ನವದೆಹಲಿ:ವಿದೇಶಗಳ ಕಾನೂನು ಸೇವಾ ಸಂಸ್ಥೆಗಳು ಮತ್ತು ವಕೀಲರಿಗೆ ಭಾರತದಲ್ಲೂ ವಕೀಲಿಕೆ ನಡೆಸಲು ಇನ್ನು ಮುಂದೆ ಅವಕಾಶ ಲಭ್ಯವಾಗಲಿದೆ. ಹಿಂದಿನ ಸಂದರ್ಭದಲ್ಲಿ ಈ ಪ್ರಸ್ತಾಪಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಈಗ ವಕೀಲರಿಗೆ ಮಾನ್ಯತೆ ನೀಡುವ ಪರಮೋಚ್ಚ ಸಂಸ್ಥೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಈ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿದೆ.
ಜತೆಗೆ ನಿಯಮಗಳಿಗೆ ತಿದ್ದುಪಡಿ ತಂದು, ವಿದೇಶಿ ವಕೀಲರು ಮತ್ತು ಅಲ್ಲಿನ ಕಾನೂನು ಸಂಸ್ಥೆಗಳ ನೋಂದಣಿಗೆ ಸಂಬಂಧಿಸಿದ ನಿಯಮಗಳನ್ನೂ ಬಿಡುಗಡೆ ಮಾಡಲಾಗಿದೆ. ಈ ಕ್ರಮದಿಂದಾಗಿ ದೇಶದಲ್ಲಿ ಕಾನೂನು ಕ್ಷೇತ್ರದಲ್ಲಿ ಹೆಚ್ಚಿನ ವೃತ್ತಿಪರತೆ ನಿರ್ಮಾಣವಾಗಲಿದೆ ಎಂದು ಬಾರ್ ಕೌನ್ಸಿಲ್ ಹೇಳಿದೆ.
ವಿದೇಶಿ ಕಾನೂನು ಸೇವಾ ಸಂಸ್ಥೆಗಳು ಮತ್ತು ವಕೀಲರಿಗೆ ಯಾವುದೇ ಕೋರ್ಟ್‌ಗಳಲ್ಲಿ, ನ್ಯಾಯಮಂಡಳಿಗಳಲ್ಲಿ, ನಿಯಂತ್ರಣ ಪ್ರಾಧಿಕಾರಗಳಲ್ಲಿ ವಾದ ಮಂಡಿಸಲು ಅವಕಾಶ ಇಲ್ಲ. ಆದರೆ, ಕಾರ್ಪೊರೇಟ್ ವಲಯಗಳಲ್ಲಿ, ಕಂಪನಿಗಳ ಖರೀದಿ ಮತ್ತು ವಿಲೀನ ಪ್ರಕ್ರಿಯೆಗಳು, ಕಂಪನಿಗಳ ದೈನಂದಿನ ಆಡಳಿತ, ಬೌದ್ಧಿಕ ಹಕ್ಕುಗಳ ವ್ಯಾಪ್ತಿಗೆ ಸಂಬಂಧಿಸಿದ ಕಾನೂನು ವಿಚಾರಗಳು, ಕರಾರು ಪತ್ರಗಳನ್ನು ಸಿದ್ಧಪಡಿಸುವ ಕ್ಷೇತ್ರಗಳಲ್ಲಿ ಕಾರ್ಯವೆಸಗಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ.