Advertisement

ವಾಯುಭಾರ ಕುಸಿತ: ಕರಾವಳಿ ಕಾವಲು ಪಡೆ ಸನ್ನದ್ಧ

07:18 AM Jun 07, 2023 | Team Udayavani |

ಉಡುಪಿ/ಮಂಗಳೂರು: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತವಾಗಿ ಮಾರ್ಪಾಡುವ ಸಾಧ್ಯತೆ ಇರುವುದರಿಂದ ಮತ್ತು ಮಳೆಗಾಲ ಸಮೀಪಿಸುತ್ತಿವ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪಡೆ ಹೆಚ್ಚುವರಿ ಪರಿಕರಗಳೊಂದಿಗೆ ರಕ್ಷಣೆಗೆ ಸನ್ನದ್ಧವಾಗಿದೆ.

Advertisement

ಬಿಪರ್‌ಜಾಯ್‌ ಚಂಡಮಾರುತದ ಹಿನ್ನೆಲೆಯಲ್ಲಿ ಜೂ. 8ರಿಂದ 10ರ ವರೆಗೆ ಕರಾವಳಿ ಭಾಗದಲ್ಲಿ ಉತ್ತಮ ಮಳೆ ಸುರಿಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಮಂಗಳೂರು, ಹೆಜಮಾಡಿ, ಮಲ್ಪೆ, ಗಂಗೊಳ್ಳಿ, ಭಟ್ಕಳ, ಹೊನ್ನಾವರ, ಕುಮಟಾ, ಬೇಲಿಕೆರೆ, ಕಾರವಾರದಲ್ಲಿ ಕರಾವಳಿ ಕಾವಲು ಪಡೆಯ ಠಾಣೆಗಳಿದ್ದು, ಒಂದು ಠಾಣೆಯಲ್ಲಿ ಸರಾಸರಿ 40ಕ್ಕೂ ಅಧಿಕ ಮಂದಿ ಸಿಬಂದಿಗಳಿದ್ದಾರೆ.

ದ.ಕ. ಜಿಲ್ಲೆಯಿಂದ ಕಾರವಾರದವರೆಗೆ ಸುಮಾರು 324 ಕಿ.ಮೀ. ವ್ಯಾಪ್ತಿ ಹೊಂದಿರುವ ಕಡಲತೀರ ಪ್ರದೇಶದಲ್ಲಿ ಸ್ಥಳೀಯ ಮೀನುಗಾರ ರೊಂದಿಗೆ ಕರಾವಳಿ ಕಾವಲು ಪಡೆಯ ಸಿಬಂದಿಯೂ ಗಸ್ತು ಕಾರ್ಯಾಚರಣೆ ನಡೆಸಲಿದ್ದಾರೆ. ಮುಖ್ಯವಾಗಿ ಹವಾಮಾನ ವೈಪರಿತ್ಯ ದಿಂದ ಉಂಟಾಗಬಹುದಾದ ಸಂಭಾವ್ಯ ಅನಾಹುತ ತಡೆಗಟ್ಟಲು ಹಾಗೂ ತುರ್ತು ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲು ವಹಿಸಬೇಕಾದ ಮುನ್ನೆಚ್ಚರಿಗಳ ಬಗ್ಗೆ ಮಾಹಿತಿ ರವಾನಿಸಲಾಗುತ್ತದೆ.

ವಿವರ ಸಂಗ್ರಹ
ಎಲ್ಲ ಠಾಣೆ ವ್ಯಾಪ್ತಿಯಲ್ಲಿ ಲೈಫ್ ಜಾಕೆಟ್‌, ಹಗ್ಗಗಳು ಸಹಿತ ಒಟ್ಟು 13 ಬೋಟುಗಳನ್ನು ಸಿದ್ಧ ಪಡಿಸಿಡಲಾಗಿದೆ. ಜಿಲ್ಲಾಡಳಿತದ “ಆಪ್ತಮಿತ್ರ’ ದೊಂದಿಗೂ ಕೈಜೋಡಿಸಲಿದೆ.ಈಗಾಗಲೇ ಕರಾವಳಿ ಭಾಗದಲ್ಲಿರುವ ಈಜುಗಾರರು ಹಾಗೂ ರಕ್ಷಣ ಕಾರ್ಯದಲ್ಲಿ ತೊಡಗಿರುವವರ ವಿವರ ಸಂಗ್ರಹಿಸಿಡಲಾಗಿದೆ.

Advertisement

ತುರ್ತು ರಕ್ಷಣೆಗೆ ಬೋಟ್‌ ಸಿದ್ಧ
ಮೂರು ಜಿಲ್ಲೆಗೆ ತಲಾ 1ರಂತೆ ತುರ್ತು ರಕ್ಷಣೆಗೆ ಬೋಟ್‌ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಮಂಗಳೂರು, ಉಡುಪಿ ಹಾಗೂ ಕಾರವಾರದಲ್ಲಿ ಡಿವೈಎಸ್‌ಪಿಗಳು ಸಮಗ್ರ ನಿರ್ವಹಣೆ ನೋಡಿಕೊಳ್ಳಲಿದ್ದಾರೆ. ಈಗಾಗಲೇ ವಿವಿಧೆಡೆ ಸ್ಕ್ವಾಡ್‌ ಮಾಡಲಾಗಿದೆ. ಹಂಗಾರಕಟ್ಟೆ ಹಾಗೂ ಮಲ್ಪೆ ಭಾಗದಲ್ಲಿ ದಿನನಿತ್ಯ ಸಿಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಸ್‌ಡಿಆರ್‌ಎಫ್ ಪಡೆಯವರೂ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ಜಿಲ್ಲಾಡಳಿತದ ವಿವಿಧ ಇಲಾಖೆಗಳೂ ಕೈ ಜೋಡಿಸಿವೆ ಎನ್ನುತ್ತಾರೆ ಸಿಬಂದಿಗಳು.

ಮುಂಗಾರು ವಿಳಂಬ ಸಾಧ್ಯತೆ
ಸದ್ಯದ ಮಾಹಿತಿಯಂತೆ ಜೂ. 7ರಂದು ಸೈಕ್ಲೋನ್‌ ಪ್ರಾರಂಭದ ಹಂತದಲ್ಲಿ ಇರಲಿದ್ದು, ಜೂ. 8ರಂದು 11.30 ಮತ್ತು ರಾತ್ರಿ 10.30ರ ವೇಳೆಗೆ ಸೈಕ್ಲೋನ್‌ ತೀವ್ರತೆ ಪಡೆದುಕೊಳ್ಳಲಿದೆ. ಜೂ. 10 ಮತ್ತು 11ರಂದು ಮತ್ತಷ್ಟು ತೀವ್ರತೆ ಪಡೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಂದು ವೇಳೆ ಚಂಡಮಾರುತ ತೀವ್ರತೆ ಪಡೆದುಕೊಂಡರೆ ರಾಜ್ಯ ಕರಾವಳಿಗೆ ಮುಂಗಾರು ಅಪ್ಪಳಿಸುವುದು ಮತ್ತಷ್ಟು ವಿಳಂಬವಾಗಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಾತಾವರಣದಲ್ಲಿರುವ ತೇವಾಂಶ ಕಡಿಮೆಯಾಗಿ ಮುಂಗಾರು ಅಪ್ಪಳಿಸಲು ಮತ್ತಷ್ಟು ದಿನ ತಗುಲಬಹುದು. ಸದ್ಯದ ಮಾಹಿತಿಯಂತೆ ರಾಜ್ಯ ಕರಾವಳಿಗೆ ಜೂನ್‌ 8ರ ವೇಳೆಗೆ ಮುಂಗಾರು ಪ್ರವೇಶ ಪಡೆಯಲಿದೆ. ಮುಂಗಾರು ಘೋಷಣೆ ಮಾಡಲು ಇರುವ ನಿಬಂಧನೆಯಂತೆ ಕೇರಳ, ಲಕ್ಷದ್ವೀಪ ಮತ್ತು ಮಂಗಳೂರು ಸೇರಿದಂತೆ 14 ಕಡೆಗಳಲ್ಲಿ ಶೇ. 60ರಷ್ಟು ಮಳೆಯಾಗಬೇಕು. ಆದರೆ ಸದ್ಯ ಶೇ. 50ರಷ್ಟು ಮಾತ್ರ ಮಳೆ ಸುರಿದಿದೆ. ಈ ನಿಬಂಧನೆ ಪೂರ್ಣಗೊಂಡ ಬಳಿಕ ಮುಂಗಾರು ಘೋಷಣೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next