ಗದಗ: ಇಲ್ಲಿನ ನಗರಸಭೆ ವಕಾರ ಸಾಲು ತೆರವು ಕಾರ್ಯಾಚರಣೆ ಬಳಿಕ ಈ ಭಾಗದ ಅನೇಕ ಉದ್ಯಮಿಗಳು ವಿವಿಧ ಭಾಗಗಳಿಗೆ ಸ್ಥಳಾಂತಗೊಂಡಿದ್ದಾರೆ. ಆದರೆ, ಯಾವುದೇ ಆಸರೆ ಇಲ್ಲದ ಕೆಲ ಸಾಂಪ್ರದಾಯಿಕ ಕುಲಕಸುಬುದಾರರ ಬದುಕು ಬೀದಿಗೆ ಬಂದಿದೆ.
ಹಳೇ ಬಸ್ ನಿಲ್ದಾಣ ಸಮೀಪದ ವಕಾರಸಾಲಿನಲ್ಲಿ ಕ್ಷೌರಿಕ ಅಂಗಡಿ ಇಟ್ಟುಕೊಂಡು ಬದುಕಿನ ಬಂಡಿ ಎಳೆಯುತ್ತಿದ್ದ ಸವಿತಾ ಸಮಾಜದ ಐದಾರು ಅಂಗಡಿಗಳು ತೆರವುಗೊಂಡಿವೆ. ನೆಲೆ ಕಳೆದುಕೊಂಡಿರುವ ಕ್ಷೌರಿಕ ಅಂಗಡಿಕಾರರು, ರವಿವಾರ ಒಂದೆಡೆ ತೆರವು ಕಾರ್ಯ ನಡೆಯುತ್ತಿದ್ದರೆ, ಮತ್ತೂಂದೆಡೆ ತಮ್ಮ ವೃತ್ತಿ ಮುಂದುವರಿಸುವ ಮೂಲಕ ಸಾತ್ವಿಕ ಆಕ್ರೋಶ ಹಾಗೂ ಅಸಹಾಯಕತೆಯನ್ನೂ ಪ್ರದರ್ಶಿಸಿದರು.
ನಗರದ ಆಂಜನೇಯ ಸಿದ್ಧಪ್ಪ ಆದೋನಿ, ಗಿರಿರಾಜ ನಾರಾಯಣಪ್ಪ ಕೋಟೆಕಲ್, ಕೃಷ್ಣ ಬಾಯಲಗುಡ್ಡ, ಶ್ರೀನಿವಾಸ ಕೊಟೇಕಲ್ ಹಾಗೂ ಶ್ರೀನಿವಾಸ ರಾಂಪುರ ಎಂಬುವವರು ಅಂಗಡಿ ಕಳೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಲೀಜ್‌ದಾರರಿಂದ ಬಾಡಿಗೆ ಮಳಿಗೆ ಪಡೆದು ಜೀವನ ಸಾಗಿಸುತ್ತಿದ್ದರು. ಆದರೆ, ಲೀಜ್ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಡೆಸಿದ ತೆರವು ಕಾರ್ಯಾಚರಣೆಯಲ್ಲಿ ಅನೇಕರು ತಮ್ಮ ಅಂಗಡಿ, ಮುಂಗಟ್ಟು ಕಳೆದುಕೊಂಡಿದ್ದಾರೆ. ತಮ್ಮ ಶಕ್ತಾನುಸಾರ ವಿವಿಧ ಕಡೆ ಸ್ಥಳಾಂತರಗೊಂಡಿದ್ದಾರೆ. ಆದರೆ, ಕೈಯಲ್ಲಿ ಕಾಸಿಲ್ಲ. ಕಸುಬಿಗೆ ನೆಲೆ ಇಲ್ಲದಂತಾಗಿದೆ. ಈ ಹಿಂದೆ ತಮ್ಮ ಅಂಗಡಿಗಳು ಇದ್ದ ಸ್ಥಳದಲ್ಲೇ ಬಯಲಿಗೆ ಒಂದು ಕುರ್ಚಿ ಹಾಕಿಕೊಂಡು ವೃತ್ತಿ ಮುಂದುವರಿಸಿರುವುದು ಅವರ ಅನಿರ್ವಾಯತೆ ಎತ್ತಿತೋರಿಸುತ್ತದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಂಗಡಿಕಾರರು, ಲಕ್ಷಾಂತರ ರೂ. ಹಾಕಿ ತಮ್ಮ ಅಂಗಡಿಗಳನ್ನು ಅತ್ಯಾಧುನಿಕವಾಗಿ ಅಭಿವೃದ್ಧಿ ಪಡಿಸಲಾಗಿತ್ತು. ಇವತ್ತಲ್ಲ ನಾಳೆ ಮಳಿಗೆಗಳನ್ನು ಬಿಡಿಸುತ್ತಾರೆ ಎಂಬುದು ಗೊತ್ತಿತ್ತು. ಆಗ ಟೆಂಡರ್ ಪಡೆದರಾಯ್ತು ಎಂದು ಭಾವಿಸಿದ್ದೆವು. ಆದರೆ, ಸಂಪೂರ್ಣವಾಗಿ ಕಟ್ಟಡಗಳ್ನನೇ ತೆರವುಗೊಳಿಸಲಾಗುತ್ತದೆ ಎಂಬುದನ್ನು ಕನಸು- ಮನಸಿನಲ್ಲೂ ಎಣಿಸಿರಿಲಿಲ್ಲ. ಹಾಕಿದ ದುಡ್ಡೂ ಹೋಯ್ತು, ಜಾಗನೂ ಹೋಯ್ತು ಎಂಬ ಪರಿಸ್ಥಿತಿ ಎದುರಾಗಿದೆ ಎಂದು ಅವರ ಅಳಲು.
ಇನ್ನು ಭವಿಷ್ಯದಲ್ಲಿ ನಿರ್ಮಿಸುವ ಅಥವಾ ಸರಕಾರದ ಕಾಂಪ್ಲೆಕ್ಸ್‌ಗಳಲ್ಲಿ ನಮ್ಮಂಥ ಸಣ್ಣ-ಪುಟ್ಟ ವ್ಯಾಪಾರಿಗಳಿಗೆ ಜಿಲ್ಲಾಡಳಿತ ಮೊದಲ ಆದ್ಯತೆ ನೀಡಬೇಕು ಎಂಬುದು ಆಂಜನೇಯ ಅವರ ಬೇಡಿಕೆ.