Advertisement

ಗ್ರಾಮಾಂತರ ಪ್ರದೇಶಗಳಿಗೆ ಬಾರ್‌ಗಳ ‘ಭಾರ’

03:40 AM Jul 07, 2017 | Team Udayavani |

ಬಂಟ್ವಾಳ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಪಕ್ಕದಿಂದ ಬಾರ್‌ ಮತ್ತು ಮದ್ಯ ಮಾರಾಟದ ಅಂಗಡಿಗಳನ್ನು ತೆರವುಗೊಳಿಸಬೇಕೆಂಬ ಆದೇಶದ ಹಿನ್ನೆಲೆಯಲ್ಲಿ ಪಟ್ಟಣದಿಂದ ದೂರದ ಹಳ್ಳಿ ಪ್ರದೇಶಗಳಲ್ಲಿ ಬಾರ್‌/ಮದ್ಯದಂಗಡಿಗಳ ಹಾವಳಿ ಹೆಚ್ಚಾಗುವ ಭೀತಿ ಉಂಟಾಗಿದೆ. ಮದ್ಯದಂಗಡಿಗಳನ್ನು ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬದಿ ಮದ್ಯ ಸಿಗುತ್ತಿಲ್ಲವಾದ ಕಾರಣ ಮದ್ಯಪ್ರಿಯರು ಒಳರಸ್ತೆಗಳತ್ತ ತಮ್ಮ ನೋಟ ಹಾಯಿಸಿದ್ದಾರೆ. ಗ್ರಾಮಾಂತರ ಭಾಗದ ಕೆಲವೆಡೆ ತೋಟದ ಪರಿಸರವೂ ಮದ್ಯದಂಗಡಿಗಳಾಗುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

Advertisement

ಹೇರಿಕೆಯಲ್ಲವೆ
ಈಗಾಗಲೇ ವೈನ್‌ಶಾಪ್‌ ಅಥವಾ ಬಾರ್‌ ಇರುವ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮತ್ತೆ ಮದ್ಯದಂಗಡಿ, ಬಾರ್‌ಗಳನ್ನು ಆರಂಭಿಸಿದರೆ(ಸ್ಥಳಾಂತರ) ಆ ಪ್ರದೇಶಗಳ ಮೇಲೆ ಹೆಚ್ಚುವರಿಯಾಗಿ ಹೇರಿಕೆ ಮಾಡಿದಂತಾಗುತ್ತದೆ ಎಂಬುದು ನಾಗರಿಕರ  ಅಭಿಪ್ರಾಯವಾಗಿದೆ. ಹಣ ತೊಡಗಿಸಿರುವ ಮಾಲಕರು, ಅದರಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಹಾಗಂತ ಮನಬಂದಂತೆ ಪರವಾನಿಗೆ ನೀಡಿದರೆ ಹಳ್ಳಿಗಳಲ್ಲಿ ಮದ್ಯದ ಹೊಳೆ ಹರಿಸಿದಂತಾಗುತ್ತದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸರಕಾರಕ್ಕೆ ಫೋರಂ ಮನವಿ 
ವೈನ್‌ಶಾಪ್‌ಗ್ಳಿಗೆ ಗ್ರಾಮಾಂತರ ಪ್ರದೇಶದಲ್ಲಿ ಪರವಾನಿಗೆ ನೀಡುವುದಕ್ಕೆ ಆಕ್ಷೇಪಿಸಿ ಡಿ.ಕೆ.ಡಿಸ್ಟ್ರಿಕ್ಟ್ ಅಂಬೇಡ್ಕರ್‌ ಫೋರಂ ಫಾರ್‌ ಸೋಷಿಯಲ್‌ ಜಸ್ಟೀಸ್‌ ದ.ಕ. ಜಿಲ್ಲಾಧಿಕಾರಿ, ಸಚಿವರು ಮತ್ತು ರಾಜ್ಯ ಸರಕಾರಕ್ಕೆ  ಮನವಿ ಸಲ್ಲಿಸಿದೆ. ಇದೇ ರೀತಿಯಲ್ಲಿ ಹಲವು ಸಂಘಟನೆಗಳು, ಸಾಮಾಜಿಕ ಸೇವಾಕರ್ತರು ಕೂಡ ಮನವಿ ಸಲ್ಲಿಸಿದ್ದಾರೆ. ಒಂದೆಡೆ ಸರಕಾರದ ಬೊಕ್ಕಸಕ್ಕೆ ಆದಾಯ, ಇನ್ನೊಂದೆಡೆ ಮಾಲಕರು, ಕಾರ್ಮಿಕರ ಹಿತ ರಕ್ಷಣೆ, ಮತ್ತೂಂದೆಡೆ ಗ್ರಾಮೀಣ ಜನರ ವಿರೋಧ ಎದುರಿಸುವ ಸ್ಥಿತಿ ಸರಕಾರದ್ದು. ನ್ಯಾಯಾಲಯ ಇದೀಗ ಡಿನೋಟಿಫೈಗೆ ರಾಜ್ಯ ಸರಕಾರಗಳಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಗ್ರಾಮಾಂತರದಲ್ಲಿ ಬಾರ್‌ಗಳ ಭಾರ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಸಾರ್ವಜನಿಕರದ್ದು.  

ಹೊಸಬರಿಗೆ ಚಟ
ಹಳ್ಳಿಗಳಿಗೆ ಸ್ಥಳಾಂತರಿಸುವುದರಿಂದ ಇದುವರೆಗೆ ಚಟ ಹತ್ತಿಸಿಕೊಳ್ಳದ ಮಂದಿಗೆ ಸರಕಾರವೇ ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೇ ಎಂದು ಜನತೆ ಪ್ರಶ್ನಿಸುವಂತಾಗಿದೆ. ‘ಸಾಕಷ್ಟು ಹಣ ಇನ್‌ವೆಸ್ಟ್‌ ಮಾಡಿದ್ದೇವೆ. ಸಾಮಾಜಿಕ ಅನಿಷ್ಟ ಎನ್ನುವುದಾದರೆ ಸಾರ್ವತ್ರಿಕ ಬಹಿಷ್ಕರಿಸಬೇಕು. ಕೇರಳ ಮಾದರಿಯಲ್ಲಿ ಸರಕಾರವೇ ಹಂಚಿಕೆ ನಡೆಸಬೇಕು ಎನ್ನುತ್ತಾರೆ ಮಾಲಕರು.

ಒಂದಿಲ್ಲದೆ ಇನ್ನೊಂದಿಲ್ಲ
ಅನೇಕರು ಬಾರ್‌ ಎಂಡ್‌ ರೆಸ್ಟೋರೆಂಟ್‌ಗಳನ್ನು ಹೊಂದಿದ್ದು ಬಾರ್‌ ಅಥವಾ ರೆಸ್ಟೋರೆಂಟ್‌ ಇವೆರಡರಲ್ಲಿ ಒಂದನ್ನು ಮಾತ್ರ ನಡೆಸಿದರೆ ಯಾವುದೇ ಲಾಭವಾಗುತ್ತಿಲ್ಲ ಎಂದು ಕೂಡ ಹೇಳುತ್ತಾರೆ. ‘ನಮಗೆ ಸೂಕ್ತ ಪರಿಹಾರ ಒದಗಿಸಲಿ’ ಎನ್ನುತ್ತಾರೆ ಬಾರ್‌, ವೈನ್‌ಶಾಪ್‌ ಮಾಲಕರು.

Advertisement

23 ವೈನ್‌ಶಾಪ್‌ಗಳ ಸ್ಥಳಾಂತರ 
ಬಂಟ್ವಾಳ ತಾಲೂಕಿನಲ್ಲಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ 23 ಬಾರ್‌ ವೈನ್‌ಶಾಪ್‌ ಸ್ಥಳಾಂತರ ಆಗಿದೆ. 34 ಘಟಕಗಳ ಪರವಾನಗಿ ನವೀಕರಿಸಲಾಗಿದೆ. ಸಿದ್ಧಕಟ್ಟೆ ಮತ್ತು ಮಾರ್ನಬೈಲ್‌ನಲ್ಲಿ ಹೊರ ತಾಲೂಕಿನಿಂದ ಸ್ಥಳಾಂತರಿತ ಬಾರ್‌ ತೆರೆಯಲ್ಪಟ್ಟಿವೆ. ಸರಕಾರದ ಎಂಎಸ್‌ಐಎಲ್‌ ಮೂರು ಘಟಕ ಮಂಜೂರಾಗಿದ್ದು ಅದರಲ್ಲಿ ವಿಟ್ಲ ಪಟ್ನೂರು ಮತ್ತು ಕೆದಿಲ ಘಟಕ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next