ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿಯೂ ಅವರು ಊರೊಂದರ ಹೆಸರಿಟ್ಟು ಸಿನಿಮಾ ಮಾಡಿದ್ದಾರೆ. ಆ ಚಿತ್ರಕ್ಕೆ “ಬರಗೂರು’ ಎಂಬ ಹೆಸರು. ಈಗಾಗಲೇ “ಶ್ರೀಕ್ಷೇತ್ರ ಕೈವಾರ’, “ದೇವನಹಳ್ಳಿ’ ಶೀರ್ಷಿಕೆಯುಳ್ಳ ಚಿತ್ರ ಮಾಡಿರುವ ಪಲ್ಲಕ್ಕಿ, ಮುಂದೆ “ಮದಕರಿಪುರ’ ಎಂಬ ಚಿತ್ರಕ್ಕೂ ಸಜ್ಜಾಗುತ್ತಿದ್ದಾರೆ.
ಈಗ “ಬರಗೂರು’ ಸಿನಿಮಾ ವಿಷಯಕ್ಕೆ ಬಂದರೆ, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗೂ ಪಲ್ಲಕ್ಕಿ ಅವರ “ಬರಗೂರು’ ಚಿತ್ರಕ್ಕೂ ಯಾವ ಸಂಬಂಧವಿಲ್ಲ. ಗ್ರಾಮದ ಹಿನ್ನೆಲೆ ಮತ್ತು ಅದರೊಳಗಿನ ವಿಶೇಷ ಕಥೆಯ ಹೂರಣ ಬಡಿಸುವ ಪ್ರಯತ್ನವೇ “ಬರಗೂರು’ ಎನ್ನುತ್ತಾರೆ ಪಲ್ಲಕ್ಕಿ.
“ಇಂದಿಗೂ ಸಹ ಗ್ರಾಮೀಣದಲ್ಲಿ ಹಲಾಲ್ ಮಾಡುವ ಮುಸಲ್ಮಾನರಿದ್ದಾರೆ. ಎಲ್ಲರೂ ದುವಾ ಪಠಿಸಿದ ಮೇಲೆ ಪ್ರಾಣಿಗಳನ್ನು ಕೊಯ್ಯುತ್ತಾರೆ. ದೇವರಿಗೆ ಮಾಂಸ ಅರ್ಪಣೆಯಾಗಿದೆ ಎಂದು ಭಾವಿಸಿ, ಅನೇಕರು ಮಾಂಸಾಹರ ಸೇವಿಸುತ್ತಾರೆ. ಚಿತ್ರದಲ್ಲಿ ಹಲಾಲ್ ಮಾಡುವ ನಜೀರ್‌ಸಾಬ್ ಎಂಬ ಪಾತ್ರವಿದೆ. ಮಧ್ಯ ಕರ್ನಾಟಕದಲ್ಲಿ ನಡೆಯೋ ಕಥೆ ಇದು. ಶಿವಶರಣರ ನಡುವೆ ಇರುವ ನಜೀರ್‌ಸಾಬ್‌ಗ ಬಸವ ಪ್ರಜ್ಞೆ ಹೆಚ್ಚು. ಬಸವಣ್ಣ ಹೇಳಿದಂತೆ, ಕಾಯಕವೇ ಕೈಲಾಸ ಎಂಬ ವಾಕ್ಯವನ್ನು ಚಾಚೂ ತಪ್ಪದೆ ಪಾಲಿಸುವಾತ. ಅವನದು ಪ್ರಾಣಿ ಕೊಂದು ಮಾಂಸ ಮಾರುವ ಕಾಯಕ. ಅಂತಹ ವೇಳೆಯಲ್ಲಿ ಗೋ ಹತ್ಯೆ ಕುರಿತ ಚರ್ಚೆ ಶುರುವಾಗುತ್ತೆ. ಗ್ರಾಮದಲ್ಲಿ ಕೇಳದೇ ಇರುವಂತಹ ವಿಷಯ ಕೇಳಿದಾಗ ನಜೀರ್ ಸಾಬ್‌ಗ ಗೊಂದಲವಾಗುತ್ತೆ. ಹಾಗಾಗಿ ಹಲಾಲ್ ಮಾಡೋದನ್ನೇ ನಿಲ್ಲಿಸ್ತಾನೆ. ಆಮೇಲೆ ಇನ್ನೊಂದು ಕಂದಕಕ್ಕೆ ಬೀಳುತ್ತಾನೆ. ಅದರಿಂದ ಹೊರ ಬರುವ ಪ್ರಯತ್ನವೇ “ಬರಗೂರು’ ಚಿತ್ರದ ಕಥೆ’ ಎನ್ನುತ್ತಾರೆ ಪಲ್ಲಕ್ಕಿ.
ಇಲ್ಲಿ ನಜೀರ್‌ಸಾಬ್ ಪಾತ್ರದಲ್ಲಿ ಪಲ್ಲಕ್ಕಿ ಕಾಣಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯೂ ಪಲ್ಲಕ್ಕಿ ಅವರದೇ. ಚಿತ್ರದಲ್ಲಿ ರಮೇಶ್ ಭಟ್, ಕಮಲ, ಚಿದಾನಂದ್, ಲಯೇಂದ್ರ, ಎನ್.ಎಂ. ಸುರೇಶ್ ಸೇರಿದಂತೆ ರಂಗಭೂಮಿಯ ಹೊಸ ಪ್ರತಿಭೆಗಳು ಈ ಚಿತ್ರದಲ್ಲಿವೆ. ಇಲ್ಲಿ ಇನ್ನೊಂದು ವಿಶೇಷವೂ ಇದೆ. ರಂಭಾಪುರಿ ಶ್ರೀಗಳು ಮತ್ತು ಚಿತ್ರದುರ್ಗದ ಮುರುಘಾ ಶರಣರು “ಬರಗೂರು’ ಚಿತ್ರದಲ್ಲಿ ನಟಿಸಿದ್ದಾರೆ. ಕಥೆಯಲ್ಲಿ ಆ ಸನ್ನಿವೇಶ ಇರುವುದರಿಂದಲೇ ಶ್ರೀಗಳು ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಪಲ್ಲಕ್ಕಿ. ಚಿತ್ರಕ್ಕೆ ಸ್ಯಾಮ್ ಸಂಗೀತವಿದೆ. ನಾಗರಾಜ ಆದವಾನಿ ಕ್ಯಾಮೆರಾ ಹಿಡಿದಿದ್ದಾರೆ