ತೀರ್ಥಹಳ್ಳಿ: ಕುರುವಳ್ಳಿ – ಬಾಳೇಬೈಲಿನ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ನಿರ್ಮಿಸಿರುವ 56 ಕೋಟಿ ರೂ ವೆಚ್ಚದ ತುಂಗಾ ಸೇತುವೆಯ ಬೈಪಾಸ್ ರಸ್ತೆಯ ತಡೆಗೋಡೆಗಳು ಮತ್ತೊಮ್ಮೆ ಕುಸಿದು ಬಿದ್ದಿದೆ. ಮಂಗಳವಾರ ರಾತ್ರಿ ಕುಸಿದು ಬಿದ್ದ ಸ್ಥಳದ ಎದುರು ಭಾಗದಲ್ಲಿ ಮತ್ತೆ ಕುಸಿದು ಬಿದ್ದಿದೆ.
ಈಗ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಿಂದ ಮಣ್ಣು ತೆರವು ಕಾರ್ಯ ಆರಂಭವಾಗಿದ್ದು ಹಿಟಾಚಿ ಯಂತ್ರದ ಮೂಲಕ ಮಣ್ಣು ತೆರವಿನ ಕಾರ್ಯಾಚರಣೆ ಭರದಿಂದ ಮಾಡಲಾಗುತ್ತಿದೆ. ಹತ್ತಾರು ಟಿಪ್ಪರ್ ವಾಹನಗಳ ಮೂಲಕ ಸಿಬ್ಬಂದಿಗಳು ಮಣ್ಣು ಸಾಗಿಸುತ್ತಿದ್ದಾರೆ.
ಮಣ್ಣು ಕುಸಿತದ ಜಾಗದಲ್ಲಿ ಬೆಳಿಗ್ಗೆಯಿಂದ ಕಾರ್ಯಾಚರಣೆ ಆರಂಭಗೊಂಡಿದೆ. ಮಳೆಯ ನಡುವೆ ಮಣ್ಣು ತೆರವಿನ ಕೆಲಸ ಮುಂದುವರೆದಿದೆ.
ಬೈಪಾಸ್ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಈಗಾಗಲೇ ನಿರ್ಬಂಧ ವಿಧಿಸಲಾಗಿದೆ. ಸೋಮವಾರ ಗುಡ್ಡ ಕುಸಿಯುವ ಹಂತಕ್ಕೆ ತಲುಪಿ ಮಂಗಳವಾರ ಸಂಜೆ ವೇಳೆ ಕುಸಿದು ಬಿದ್ದಿತ್ತು. ಇದರ ಬೆನ್ನಲ್ಲೇ ಎದುರು ಭಾಗದಲ್ಲಿ ಮತ್ತೊಮ್ಮೆ ತಡೆಗೋಡೆ ಕುಸಿತ ಉಂಟಾಗಿದೆ. ಕುಸಿತ ಉಂಟಾದ ಸ್ಥಳದಲ್ಲಿ ಮಾವಿನ ಮರವೊಂದು ಉರುಳಿ ಬಿದ್ದಿದೆ.56 ಕೋಟಿ ವೆಚ್ಚದ ಕಾಮಗಾರಿ ನೀರಲ್ಲಿ ಹೋಮ ಮಾಡಿದಂತೆ ಆಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಉದ್ಘಾಟನೆಗೊಂಡು ಕೆಲವೇ ತಿಂಗಳ ಒಳಗಾಗಿ ತಡೆಗೋಡೆ ಮುರಿದು ಬಿದ್ದಿದ್ದು ಇದು ಅವೈಜ್ಞಾನಿಕ ಕಾಮಗಾರಿ ಎಂದು ಆರೋಪ ಮಾಡುತ್ತಿದ್ದಾರೆ. ಈಗಾಗಲೇ ಉದ್ಘಾಟನೆಗೊಂಡಿರುವ ಪೊಲೀಸ್ ಠಾಣೆ ಹಾಗೂ ಗ್ರಾಮೀಣಾಭಿವೃದ್ಧಿ ಭವನ ಸೋರುವಿಕೆ ಎಂಬ ಆರೋಪಕ್ಕೆ ಮಲೆನಾಡಿನಲ್ಲಿ ಇದು ಮಾಮೂಲಿ ಎಂಬ ಸಬೂಬು ನೀಡಿದ್ದ ಜನಪ್ರತಿನಿಧಿಗಳು ಈ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಏನಂತಾರೆ? ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಈ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Bidar; ಪ್ರೇಮ ವೈಫಲ್ಯದಿಂದ ಖಿನ್ನತೆ: ಯುವಕನಿಂದ ಮಹಾರಾಷ್ಟ್ರದ ಬಸ್ ಗೆ ಕಲ್ಲುತೂರಾಟ!