Advertisement

ಬೇರ್‌ಫ‌ೂಟ್‌ ಇಂಡಿಯಾ ಕ್ಯಾಂಪೇನ್‌ ಆರಂಭ

03:45 AM Jul 07, 2017 | Team Udayavani |

ಮಡಿಕೇರಿ: ಕಡೆಗಣನೆಗೆ ಒಳಗಾಗಿರುವ ಸಮಾಜದ ತಳಹಂತದ ಬಡ ಸಮುದಾಯವನ್ನು ಅಭಿವೃದ್ಧಿಯ ಪಥದೆಡೆಗೆ ಕೊಂಡೊಯ್ಯುವ ಮೂಲಕ  ಪರಿವರ್ತನೆಯನ್ನು ಕಾಣುವ ಮೂಲ ಚಿಂತನೆಗಳಡಿ ಸೇಫ್ ಕರ್ನಾಟಕ ಸಂಘಟನೆಯ ಮೂಲಕ ಬೇರ್‌ಫ‌ೂಟ್‌ ಇಂಡಿಯಾ ಕ್ಯಾಂಪೇನ್‌ (ಬರಿಗಾಲ ಭಾರತ ಆಂದೋಲನ) ಆರಂಭಿಸುತ್ತಿರುವುದಾಗಿ ಸೇಫ್ ಕರ್ನಾಟಕದ ಸ್ಥಾಪಕ ಜೋಯಪ್ಪ ಅಚ್ಚಯ್ಯ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇಫ್ ಕರ್ನಾಟಕ ಸಂಘಟನೆ ಬೆಂಗಳೂರು ಮೂಲದಿಂದ ಕಾರ್ಯಾ ಚರಿಸುತ್ತಿದ್ದು, ಇದರ ಭಾಗವಾದ ಸೇಫ್ ಇಂಡಿಯಾದ ಕಚೇರಿ ದಿಲ್ಲಿಯಲ್ಲೂ ಇದೆ. ಈ ಸಂಘಟನೆ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದೊಂದಿಗೆ ಸಮಾಜದ ಒಳಿತಿಗೆ ಕಾರಣವಾಗುವ ವಿವಿಧ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ಮಾಹಿತಿ ನೀಡಿದರು.

ರಾಜ್ಯ ಮತ್ತು ರಾಷ್ಟ್ರದಲ್ಲಿ ಇಂದಿಗೂ ಕನಿಷ್ಠ ಪಾದರಕ್ಷೆಗಳನ್ನು ಧರಿಸಲಾಗದ ಲಕ್ಷಾಂತರ ಜನರು, ವಿದ್ಯಾರ್ಥಿಗಳು ನಮ್ಮ ನಡುವೆ ಇದ್ದಾರೆ. ಇವರ ಬದುಕಿನಲ್ಲಿ ಬೆಳಕನ್ನು ಮೂಡಿಸುವ ಉದ್ದೇಶದಿಂದ ಸಾಂಕೇತಿಕವಾಗಿ ಬರಿಗಾಲಿನ ಭಾರತ ಆಂದೋಲನವನ್ನು ಪ್ರಸಕ್ತ ಸಾಲಿನ ಮೇ 1 ರಿಂದ ಆರಂಭಿಸಲಾಗಿದ್ದು, ಇದು ಆ. 8ರವರೆಗೆ 100 ದಿನಗಳ ಕಾಲ ನಡೆಯಲಿದೆ. ಇದರ ನಡುವೆ ಇದೇ ಜುಲೈ14 ರಿಂದ ಜು. 21ರ ವರೆಗಿನ 8 ದಿನಗಳ ಕಾಲ ಬೆಂಗಳೂರಿನಿಂದ ದಿಲ್ಲಿಯ ವರೆಗೆ ವಾಹನ ಜಾಥಾವನ್ನು ನಡೆಸುವ ಮೂಲಕ ದೇಣಿಗೆಯನ್ನು ಸಂಗ್ರಹಿಸಿ ಬಡಮಂದಿಗೆ ನೆರವಾಗುವ ಕಾರ್ಯಕ್ರಮವನ್ನು ಆಯೋ ಜಿಸಿರುವುದಾಗಿ ಜೋಯಪ್ಪ ಅಚ್ಚಯ್ಯ ತಿಳಿಸಿದರು.

ಸಮಾಜದ ಒಳಿತಿನ ಹಿತಚಿಂತನೆಗಳಡಿ ಆರಂಭಿಸಿರುವ ಸೇಫ್ ಕರ್ನಾಟಕ, ಸೇಫ್ ಇಂಡಿಯಾ ಆಂದೋಲನವನ್ನು ಕೊಡಗು ಜಿಲ್ಲೆಯ ಪ್ರವಾಸೋದ್ಯಮ, ಇಲ್ಲಿನ ಕಾಫಿ, ಕರಿಮೆಣಸಿನ ಕೃಷಿಗೆ ಪೂರಕವಾದ ಕಾರ್ಯಕ್ರಮಗಳನ್ನು ಒಳಗೊಳ್ಳುವ ಮೂಲಕ ಆರಂಭಿಸುವ ಉದ್ದೇಶವನ್ನು ಹೊಂದುವುದರೊಂದಿಗೆ ಈ ಸಂಬಂಧ ವೆಬ್‌ಸೈಟ್‌ ಆರಂಭಿಸುವ ಗುರಿಯೂ ಇದೆ ಎಂದು ತಿಳಿಸಿದರು.

ಕೊಡಗಿನ ಸಂಸ್ಕೃತಿಯೊಂದಿಗೆ ಬೆರೆತಿರುವ ಹಾಕಿ ಕ್ರೀಡೆಯನ್ನು ಮತ್ತಷ್ಟು ಪ್ರಚುರಪಡಿಸುವ ಉದ್ದೇಶದಿಂದ ಸಂಘಟನೆಯ ಮೂಲಕ ಮುಂದಿನ 2018ನೇ ಸಾಲಿನಲ್ಲಿ ಹಾಕಿ ಎನ್ನುವ ಚಲನ ಚಿತ್ರವನ್ನು ಸಜ್ಜುಗೊಳಿಸುವ ಉದ್ದೇಶ ಹೊಂದಿರುವುದಾಗಿ ಜೋಯಪ್ಪ ಅಚ್ಚಯ್ಯ ಹೇಳಿದರು.

Advertisement

ಸೇಫ್ ಕರ್ನಾಟಕ ಸಂಘಟನೆ ಈಗಾಗಲೆ ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಡಿಜಿಟಲ್‌ ಕರ್ನಾಟಕ, ಸ್ಮಾರ್ಟ್‌ ಸಿಟಿ, ವುಮೆನ್‌ ಸೇಫ್ಟಿ ಎಸ್‌ಒಎಸ್‌ ಮೊಬೈಲ್‌ ಆ್ಯಪ್‌, ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣದ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸೇಫ್ ಕರ್ನಾಟಕ ಸ್ಥಾಪಕ ಸದಸ್ಯ ಲಿಮ್‌ ಚಂಗಪ್ಪ, ಬೆಂಗಳೂರು ಸಿಟಿ ಅಧ್ಯಕ್ಷ ವಿಷ್ಣು ಮೇದಪ್ಪ ಹಾಗೂ ಕೊಡಗು ಜಿಲ್ಲಾ ಅಧ್ಯಕ್ಷ ವಿಕಾಸ್‌ ಉತ್ತಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next