Advertisement
ಅಂಡಮಾನ್ ದ್ವೀಪ ಸಮೂಹ ಪ್ರವಾಸಿಗರ ನೆಚ್ಚಿನ ತಾಣ. ಬಿಳಿ ಮರಳ ರಾಶಿಯನ್ನೇ ಹೊದ್ದ ತಿಳಿ ನೀಲ ನೀರ ಕಡಲ ತೀರಗಳು, ವರ್ಣರಂಜಿತ ಹವಳದ ಬಂಡೆಗಳು, ಹಚ್ಚ ಹಸಿರಿನ ಸಮೃದ್ಧ ಉಷ್ಣವಲಯದ ಮಳೆ ಕಾಡುಗಳು, ಮ್ಯಾಂಗ್ರೋವ್ ತೊರೆಗಳು, ಜಾರವಾ, ಸೆಂಟಿನಲ್ಸ್ ನಂತಹ ಬುಡಕಟ್ಟು ಜನಗಳು, ಬಣ್ಣ ಬಣ್ಣದ ಮೀನುಗಳನ್ನೊಳಗೊಂಡ ವೈವಿಧ್ಯಮಯ ಸಮುದ್ರ ಜೀವಿಗಳು, ಇತಿಹಾಸದ ಕರಾಳ ಅಧ್ಯಾಯವನ್ನು ನೆನಪಿಸುವ ಸೆಲ್ಯೂಲರ್ ಜೈಲು, ವಸ್ತು ಸಂಗ್ರಹಾಲಯ, ಸ್ಕೂಬಾ ಡೈವಿಂಗ್‌ನಂತಹ ಸಾಹಸಮಯ ಕ್ರೀಡೆಗಳು… ಹೀಗೆ ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಐತಿಹಾಸಿಕ ಪ್ರಾಮುಖ್ಯತೆ ಹೊಂದಿದ ವೈವಿಧ್ಯಮಯ ಭೂ ದೃಶ್ಯಗಳನ್ನು ಹೊಂದಿದ ವಿಶಿಷ್ಟ ದ್ವೀಪ ಅಂಡಮಾನ್. ಇದು 200ಕ್ಕೂ ಹೆಚ್ಚು ದ್ವೀಪಗಳನ್ನೊಳಗೊಂಡ ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಮಧ್ಯೆ ಇರುವ, ಕೇಂದ್ರಾಡಳಿತಕ್ಕೆ ಒಳಪಟ್ಟ ಭೂ ಪ್ರದೇಶ. ಈ ದ್ವೀಪ ಸಮೂಹದಲ್ಲಿ ಕೇವಲ 38 ದ್ವೀಪಗಳಲ್ಲಿ ಮಾತ್ರ ಜನವಸತಿ ಇದೆ. ಇವತ್ತಿಗೂ ನಾಗರಿಕ ಜಗತ್ತಿನ ಗೊಡವೆಯಿಲ್ಲದೇ ಬದುಕುತ್ತಿರುವ, ನಾಗರಿಕ ಬದುಕಿನ ಸಂಪರ್ಕಕ್ಕೂ ಬಾರದ ಜಾರವಾ ಮತ್ತು ಸೆಂಟಿನಲ್ಸ್ ಬುಡಕಟ್ಟು ಜನಾಂಗದವರ ಆವಾಸ ಸ್ಥಾನವೂ ಹೌದು. ಈ ಜನಾಂಗಗಳಿಗೆ ಯಾವುದೇ ತೊಂದರೆ ಆಗದಂತೆ ಸರಕಾರ ರಕ್ಷಣೆಯನ್ನೂ ನೀಡುತ್ತಿದೆ. ಸೆಂಟಿನಲ್ಸ್ ಬುಡಕಟ್ಟು ಜನ ವಾಸವಿರುವ ದ್ವೀಪಗಳಿಗೆ ಮನುಷ್ಯರ ಪ್ರವೇಶವನ್ನು ಈಗಲೂ ನಿಷೇಧಿಸಲಾಗಿದೆ.
Related Articles
Advertisement
ಜಿರಕಟಾಂಗ್‌ನಿಂದ 50 ಕಿ.ಮೀ. ಸಾಗಿದ ನಂತರ ಸಿಗುವುದೇ ನಿಲಂಬೂರ್ ಜೆಟ್ಟಿ. ಅಲ್ಲಿಂದ ಮುಂದೆ ದೋಣಿ ಪ್ರಯಾಣ. ಹತ್ತು ಆಸನಗಳ ಫೈಬರ್ ದೋಣಿ ನಮ್ಮನ್ನು ಬಾರಾತಂಗ್ ದ್ವೀಪದ ಸುಣ್ಣದ ಗುಹೆಗಳ ಕಡೆಗೆ ಕರೆದೊಯ್ಯುತ್ತದೆ. ಈ ಗುಹೆಗಳನ್ನು ತಲುಪಲು 1.2 ಕಿಲೋಮೀಟರ್ ಚಾರಣ ಮಾಡಬೇಕು. ಈ ಗುಹೆಗಳು ಅಂಡಮಾನ್ ದ್ವೀಪದಲ್ಲಿನ ಅತ್ಯುತ್ತಮ ಮತ್ತು ವಿಶಿಷ್ಟವಾದ ಪ್ರವಾಸೀ ಆಕರ್ಷಣೆಗಳಲ್ಲೊಂದು. ಶತ-ಶತಮಾನಗಳಿಂದ ನೆಲೆನಿಂತ ಈ ಸುಣ್ಣದ ಗುಹೆಗಳು ನೈಸರ್ಗಿಕವಾಗಿ ರೂಪುಗೊಂಡ ಪ್ರಕೃತಿಯ ಸ್ವಂತ ವಾಸ್ತು ಶಿಲ್ಪ. ಇದೊಂದು ವಿಸ್ಮಯದಾಯಕ ನೈಸರ್ಗಿಕ ಅದ್ಭುತವೇ ಸರಿ. ಕ್ಯಾಲ್ಸಿಯಂ ಕಾಬೋìನೇಟ್‌ನಿಂದ ನಿರ್ಮಿತವಾದ ಈ ಗುಹೆಗಳ ಗೋಡೆಗಳು ಗೊಂಚಲು ಗೊಂಚಲಾಗಿ ಚಾವಣಿಯಿಂದ ತೂಗಾಡುವ ಬೃಹತ್ ರಚನೆಗಳಿಂದ ಕೂಡಿದ್ದು, ಗುಹೆಯೊಳಗೆ ಓಡಾಡುವಾಗ ಅದರ ಸೀಲಿಂಗ್‌ನಿಂದ ನೀರು ನಿರಂತರವಾಗಿ ತಲೆಯ ಮೇಲೆ ತೊಟ್ಟಿಕ್ಕುತ್ತಿರುತ್ತದೆ.
ಗಿಳಿಗಳ ದ್ವೀಪವೂ ಇಲ್ಲುಂಟು!
ಬಾರಾತಂಗ್‌ನ ಅಂಕುಡೊಂಕಾದ ಮ್ಯಾಂಗ್ರೋವ್ ತೊರೆಗಳಲ್ಲಿ ಸ್ಪೀಡ್ ಬೋಟ್‌ಗಳಲ್ಲಿ ಪ್ರಯಾಣಿಸುವುದು ಇನ್ನೊಂದು ಪ್ರವಾಸೀ ಆಕರ್ಷಣೆ. ಈ ತೊರೆಗಳನ್ನು ಹಾದು ಹೋಗುವಾಗ ಉಪ್ಪು ನೀರಿನ ಮೊಸಳೆಗಳು, ವಿವಿಧ ಜಾತಿಯ ಪಕ್ಷಿಗಳನ್ನು ವೀಕ್ಷಿಸಬಹುದು. ಬಾರಾತಂಗ್ ಜೆಟ್ಟಿಯಿಂದ ಕೆಲವೇ ನಿಮಿಷಗಳ ಸವಾರಿಯಲ್ಲಿ ಸಮುದ್ರ ಮಧ್ಯದಲ್ಲಿರುವ ಮೇಜಿನ ಆಕಾರದ ಗಿಳಿ ದ್ವೀಪಕ್ಕೆ ಭೆಟ್ಟಿ ಕೊಡಬಹುದು. ಇಲ್ಲಿ ಅಸಂಖ್ಯಾತ ಜಾತಿಯ ಗಿಳಿಗಳನ್ನು ನೋಡಬಹುದು.
ಮಣ್ಣಿನ ಜ್ವಾಲಾಮುಖಿ!
ಬಾರಾತಂಗ್‌ನ ಇನ್ನೊಂದು ಆಕರ್ಷಣೆ ಮಣ್ಣಿನ ಜ್ವಾಲಾಮುಖೀಗಳು. 2004ರಲ್ಲಿ ಸಮುದ್ರದಲ್ಲಿನ ಭೂಕಂಪನದಿಂದಾಗಿ ಈ ಮಣ್ಣಿನಲ್ಲಿ ಜ್ವಾಲಾಮುಖೀಗಳು ಉದ್ಭವಿ ಸಿವೆ. ಇದನ್ನು ಮಡ್ ಡೋಮ್ ಎಂದೂ ಕರೆಯಲಾಗುತ್ತದೆ. ಕೆಸರು ಮಣ್ಣು, ನೀರು ಮತ್ತು ಅನಿಲಗಳ ಸ್ಫೋಟದಿಂದ ಇವು ರೂಪುಗೊಂಡಿವೆ. ವಿಶೇಷವೇನೆಂದರೆ ಮಣ್ಣಿನ ಜ್ವಾಲಾಮುಖೀಗಳು ಸ್ಫೋಟಗೊಂಡಾಗ ಅವು ಉಳಿದ ಜ್ವಾಲಾಮುಖೀ ಗಳಂತೆ ಲಾವಾವನ್ನು ಉಗುಳುವುದಿಲ್ಲ ಬದಲಿಗೆ ಕೆಸರನ್ನು ಹೊರಹಾಕುತ್ತವೆ. ಅದರ ಜೊತೆಗೆ ಮಿಥೇನ್ ಹಾಗೂ ಕಾರ್ಬನ್ ಡೈಆಕ್ಸೆ„ಡ್‌ನಂತಹ ಅನಿಲಗಳು ಬಿಡುಗಡೆಯಾಗುತ್ತವೆ. ಈ ಜ್ವಾಲಾಮುಖೀ ಗಳು 700 ಮೀಟರ್‌ಗಳಷ್ಟು ಎತ್ತರ ಮತ್ತು 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಅಂಡಮಾನ್‌ನಲ್ಲಿ ಒಟ್ಟು 11 ಮಣ್ಣಿನ ಜ್ವಾಲಾಮುಖಿಗಳಿದ್ದು, ಬಾರಾತಂಗನಲ್ಲಿಯೇ ಎಂಟು ಮಡ್ ಡೋಮ್‌ಗಳು ಇವೆ.
ವಿಶೇಷ ಸೂಚನೆಗಳು
ಒಂದೇ ದಿನದ ಪ್ರವಾಸದಲ್ಲಿ ಹಲವು ಆಕರ್ಷಣೀಯ ಸ್ಥಳಗಳನ್ನು ನೋಡಬಹುದಾದ ಬಾರಾತಂಗ್ ನಿಜಕ್ಕೂ ನೈಸರ್ಗಿಕ ಅಚ್ಚರಿಗಳ ತಾಣ. ಇಲ್ಲಿಗೆ ಹೋಗುವ ಮುನ್ನ ತಲೆಗೊಂದು ಟೋಪಿ, ಕಣ್ಣಿಗೆ ಕಪ್ಪು ಕನ್ನಡಕ, ಕುಡಿಯಲೊಂದಿಷ್ಟು ನೀರು, ಸೊಳ್ಳೆ ನಿವಾರಕ ಕ್ರೀಂಗಳನ್ನು ಒಯ್ಯಲು ಮರೆಯಬೇಡಿ. ಪ್ರತಿ ಸೋಮವಾರ ಇಲ್ಲಿನ ಸುಣ್ಣದ ಗುಹೆಗೆ ಪ್ರವೇಶ ನಿರ್ಬಂಧ ಇರುವುದರಿಂದ ಸೋಮವಾರ ಹೊರತುಪಡಿಸಿ ಪ್ರವಾಸ ಕೈಗೊಳ್ಳಿ.
-ಜಿ. ಆರ್. ಪಂಡಿತ್, ಸಾಗರ