ಕುಮಟಾ: ಎರಡು ವರ್ಷಗಳ ಹಿಂದೆ ತಾಲೂಕಿನ ಮಿರ್ಜಾನ್ ಬಳಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ಐಆರ್‌ಬಿ ಕಂಪೆನಿ ಸ.ಹಿ.ಪ್ರಾ. ಶಾಲೆ ಆವಾರದ ತಡೆಗೋಡೆ ಕೆಡವಿದ್ದು, ಇದುವರೆಗೂ ಮರುನಿರ್ಮಾಣ ಮಾಡಿಕೊಡದ ಬಗ್ಗೆ ಶಾಲೆ ಆಡಳಿತ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಶಾಲೆ 1932 ರಲ್ಲಿ ಸ್ಥಾಪನೆಯಾಗಿದ್ದು, ಶತಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿದೆ. ಈ ಶಾಲೆ ಬೆಳ್ಳಿಹಬ್ಬ, ಸುವರ್ಣ ಮಹೋತ್ಸವ, ವಜ್ರಮಹೋತ್ಸವ ಆಚರಿಸಿಕೊಂಡಿಲ್ಲ. ಇದರಿಂದಾಗಿ ಸ್ಮಾರ್ಟ್‌ಕ್ಲಾಸ್, ಕಂಪ್ಯೂಟರ್ ಶಿಕ್ಷಣದಂತಹ ವಿಶೇಷ ಸೌಲಭ್ಯಗಳಿಲ್ಲವಾಗಿದೆ. ಈ ಹಿಂದೆ ಐಆರ್‌ಬಿ ಕಂಪೆನಿಯವರು ರಸ್ತೆ ಅಗಲೀಕರಣದ ಕಾರಣಕ್ಕೆ ಆವಾರದ ಗೋಡೆ ನೆಲಸಮಗೊಳಿಸಿದ್ದು, ಆ ಸಮಯದಲ್ಲಿ ಆದಷ್ಟು ಶೀಘ್ರ ಆವಾರ ತಡೆಗೋಡೆ ನಿರ್ಮಿಸಿಕೊಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು.
ಇದರ ಹಣ ಜಿಪಂಗೆ ಜಮಾ ಆಗಿದೆ ಆದರೆ ಕಂಪೌಂಡ್ ಭಾಗ್ಯ ಮಾತ್ರ ಶಾಲೆಗೆ ದೊರೆಯದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತಂತೆ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಸಭೆ ಸೇರಿ ತಹಶೀಲ್ದಾರ್, ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ, ಆದಷ್ಟು ಶೀಘ್ರದಲ್ಲಿ ಆವಾರದ ಗೋಡೆ ನಿರ್ಮಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದರು.
ಆ ಸಮಯದಲ್ಲಿ ಉಪವಿಭಾಗಾಧಿಕಾರಿ ಗಳಾಗಿದ್ದ ಪ್ರೀತಿ ಗೆಲ್ಹೋಟ್ ಸ್ಥಳ ಪರಿಶೀಲನೆ ನಡೆಸಿ, ಕಂಪೌಂಡ್ ನಿರ್ಮಿಸಿ ಕೊಡುವ ಬಗ್ಗೆ ಭರವಸೆ ಕೂಡ ನೀಡಿದ್ದರು. ಆದರೆ ಅವರು ವರ್ಗಾವಣೆಗೊಂಡಿದ್ದು, ಭರವಸೆ ಮಾತ್ರ ಹಾಗೆಯೇ ಉಳಿದಿದೆ. ಶಾಲಾ ಕಂಪೌಂಡ್ ನಿರ್ಮಾಣಕ್ಕೆ ನೀಡಿದ ಪರಿಹಾರದ ಮೊತ್ತ ಜಿಲ್ಲಾಡಳಿತಕ್ಕೆ ಜಮೆಯಾಗಿದೆ ಎಂದು ತಿಳಿದುಬಂದಿದ್ದು, ಈ ಹಣ ವಿನಿಯೋಗಿಸಿ ಯಾವ ಕಾರಣಕ್ಕೆ ಕಂಪೌಂಡ್ ನಿರ್ಮಿಸಲು ಮುಂದಾಗುತ್ತಿಲ್ಲವೆಂಬುದೇ ಯಕ್ಷ ಪ್ರಶ್ನೆಯಾಗಿದೆ.
ಶಾಲೆಯ ಭದ್ರತೆಗೆ ಕಂಪೌಂಡ್ ಆಧಾರವಾಗಿದ್ದು, ಶಾಲಾ ಸುರಕ್ಷತೆ ಹಾಗೂ ಸೌಂದರ್ಯಕ್ಕೆ ಕಂಪೌಂಡ್ ಅತ್ಯವಶ್ಯಕ. ತಡೆಗೋಡೆ ಭದ್ರವಾಗಿ ನೆಲೆಯೂರಿದರೆ ಶಾಲೆಯಲ್ಲಿ ಮಕ್ಕಳು ಕೈಯಾರೆ ಪ್ರೀತಿಯಿಂದ ಬೆಳೆಸಿದ ಹೂವಿನಗಿಡಗಳು ಸುಂದರವಾಗಿ ಕಾಣಲು ಸಾಧ್ಯ. ತಡೆಗೋಡೆಯಿಲ್ಲದ ಕಾರಣ ದನ-ಕರುಗಳು ಅದನ್ನು ಹಾಳುಗೆಡುವುತ್ತಿವೆ. ಅಲ್ಲದೇ ಕೌಂಪೌಂಡ್ ಇಲ್ಲದ ಶಾಲೆಯಲ್ಲಿ ಭಿಕ್ಷುಕರ ವಾಸಸ್ಥಾನವಾಗಿ ಗಲೀಜು ನಿರ್ಮಾಣವಾಗುತ್ತದೆ ಎನ್ನುತ್ತಾರೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಮನಾಥ ಬಾಬು ನಾಯ್ಕ. ಶಾಲೆಯ ಆವಾರದ ತಡೆಗೋಡೆ ನಿರ್ಮಿಸಲು ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಏನೂ ಪ್ರಗತಿ ಕಾಣದೇ ಇರುವುದರಿಂದ ಶಾಲಾ ವಿದ್ಯಾರ್ಥಿಗಳೇ ಜಾಗೃತರಾಗಿ, ತಮ್ಮ ಶಾಲೆಗೆ ವಜ್ರ ಮಹೋತ್ಸವ ಆಚರಿಸುವ ಮುನ್ನವೇ ಕಂಪೌಂಡ್ ನಿರ್ಮಿಸಿಕೊಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿರುವುದು ವಿಶೇಷವಾಗಿದೆ. ಈ ಬಗ್ಗೆ ಸಂಬಂಸಿದ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕೆಂಬುದು ಹಲವರ ಆಶಯವಾಗಿದೆ.