ್ಯಾರಿಕೇಡ್‌ಗಳ ಎಡೆಯಲ್ಲಿಯೇ ಎರಡೆರಡು ತಳ್ಳುಗಾಡಿಗಳನ್ನು ನಿಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಕೆಲವು ದಿನಗಳ ಹಿಂದೆ ಬ್ಯಾರಿಕೇಡ್‌ನ‌ ನಡುವೆ ಜನರ ಓಡಾಟಕ್ಕೆ ಇದ್ದ ಅವಕಾಶಕ್ಕೂ ತಡೆಯೊಡ್ಡಲಾಗಿದೆ. ಬ್ಯಾರಿಕೇಡ್‌ಗಳ ನಡುವೆ ಜನರ ಸಂಚಾರ ಇದ್ದ ಜಾಗಕ್ಕೆ ಪೊಲೀಸರು ರಿಬ್ಬನ್‌ ಕಟ್ಟಿದ್ದಾರೆ. ಹಾಗಾಗಿ ಒಂದಷ್ಟು ಸಾವಕಾಶವಾಗಿ ಜಂಕ್ಷನ್‌ ದಾಟಲು ಇದ್ದ ಸ್ಥಳಾವಕಾಶವನ್ನು ಕೂಡ ಮುಚ್ಚಿದಂತಾಗಿದೆ. 

ಸಾರ್ವಜನಿಕರ ಅಸಮಾಧಾನ 
ಇಲ್ಲಿ ತಳ್ಳುಗಾಡಿಗಳ ಜತೆಗೆ ಕೆಲವೊಮ್ಮೆ ಇತರ ಸಣ್ಣ ಟೆಂಪೋಗಳಲ್ಲಿ ಕೂಡ ಹಣ್ಣು ಹಂಪಲು, ತರಕಾರಿ, ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತದೆ. ಮೊದಲೇ ಸಂಕೀರ್ಣವಾಗಿರುವ ಸ್ಥಳದಲ್ಲಿ ತಳ್ಳುಗಾಡಿಗಳಿಗೆ ಅವಕಾಶ ಕೊಟ್ಟಿರುವುದಕ್ಕೆ, ಪಾದಚಾರಿಗಳ ಓಡಾಟಕ್ಕೆ ಇದ್ದ ಸ್ಥಳಾವಕಾಶವನ್ನು ಕೂಡ ಮುಚ್ಚಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಝೀಬ್ರಾ ಕ್ರಾಸ್‌ ಇಲ್ಲ
ಐರೋಡಿಕಾರ್‌ ಗಿಫ್ಟ್ ಸೆಂಟರ್‌ ಪಕ್ಕದಲ್ಲಿ ಮಾತ್ರ ಫ‌ುಟ್‌ಪಾತ್‌ ಇದೆ. ಅದು ಕೂಡ ಕಿರಿದಾಗಿದೆ. ಇನ್ನೊಂದು ಬದಿಯಲ್ಲಿ ಫ‌ುಟ್‌ಪಾತ್‌ ಇಲ್ಲ. ರಸ್ತೆ ದಾಟುವುದಕ್ಕಾಗಿ ಝೀಬ್ರಾ ಕ್ರಾಸ್‌ ಕೂಡ ಇಲ್ಲ. ಎತ್ತರದಲ್ಲಿರುವ ಸರ್ವಿಸ್‌ ಬಸ್‌ ನಿಲ್ದಾಣವನ್ನು ಹತ್ತಲು ಅತ್ತ ಕಿದಿಯೂರು ಹೊಟೇಲ್‌ ಎದುರು ಭಾಗ ಹಾಗೂ ಇತ್ತ  ಸಿಟಿ ಬಸ್‌ ನಿಲ್ದಾಣ ಕಡೆಯಿಂದ(ಉಡುಪಿ-ಮಣಿಪಾಲ ಹೆದ್ದಾರಿ)  ಬಸ್‌ಗಳು ವೇಗವಾಗಿ ನುಗ್ಗುತ್ತವೆ. ಇತರ ವಾಹನಗಳು ಕೂಡ ಸೇರಿ ಭಾರೀ ದಟ್ಟಣೆ ಉಂಟಾಗುತ್ತದೆ.

Advertisement

ಮತ್ತಷ್ಟು ದಟ್ಟಣೆ?
ಇಲ್ಲಿನ ಹಳೆ ಡಿಡಿಪಿಐ ಕಚೇರಿ ಜಾಗದಲ್ಲಿ ಕೆಎಸ್‌ಆರ್‌ಟಿಸಿ (ನರ್ಮ್) ಬಸ್‌ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣಗೊಳ್ಳುತ್ತಿದೆ. ಈ ಕಟ್ಟಡ ಪೂರ್ಣಗೊಂಡ ಅನಂತರ ಇಲ್ಲಿ ವಾಹನ, ಜನದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಅಲ್ಲದೆ ಸಿಟಿ ಬಸ್‌ ನಿಲ್ದಾಣ ಕೂಡ ಹೊಸದಾಗಿ ನಿರ್ಮಾಣಗೊಳ್ಳುವ ಯೋಜನೆಗಳಿವೆ. ಹಾಗಾಗಿ ಇಲ್ಲಿನ ಜನ, ವಾಹನ ಸುಗಮ ಸಂಚಾರಕ್ಕೆ ಈಗಲೇ ಶಾಶ್ವತ ಯೋಜನೆ ರೂಪಿಸುವುದು ಅಗತ್ಯ ಎನ್ನುತ್ತಾರೆ ಈ ಭಾಗದಲ್ಲಿ ನಿತ್ಯ ಓಡಾಡುವವರು.

ಫ‌ೂಟ್‌ ಬ್ರಿಡ್ಜ್ ಪರಿಹಾರ
ಸರ್ವಿಸ್‌ ಮತ್ತು ಸಿಟಿ ಬಸ್‌ ನಿಲ್ದಾಣಗಳ ನಡುವೆ ಓಡಾಡುವವರ ಸುರಕ್ಷತೆಗಾಗಿ ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ಇಲ್ಲಿ ಪಾದಚಾರಿಗಳು ಓಡಾಡಲು ಫ‌ೂಟ್‌ ಬ್ರಿಡ್ಜ್ ನಿರ್ಮಿಸುವುದೇ ಪರಿಹಾರ. ತಾತ್ಕಾಲಿಕ ಪರಿಹಾರವಾಗಿ ಇಲ್ಲಿ ಅಗತ್ಯ ಪುಟ್‌ಪಾತ್‌, ಝೀಬ್ರಾ ಕ್ರಾಸ್‌ ಮಾರ್ಕ್‌ ಹಾಕಬೇಕು. ತಳ್ಳುಗಾಡಿಗಳನ್ನು ತೆರವುಗೊಳಿಸಬೇಕು.
– ರಾಜಶೇಖರ್‌, ಪಾದಚಾರಿ, ಖಾಸಗಿ ಸಂಸ್ಥೆ ಉದ್ಯೋಗಿ

Advertisement

Udayavani is now on Telegram. Click here to join our channel and stay updated with the latest news.

Next