ಲಕ್ನೋ: ಪರಸ್ಪರ ಪ್ರೀತಿಸಿ ಇನ್ನೇನು ಕೆಲವೇ ಗಂಟೆಗಳಲ್ಲಿ ಮದುವೆ ಎನ್ನುವಾಗಲೇ ವರನೊಬ್ಬ ಮದುವೆ ಮಂಟಪಕ್ಕೆ ಬಾರದೇ ಪರಾರಿಯಾಗಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿರುವುದು ವರದಿಯಾಗಿದೆ.
ಕಳೆದ ಎರಡೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ, ಮದುವೆ ಸಲುವಾಗಿ ಎರಡೂ ಮನೆಯವರಿಂದ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಕೊನೆಗೂ ಇಬ್ಬರು ತಮ್ಮ – ತಮ್ಮ ಮನೆಯವರ ಮನವನ್ನು ಒಪ್ಪಿಸಿ ಮದುವೆಯಾಗಲು ರೆಡಿಯಾಗಿದ್ದಾರೆ.
ಬಾರಾಬಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾರಾದರಿ ಪ್ರದೇಶದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮದುವೆಯ ದಿನ ಬಂದಿದೆ. ವಧುವಿನ ಕುಟುಂಬಸ್ಥರು, ವರನಿಗಾಗಿ ಕಾಯಲು ಶುರು ಮಾಡಿದ್ದಾರೆ. ಇನ್ನೇನು ವರ ಬರುತ್ತಾನೆ ಎನ್ನುವ ನಿರೀಕ್ಷೆಯಿಂದ ವಧು ಮಂಟಪದಲ್ಲಿ ಕೂತಿದ್ದಾಳೆ. ಆದರೆ ಗಂಟೆಗಳು ಕಳೆದರೂ ವರ ಮಾತ್ರ ಬಂದಿಲ್ಲ.
ಇದನ್ನೂ ಓದಿ:ಏನು ಬೇಕಾದರೂ ಹೇಳಿಕೊಳ್ಳಲಿ..: ಎಂ.ಬಿ.ಪಾಟೀಲ್ 5 ವರ್ಷ ಸಿಎಂ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ
Related Articles
ಕೆಲ ಸಮಯದ ಬಳಿಕ ವರನಿಗೆ ವಧು ಕರೆ ಮಾಡಿದ್ದಾಳೆ. ಆ ವೇಳೆ ವರ ನಾನು ತಾಯಿಯನ್ನು ಕರೆದುಕೊಂಡು ಬರಲು ಬುಡೌನ್ ಗೆ ತೆರಳುತ್ತಿದ್ದೇನೆ ಎಂದಿದ್ದಾನೆ. ಆತನ ಮಾತನ್ನು ಕೇಳಿ, ಆತ ಓಡಿ ಹೋಗುತ್ತಿದ್ದಾನೆ ಎನ್ನುವ ಅನುಮಾನದಿಂದಲೇ ವಧುವೂ ಸೇರಿದಂತೆ ಆಕೆಯ ಮನೆಯವರು ವರನ ಪತ್ತೆಗೆ ತೆರಳಿದ್ದಾರೆ.
ಕೂಡಲೇ ವಧು ಬರೇಲಿಯಿಂದ ಸುಮಾರು 20 ಕಿಮೀ ದೂರ ಚೇಸ್ ಮಾಡಿ ಭೀಮೋರಾ ಪೊಲೀಸ್ ಠಾಣೆ ಬಳಿಯ ಬಸ್ ಸ್ಟ್ಯಾಂಡ್ ನಲ್ಲಿ ಬಸ್ ಗಾಗಿ ಕಾಯುತ್ತಿದ್ದ ವರನನ್ನು ಪತ್ತೆ ಹಚ್ಚಿ ಆತನನ್ನು ಮದುವೆ ಮಂಟಪಕ್ಕೆ ಕರೆತಂದು ಮದುವೆಯಾಗಿದ್ದಾಳೆ.
ಈ ನಡುವೆ ರಸ್ತೆಯಲ್ಲಿ ಜೋಡಿಯ ನಡುವೆ ಹಲವು ವಾಗ್ವಾದ ನಡೆದಿದೆ. ಕೊನೆಗೆ ಎರಡೂ ಕುಟುಂಬದ ಸಮ್ಮುಖದಲ್ಲಿ ಇಬ್ಬರ ವಿವಾಹ ಜರುಗಿದೆ.