Advertisement

ರೈಲ್ವೆ ನಿಲ್ದಾಣ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್‌ ಅಳವಡಿಕೆ

10:55 AM Oct 13, 2018 | Team Udayavani |

ಶಹಾಬಾದ: ನಗರದ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದಲ್ಲಿ ವಾಹನಗಳು ಪ್ರವೇಶಿಸದಂತೆ ರೈಲ್ವೆ ಇಲಾಖೆ ಕಬ್ಬಿಣದ ಕಂಬಗಳನ್ನು (ಬ್ಯಾರಿಕೇಡ್‌) ಹಾಕಿದ್ದರಿಂದ ಸ್ಥಳೀಯ ಜನರು ತಕರಾರು ವ್ಯಕ್ತಪಡಿಸಿದ್ದಲ್ಲದೆ ರೈಲ್ವೆ ಅಧಿಕಾರಿಗಳೊಂದಿಗೆ
ವಾಗ್ವಾದ ನಡೆಸಿದ ಪ್ರಸಂಗ ಶುಕ್ರವಾರ ನಡೆಯಿತು.

Advertisement

ನಗರದ ಮುಖ್ಯ ದ್ವಾರದಲ್ಲಿ ರೈಲ್ವೆ ಸಿಬ್ಬಂದಿ ಕಬ್ಬಿಣದ ಕಂಬಗಳನ್ನು ಹಾಕಿದ್ದರಿಂದ, ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕರ ವಾಹನಗಳು ಹೋಗದಂತಾಗಿದೆ. ಅಲ್ಲದೇ ಅನಾರೋಗ್ಯ ಪೀಡಿತರನ್ನು ಕರೆದುಕೊಂಡು ಹೋಗಲು
ಅನಾನುಕೂಲವಾಗುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. 

ಈಗಾಗಲೇ ರೈಲ್ವೆ ಇಲಾಖೆಯಿಂದ ವಾಹನಗಳ ನಿಲುಗಡೆಗಾಗಿ ಶುಲ್ಕ ವಸೂಲಿ ಮಾಡಲು ಟೆಂಡರ್‌ ಆಹ್ವಾನಿಸಲಾಗಿತ್ತು. ಆದರೆ ಯಾರೊಬ್ಬರೂ ಟೆಂಡರ್‌ನಲ್ಲಿ ಭಾಗವಹಿಸಿರಲಿಲ್ಲ. ಇದರಿಂದ ಸೊಲ್ಲಾಪುರ ವಿಭಾಗೀಯ ರೈಲ್ವೆ ಅಧಿಕಾರಿಯ ಸೂಚನೆಯಂತೆ ವಾಹನಗಳು ಒಳಗಡೆ ಪ್ರವೇಶಿಸದಂತೆ ಕಬ್ಬಿಣದ ಕಂಬಗಳನ್ನು ಅಳವಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಥಳೀಯ ರೈಲ್ವೆ ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದರು. ಮಾಜಿ ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ, ನಗರಸಭೆ ಸದಸ್ಯರಾದ ಡಾ| ಅಹ್ಮದ್‌ ಪಟೇಲ್‌, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶರಣು
ಪಗಲಾಪುರ, ಮಹ್ಮದ್‌ ಅಜರ್‌, ನಾಗರಾಜ ಮೇಲಗಿರಿ, ಸಯ್ಯದ್‌ ಜಹೀರ್‌ ಸೇರಿದಂತೆ ಅನೇಕ ಜನರು ಕಬ್ಬಿಣದ ಕಂಬಗಳನ್ನು ತೆಗೆಯುವಂತೆ ಪಟ್ಟುಹಿಡಿದು ಪ್ರತಿಭಟನೆ ನಡೆಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಡಿವೈಎಸ್‌ಪಿ ಮಹೇಶ ಮೇಘಣ್ಣನವರ್‌, ನಗರ ಸಿಪಿಐ ಕಪಿಲ್‌ ದೇವ್‌, ರೇಲ್ವೆ ಪಿಎಸ್‌ಐ ವೀರಭದ್ರಪ್ಪ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ವಾತಾವರಣ ತಿಳಿಗೊಳಿಸಿದರು.
 
ರೈಲ್ವೆ ಡಿವೈಎಸ್‌ಪಿ ಮಹೇಶ ಮೇಘಣ್ಣನವರ್‌ ಅವರು ಸೊಲ್ಲಾಪುರ ಎಡಿಆರ್‌ಎಂ ಜತೆಗೆ ಮೊಬೈಲ್‌ ಮುಖಾಂತರ ಚರ್ಚೆ ನಡೆಸಿ, ಇಲ್ಲಿನ ವಾತಾವರಣದ ಕುರಿತು ಮನವರಿಗೆ ಮಾಡಿದರು. ಆದರೂ ಅಧಿಕಾರಿಗಳು ಮಾತ್ರ ಬ್ಯಾರಿಕೇಡ್‌
ಗಳನ್ನು ತೆಗೆಯಲು ನಿರಾಕರಿಸಿದರು. ನಂತರ, ಇನ್ನು ಮುಂದೆ ಯಾವುದೇ ರೀತಿ ವಾಹನ ನಿಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next