Advertisement

ಬರಿಯ ನೆನಪಲ್ಲ..  ಭಾವುಕತೆಯ ಸಾರಸತ್ವ

05:49 PM Sep 12, 2021 | Team Udayavani |

ಪ್ಯಾಲೆಸ್ತೀನ್ ಎಂದ ಕೂಡಲೇ ಯಾರಿಗಾದರೂ ನೆನಪಾಗುವುದು ಅಲ್ಲಿನ ಯುದ್ಧ- ಆಕ್ರಮಣ-ಬಾಂಬು- ಹಿಂಸೆ-ರಕ್ತಪಾತ-ಅನಾಥ ಹೆಣಗಳ ರಾಶಿ..   ಇತ್ಯಾದಿ.   ಸಂವೇದನಾಶೀಲ ಮನಸ್ಸುಗಳಿಗೆ ಹೆಚ್ಚೆಂದರೆ ಯುದ್ಧದಲ್ಲಿ   ಗಾಯಗೊಂಡವರ ಮತ್ತು ತಮ್ಮವರನ್ನು ಕಳೆದುಕೊಂಡು ತಬ್ಬಲಿಗಳಾದವರ ಕರುಳಿರಿಯುವ ಆಕ್ರಂದನ ಕೇಳಬಹುದು. ಆದರೆ ಈ ಕೃತಿ ಇಂಥ ವಿಷಯಗಳನ್ನು ಹೇಳುವುದಿಲ್ಲ. 1948ರ ಇಸ್ರೇಲಿ ಆಕ್ರಮಣದಲ್ಲಿ ತಮ್ಮೆಲ್ಲ ಸ್ವಾತಂತ್ರ್ಯವನ್ನೂ ಕಳೆದುಕೊಂಡು ಬದುಕನ್ನು ಬರಡಾಗಿಸಿಕೊಂಡ ಪ್ಯಾಲೆಸ್ತೀನೀಯರ ದೈನಂದಿನ ಬದುಕಿನ ಹೃದಯ ವಿದ್ರಾವಕ ಸನ್ನಿವೇಶಗಳು ಹಾಗೂ ಅವರು ಅನುಭವಿಸುವ ಯಾತನೆಗಳು  ಅಲ್ಲಿನ ಸಾಹಿತಿಗಳ ಮೂಲಕ ಹೇಗೆ ಅಭಿವ್ಯಕ್ತಗೊಂಡಿವೆ ಎಂಬುದನ್ನು ಈ ಪುಸ್ತಕದ ಕೆನಡಾ ಮೂಲದ ಲೇಖಕ ಮಾರ್ಸೆಲೋ ಸಿನ್ಷಿಯೋ  ಆ ಪ್ರದೇಶಗಳಿಗೆ ಸ್ವತಃ ಯಾತ್ರೆ ಮಾಡಿ ಅವರನ್ನು ಭೇಟಿಯಾಗಿ ಮಾತನಾಡುವುದರ ಮೂಲಕ ನಮಗೆ ತಿಳಿಸುತ್ತಾರೆ.ಆದ್ದರಿಂದ ಇದು ಅತ್ಯಂತ ವಿಶಿಷ್ಟವಾದ ಒಂದು ಕೃತಿ. ಇದನ್ನು ಆಕರ್ಷ ರಮೇಶ್  ಕಮಲ ಅವರು ಬಹಳ ಸೊಗಸಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.

Advertisement

ಮಾರ್ಸೆಲ್ಲೋ ಸಿನ್ಷಿಯೋ ಅವರ ಈ ಕೃತಿ  ಸಮಕಾಲೀನ ಪ್ಯಾಲೆಸ್ತೀನಿ ಬದುಕನ್ನು ಅದರ ಸಾಹಿತ್ಯಕ- ಸಾಂಸ್ಕೃತಿಕ ಚಕ್ಷುಗಳ ಮೂಲಕ ನೋಡುವಂತೆ ಮಾಡುತ್ತದೆ. 1999ರಲ್ಲಿ ಸಿನ್ಷಿಯೋ ಪ್ಯಾಲೆಸ್ತೀನಿಗೆ ಭೇಟಿ ಕೊಡುತ್ತಾರೆ. ಅಲ್ಲಿನ ಕಥನಗಳೆಂದರೆ ಅಂತ್ಯವಿಲ್ಲದ ಸಂಘರ್ಷಗಳನ್ನು ನಿರೂಪಿಸುವಂಥವು. ಸಿನ್ಷಿಯೋ ಅಲ್ಲಿನ ಲೇಖಕರು, ಪುಸ್ತಕಗಳು ಮತ್ತು ಸಾಹಿತ್ಯಗಳ ಮೂಲಕ ಇನ್ನಷ್ಟು ಹೆಚ್ಚು ಸಂಕೀರ್ಣವಾದ ಕಥೆಯನ್ನು ಅನಾವರಣಗೊಳಿಸುತ್ತಾರೆ. ರಾಜಕೀಯ   ಸಂಕಥನದ ಸ್ವರೂಪವನ್ನು ಬಳಸಿ ಆಧುನಿಕ ಪ್ಯಾಲೆಸ್ತೀನಿಯರ ದೃಷ್ಟಿಯಲ್ಲಿ ಸಾಹಿತ್ಯವೆಂದರೇನು ಎಂಬುದನ್ನು ಶೋಧಿಸುತ್ತ, ಒಂದು ಶ್ರೀಮಂತ ಸಾಂಸ್ಕೃತಿಕ ಬದುಕನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಅನವರತ ಶ್ರಮಿಸುವ ಅವರ ಸಂಘರ್ಷಮಯ ಬದುಕನ್ನು ಚಿತ್ರಿಸುತ್ತಾರೆ.

ಇದನ್ನೂ ಓದಿ : ಸಾವಿಗೆದುರಾಗಿ ನಿಂತ ‘ಮರುಭೂಮಿಯ ಹೂ’ವಿನ ಘಮ…!

ಕೆನಡಾದಿಂದ ಹೊರಟು ಸುದೀರ್ಘ ಪ್ರಯಾಣ ಮಾಡಿ ಮೊದಲು ವೆಸ್ಟ್ ಬ್ಯಾಂಕಿಗೆ ಹೋಗಿ ಅಲ್ಲಿಂದ ಜೆರುಸಲೇಮ್ ಮೂಲಕ ಹಾದು ಇಸ್ರೇಲಿನಾದ್ಯಂತ ತಿರುಗಾಟ ನಡೆಸಿ ಕೊನೆಗೆ ಗಾಜಾಕ್ಕೆ ಬಂದು ಅಲ್ಲಿನ ಎಲ್ಲ ಪ್ಯಾಲೆಸ್ತೀನಿ ಕವಿಗಳು, ಲೇಖಕರು, ಗ್ರಂಥಪಾಲಕರು,  ಹಾಗೂ ಪುಸ್ತಕ ಮಾರಾಟಗಾರರನ್ನು ಭೇಟಿ ಮಾಡಿ ಅವರ ಕಣ್ಣುಗಳಿಂದ ಪ್ಯಾಲೆಸ್ತೀನ್ ಬಗ್ಗೆ ತಿಳಿಯಲು  ಪ್ರಯತ್ನಿಸುತ್ತಾರೆ. ಹೀಗೆ ಅಲ್ಲಿನ ಶ್ರೀಮಂತ ಸಂಸ್ಕೃತಿ ಹಾಗೂ ಸಾಹಿತ್ಯ ಪರಂಪರೆಗಳ ಮೂಲಕ ಪ್ರಯಾಣ ಮಾಡುತ್ತಾರೆ. ಅಲ್ಲಿನ ಮಾಧ್ಯಮಗಳ ಕಣ್ಣಿಗೆ ಬೀಳದ ಮಾನವೀಯ ಸೌಂದರ್ಯ ಅವರ ಕಣ್ಣಿಗೆ ಕಾಣಿಸುತ್ತದೆ. ಪ್ಯಾಲೆಸ್ತೀನಿಯನ್ನರ ಸೃಜನಶೀಲತೆಯನ್ನು ಸಂಭ್ರಮಿಸುತ್ತ ತಮ್ಮ ಕೃತಿಯಲ್ಲಿ ಅಲ್ಲಿನ ಕವಿಗಳಿಗೂ ಲೇಖಕರಿಗೂ ತಾರಾಪಟ್ಟವನ್ನು   ಅವರು ನೀಡುತ್ತಾರೆ.ಕಳೆದ ಸುಮಾರು ನೂರು ವರ್ಷಗಳ ವಿಚ್ಛಿದ್ರಕಾರಿ ರಾಜಕೀಯ ಕಥೆಯನ್ನು  ವಿಷಯಗಳ ವಿಸ್ತ್ರತ ಸಂಶೋಧನೆ, ಆಳವಾದ ವರದಿ, ಉತ್ಸಾಹಭರಿತ ನಿರೂಪಣೆಗಳಿಂದ ನಿರ್ವಹಿಸುವ ದಿಟ್ಟ ಕಾರ್ಯವನ್ನು ಸಿನ್ಷಿಯೋ ಮಾಡಿದ್ದಾರೆನ್ನುವುದಕ್ಕೆ ಈ ಕೃತಿಯೇ ಸಾಕ್ಷಿ.

ಸಾಹಿತ್ಯಪ್ರಿಯರ ಕಣ್ಮಣಿಗಳಾದ ಘಸ್ಸಾನ್ ಕನಫಾನಿ ಮತ್ತು ಮಹಮೂದ್ ದರ್ವಿಶ್ ಎಂಬ ಇಬ್ಬರು ಲೇಖಕರು ಈ ಕೃತಿಯ ಸುತ್ತ ಇದರ ರಕ್ಷಕರ ಹಾಗೆ ಸುತ್ತುತ್ತಿರುತ್ತಾರೆ.ಇವರಿಬ್ಬರ ಕಾವ್ಯದ ಕುರಿತಾಗಿ ಆರಂಭದಲ್ಲೇ ಬಹಳಷ್ಟು ಪುಟಗಳನ್ನು ವ್ಯಯಿಸುವ ಸಿನ್ಷಿಯೋ ಮುಂದೆ ಪ್ಯಾಲೆಸ್ತೀನಿ ಸಂಸ್ಕೃತಿಯಲ್ಲಿ ಉಳಿದುಕೊಂಡಿರುವ ಕಂದಾಚಾರಗಳನ್ನು ಕಟುವಾಗಿ ಟೀಕಿಸುವ  ಮಾಯಾ ಅಬು-ಅಲ್ಹಯ್ಯತ್ ಎಂಬ ಸ್ತ್ರೀವಾದಿ ಲೇಖಕಿಯನ್ನೂ ಪ್ಯಾಲೆಸ್ತೀನಿ ಜಾನಪದ ಕಥೆಗಳನ್ನು ಹಾಡುವ ಶರೀಫ್ ಎಂಬ  ಮಾನವ ಶಾಸ್ತ್ರಜ್ಞರನ್ನೂ  ಉಲ್ಲೇಖಿಸುತ್ತಾರೆ. ಹಿಂದೆಲ್ಲ ಈ ಜನಪದ ಹಾಡುಗಳನ್ನು ಚಳಿಗಾಲದ ಸಂಜೆಗಳಲ್ಲಿ ಅಲ್ಲಿನ ಸಾಹಿತ್ಯ ಕೆಫೆಗಳಲ್ಲಿ ನೆರೆದ ಜನರಿಗೆ ಖುಷಿ ಕೊಡುವುದಕ್ಕೋಸ್ಕರ ಮಹಿಳೆಯರೇ ಹಾಡುತ್ತಿದ್ದರೆಂದೂ    ೧೯೪೮ರ ಭಯಾನಕ ಅರಬ್-ಇಸ್ರೇಲಿ ಯುದ್ಧದ ನಂತರ ಅದು ನಿಂತು ಹೋಯಿತೆಂದೂ ಶರೀಫ್ ಹೇಳುತ್ತಾರೆ. ಮುಂದೆ ವಿಸಾಮ್ ರಫೀದಿ, ಮೂರಿದ್ ಬರ್ಗೋಟಿ, ರಾಜಿ ಬತಿಷ್, ಅಲ ಹುಲಯ್ಯಿಲ್ ಮೊದಲಾದ ಲೇಖಕರ  ಸಾಹಿತ್ಯದ ಕುರಿತೂ ತಮ್ಮ ಇನ್ನೂರು ಪುಟಗಳ ಈ ಕೃತಿಯಲ್ಲಿ    ಸಾಕಷ್ಟು ಬರೆಯುತ್ತಾರೆ.

Advertisement

ಇದನ್ನೂ ಓದಿ :  ಸಂವೇದನೆಗೆ ಧ್ವನಿಕೊಟ್ಟ ‘ಮನಸು ಅಭಿಸಾರಿಕೆ’

ಜೆರುಸಲೇಮಿನಲ್ಲಿ  ಸಿನ್ಷಿಯೋ ಖಲೀದಿ ಕುಟುಂಬದವರು ೧೨ನೆಯ ಶತಮಾನದಲ್ಲಿ ಆರಂಭಿಸಿದ್ದ ಒಂದು ಅತಿ ಪುರಾತನ ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ. ಯುದ್ಧದಲ್ಲಿ ಹಾನಿಗೊಳಗಾದ ಕಟ್ಟಡದಿಂದ ಅಳಿದುಳಿದ ಪುಸ್ತಕಗಳನ್ನು ಒಟ್ಟು ಮಾಡಿ ಕುಟುಂಬದ ಸದಸ್ಯರಲ್ಲೊಬ್ಬರು ಜೆರುಸಲೇಮಿನ ಒಂದು ಕಟ್ಟಡದಲ್ಲಿ ಆ ಸಂಗ್ರಹವನ್ನಿಟ್ಟಿರುತ್ತಾರೆ .ಇಸ್ರೆಲ್ ಸರಕಾರವು ಪ್ಯಾಲೆಸ್ತೀನಿಯರ ಮೇಲೆ ಹೇರಿದ ನಿಷೇಧಗಳ ಹೊರತಾಗಿಯೂ ಆ ಗ್ರಂಥಾಲಯ   ವಿಶೇಷವೆನ್ನುತ್ತಾರೆ ಸಿನ್ಷಿಯೋ.  ಪ್ರವಾಸದ ಕೊನೆಯಲ್ಲಿ ಗಾಜಾದಲ್ಲಿ ಅವರು ಭೇಟಿಯಾಗುವ ಹಸಿರುಡುಗೆಯ ಪುಟ್ಟ ಹುಡುಗಿ ಮರಾಮ್ ಹಾನಿಗೊಳಗಾದ ಮಸೀದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಖುರಾನಿನ ಹಾಳೆಗಳನ್ನು ಒಟ್ಟು ಮಾಡಿಡುವ ದೃಶ್ಯವು ನೆಲಸಮವಾದ ಮನೆಗಳ ಅವಶೇಷಗಳಿಂದ ಪುಸ್ತಕಗಳನ್ನು ಹೆಕ್ಕಿ ತೆಗೆದು ಜತನವಾಗಿಟ್ಟ ಪ್ಯಾಲೆಸ್ತೀನಿ ಬರಹಗಾರರನ್ನು  ಮತ್ತು ಅವರ ಪುಸ್ತಕಗಳನ್ನು ಹುಡುಕಿಕೊಂಡು ಹೋಗಲು ಹೇಗೆ ಸ್ಫೂರ್ತಿಯಾಯಿತು ಅನ್ನುವುದನ್ನು ಹೇಳಿ ಓದುಗರನ್ನು ಭಾವುಕಗೊಳಿಸುತ್ತಾರೆ.

ಜೆರುಸಲೇಮಿನಿಂದ ಸಿನ್ಷಿಯೋ ಇಸ್ರೇಲಿಗೆ ಹೋಗುತ್ತಾರೆ. ಓರ್ವ ನಗರವಾಸಿ ಪ್ಯಾಲೆಸ್ತೀನಿ ಗೆ ತನ್ನ ಮೂಲಸ್ಥಳದ ವಾಸ್ತುಶಿಲ್ಪ, ಚೆಕ್ ಪಾಯಿಂಟುಗಳು, ವಸಾಹತುಗಳು, ರಸ್ತೆ ತಡೆಗಳು, ಗುಡ್ಡ ಬೆಟ್ಟ ಹಳ್ಳಿಗಳಿಂದ ದೂರವಿದ್ದು ಇಸ್ರೇಲಿನ ಅಲ್ಪಸಂಖ್ಯಾತ ಪ್ರಜೆಯಾಗಿರುವುದೆಂದರೆ ಹೇಗನ್ನಿಸಬಹುದು ಎಂದು ಅಚ್ಚರಿ ಪಡುತ್ತಾರೆ. ಇಸ್ರೇಲಿ ಲೇಖಕರಿಗಿರುವ ಯಾವ ಸ್ವಾತಂತ್ರ್ಯವೂ ಪ್ಯಾಲೆಸ್ತೀನಿಯರಿಗಿಲ್ಲ. ಸರಕಾರದಿಂದ ಯಾವುದೇ ಅನುದಾನಗಳಿಲ್ಲ. ಆದರೆ ಅವರು ತಮ್ಮ ಸ್ವಾಭಿಮಾನ ಬಿಟ್ಟು ತಾವು ಇಸ್ರೇಲಿಗಳು ಎಂದು ಒಪ್ಪಿಕೊಂಡರೆ ಎಲ್ಲವೂ ಇದೆ. ಇದು ಅವರ ಪರಿಸ್ಥಿತಿಯ ವ್ಯಂಗ್ಯ.

ಪ್ರಸಕ್ತ ಪ್ಯಾಲೆಸ್ತೀನಿ ಸಾಹಿತ್ಯ ಬದುಕಿನ ವಸ್ತುನಿಷ್ಠ ಚಿತ್ರಣವನ್ನು ನೀಡುವಲ್ಲಿ ಸಿನ್ಷಿಯೋ ಅವರ ಈ ಯಾತ್ರೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಎರಡು ಜನಾಂಗಗಳ ಘರ್ಷಣೆಯ ವಿಚಾರದಲ್ಲಿ ಅವರು ಯಾವುದೇ ಪಕ್ಷವನ್ನು ವಹಿಸಿಕೊಂಡು ಮಾತನಾಡುವುದಿಲ್ಲ. ಆತ್ಮಹತ್ಯಾ ಬಾಂಬರುಗಳನ್ನೂ ಆಕ್ರಮಣಕಾರಿ ಯಹೂದಿಗಳನ್ನೂ ಒಂದೇ ರೀತಿಯ ಉಗ್ರಗಾಮಿಗಳೆಂದು ಅವರು ಕರೆಯುತ್ತಾರೆ. ಅವರು ವಿಸ್ತಾರವಾಗಿ ನೀಡುವ ಪ್ಯಾಲೆಸ್ತೀನಿ ಬದುಕಿನ ವಿವರಣೆಗಳೇ ಅವರ ಬದುಕನ್ನು  ಅರ್ಥ ಮಾಡಿಕೊಳ್ಳಲು ಸಾಕು. ಆಕ್ರಮಣವಾಗದೇ ಇರುವ ಕಾಲದಲ್ಲಿ ಗಾಜಾದಂತಹ ನಗರಗಳಲ್ಲಿ ಬದುಕು ಯಥಾಸ್ಥಿಯಲ್ಲಿದ್ದು   ಅಸ್ತಿತ್ವಕ್ಕಾಗಿ ನಡೆಸುವ ಹೋರಾಟವನ್ನು ಬಿಟ್ಟರೆ  ವಿಶೇಷವಾಗಿ ಏನೂ ಸಂಭವಿಸುವುದಿಲ್ಲ.

ಕೆಲವರಿಗೆ ಸಿನ್ಷಿಯೋ ಉಗ್ರಗಾಮಿಗಳ ಪರವಾಗಿದ್ದಾರೇನೋ ಅನ್ನಿಸಬಹುದು. ಅವರ ಮಾತುಗಳ ಒಳಧ್ವನಿ ಕೆಲವರಿಗೆ ಅರ್ಥವಾಗದೇ ಇರಬಹುದು. ಆದರೆ ಸೂಕ್ಷ್ಮವಾಗಿ ನೋಡಿದರೆ ಅವರಲ್ಲಿರುವ ಮಾನವೀಯ ಕಾಳಜಿ ಮತ್ತು ಮನುಷ್ಯರ ಬಗೆಗಿನ ಸಹಾನುಭೂತಿ ಗೋಚರವಾಗದೇ ಇರದು.

ಇದನ್ನೂ ಓದಿ : ಅದು ಬಿಸಿಲು ಚುಚ್ಚುವ ‘ನೆರಳು ಮರಗಳಿಲ್ಲದ ದಾರಿ’

ಕೃತಿಯೊಳಗಿನ ವಿಚಾರಗಳು ಒಂದು ಭಿನ್ನ ಸಂಸ್ಕೃತಿಗೆ ಮತ್ತು ಭಿನ್ನ ಪರಿಸ್ಥಿತಿಯನ್ನೆದುರಿಸುತ್ತಿರುವವರ ದುರಂತಮಯ ಬದುಕಿಗೆ ಒಳಪಟ್ಟಿರುವುದರಿಂದ-ಮುಖ್ಯವಾಗಿ ವ್ಯಕ್ತಿಗಳ ಮತ್ತು ಸ್ಥಳಗಳ ಹೆಸರುಗಳನ್ನು ನೆನಪಿಟ್ಟುಕೊಳ್ಳುವ ಸಮಸ್ಯೆ ಮತ್ತು  ತಮ್ಮದಾಗಿರುವ ಎಲ್ಲವನ್ನೂ ಕಳೆದುಕೊಂಡು  ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಿರುವವರ ಕೊರಗುಗಳಿಂದ ತುಂಬಿರುವುದರಿಂದ-ಇದರ ಅನುವಾದವೂ  ಒಂದು ಸವಾಲು. ಓದುವುದೂ ಕಷ್ಟ.  ಇಲ್ಲಿ ಅನೇಕ ಕವಿತೆಗಳನ್ನು ಅನುವಾದಕರು  ಅವುಗಳೊಳಗಿನ ಭಾವುಕತೆಯ ಸಾರಸತ್ವವನ್ನು ತಮ್ಮದಾಗಿಸಿಕೊಂಡು  ಬಹಳ ಸುಂದರವಾಗಿ ಮನಮುಟ್ಟುವಂತೆ ಅನುವಾದಿಸಿದ್ದಾರೆ.    ಇಂಥ ಒಂದು ವಿಶಿಷ್ಟ ಕೃತಿಯನ್ನು ಅನುವಾದಕ್ಕಾಗಿ ಆಯ್ದುಕೊಂಡ ಆಕರ್ಷ ಅವರ ಅಭಿರುಚಿಯೂ ವಿಶಿಷ್ಟವಾದದ್ದೇ.  ಇಂಥ ಅಮೂಲ್ಯ ಕೃತಿಯನ್ನು ಕನ್ನಡಕ್ಕೆ ನೀಡಿದ ಆಕರ್ಷ್ ರಮೇಶ್   ಕಮಲ ಅಭಿನಂದನಾರ್ಹರು.

-ಪಾರ್ವತಿ ಜಿ.ಐತಾಳ್

ಕೃತಿಯ ಶೀರ್ಷಿಕೆ :  ಬರಿಯ ನೆನಪಲ್ಲ ಪ್ಯಾಲೆಸ್ತೀನಿ ಭಾವುಕ ಕಥನ

ಮೂಲ ಇಂಗ್ಲಿಷ್ :  ಮಾರ್ಸೆಲೋ ದಿ ಸಿನ್ಷಿಯೋ

ಕನ್ನಡಕ್ಕೆ :  ಆಕರ್ಷ್ ರಮೇಶ್  ಕಮಲ

ಪ್ರಕಟಣೆ : ಕಥನ ಪ್ರಕಾಶನ

ಪ್ರ.ವರ್ಷ : 2021

ಇದನ್ನೂ ಓದಿ : ನಾಝಿಗಳ ಗ್ಯಾಸ್ ಚೇಂಬರಿನಲ್ಲಿ ಸುಟ್ಟು ಹೊಳೆದ ಚಿನ್ನ ‘ಆ್ಯನ್’ 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next