Advertisement

ಮೌನವಾಯಿತು  ಆಲದ ಮರ

01:01 PM May 22, 2021 | Team Udayavani |

ಕೆರೆಯೂರಿನಲ್ಲೊಂದು ಕಾಡಿತ್ತು. ಅಲ್ಲಿ ಒಂದು ವಿಶಾಲವಾದ ಆಲದ ಮರವಿತ್ತು. ಯಾರು ಬಂದು ಏನೇ ಕೇಳಿದರೂ ಅದನ್ನು ಕೊಡುತ್ತಿತ್ತು. ಹೀಗಾಗಿ ಕಾಡಿನ ಪ್ರಾಣಿ, ಪಕ್ಷಿಗಳೆಲ್ಲ ಅದನ್ನು ದೇವರೆಂದು ಪೂಜಿಸ ತೊಡಗಿತ್ತು.

Advertisement

ಒಂದು ದಿನ ಕಟ್ಟಿಗೆ ತರಲೆಂದು ಕಾಡಿಗೆ ಬಂದ ಬಡಪಾಯಿ ರಾಮ, ಕಟ್ಟಿಗೆ ಕೊಯ್ದು ತಲೆ ಮೇಲೆ ಹೊತ್ತುಕೊಂಡು ಹಿಂತಿರುಗುತ್ತಿದ್ದಾಗ ಆಲದ ಮರವನ್ನು ನೋಡಿದ. ವಿಶಾಲವಾಗಿ ತನ್ನ ಬಾಹುಗಳನ್ನು ಚಾಚಿ ನಿಂತಿದ್ದ ಆಲದ ಮರದ ಕೆಳಗೆ ವಿಶ್ರಾಂತಿ ಮಾಡಿ ಮತ್ತೆ ಮುಂದೆ ಹೋದರಾಯಿತು ಎಂದುಕೊಂಡು ಮರದ ಕೆಳಗೆ ಕಟ್ಟಿಗೆಯ ಕಟ್ಟನ್ನು ಇಟ್ಟ. ಅಬ್ಟಾ, ಏನು ಬಿಸಿಲು, ಸ್ವಲ್ಪ ಕುಡಿಯಲು ನೀರು ಸಿಕ್ಕಿದ್ದರೆ ಒಳ್ಳೆಯದಿತ್ತು ಎಂದು ತನ್ನ ಪಾಡಿಗೆ ತಾನು ಹೇಳಿಕೊಂಡ. ಇದನ್ನು ಕೇಳಿದ ಆಲದ ಮರ ಒಂದು ಪಾತ್ರೆಯಲ್ಲಿ  ನೀರನ್ನು ಆತನ ಮುಂದಿರಿಸಿತು.

ರಾಮನಿಗೆ ಆಶ್ಚರ್ಯವಾಯಿತು. ಆಗ ಮರ, ನಿನಗೆ ಬಾಯಾರಿಕೆಯಾಗುತ್ತಿತ್ತಲ್ವ. ಅದಕ್ಕೆ ತಗೋ ನೀರು ಎಂದಿತು. ರಾಮನಿಗೆ ತುಂಬಾ ಖುಷಿಯಾಯಿತು. ಅವನು ಒಂದೇ ಗುಟುಕಿನಲ್ಲಿ ಎಲ್ಲ ನೀರು ಕುಡಿದುಬಿಟ್ಟ. ಬಳಿಕ ಆರಾಮವಾಗಿ ಸುಮಾರು ಒಂದು ಗಂಟೆಗಳ ಕಾಲ ಮಲಗಿದ. ಎದ್ದ ಮೇಲೆ ಅವನಿಗೆ ಹಸಿವಾಗತೊಡಗಿತು. ಅದನ್ನು ಮರದ ಮುಂದೆ ಹೇಳಿಕೊಂಡ. ಆಗ ಮರ ಅವನಿಗೆ ಸಾಕಷ್ಟು ರುಚಿಯಾದ ಹಣ್ಣುಗಳನ್ನು ತಿನ್ನಲು ಕೊಟ್ಟಿತು. ಅವನು ತಿಂದ ಬಳಿಕ ಉಳಿದ ಹಣ್ಣುಗಳನ್ನು ಕಟ್ಟಿ ಬುಟ್ಟಿಯಲ್ಲಿಟ್ಟು ಕಟ್ಟಿಗೆಯನ್ನು ಹಿಡಿದುಕೊಂಡು ಮನೆಗೆ ಬಂದ. ತಾನು ತಂದಿದ್ದ ಹಣ್ಣುಗಳನ್ನು ಹೆಂಡತಿ ಮಕ್ಕಳಿಗೆ ಕೊಟ್ಟ. ಕಾಡಿನಲ್ಲಿ ಕಂಡ ಆಶ್ಚರ್ಯವನ್ನು ಅವರಿಗೆ ಹೇಳಿದ.

ಮರುದಿನ ಕಟ್ಟಿಗೆ ತರಲು ಹೊರಟ ರಾಮನ ಬಳಿ ಬಂದ  ಹೆಂಡತಿ ಸೋಮಿ, ಮರ ನೀವು ಕೇಳಿದ್ದನ್ನೆಲ್ಲ ಕೊಡುತ್ತಿದೆ ಎಂದಿರಲ್ಲ. ಇವತ್ತು ಬರುವಾಗ ಸ್ವಲ್ಪ ನಾಣ್ಯಗಳನ್ನು ತನ್ನಿ ಎಂದಳು. ರಾಮ, ನಾಣ್ಯಗಳು ಮರದ ಬಳಿ ಎಲ್ಲಿ ಇರಲು ಸಾಧ್ಯ. ನಾನು ಕೇಳಲಾರೆ ಎಂದ. ಆಗ ಸೋಮಿ, ನೀವು ತಂದರಷ್ಟೇ ಮರ ನಿಮ್ಮ ಮಾತು ಕೇಳುತ್ತಿದೆ ಎಂದು ನಂಬುತ್ತೇನೆ ಎಂದಳು.

ಬೇಸರದಿಂದ ಕಟ್ಟಿಗೆ ಸಂಗ್ರಹಿಸಿದ ಬಳಿಕ ಆಲದ ಮರದ ಬಳಿ ಬಂದ ರಾಮ, ಹೆಂಡತಿ ಹೇಳಿದ ವಿಷಯವನ್ನು ಮರದ ಮುಂದೆ ಹೇಳಿದ. ಆಗ ಮರ ರಾಮನ ಬಳಿ ಇದ್ದ ಚೀಲವನ್ನು ಕೊಡುವಂತೆ ಕೇಳಿ ಅದರಲ್ಲಿ ಸ್ವಲ್ಪ ಕಾಯಿಗಳನ್ನು ತುಂಬಿಸಿ ಇದನ್ನು ನಿನ್ನ ಹೆಂಡತಿಗೆ ಕೊಡು ಎಂದಿತು. ರಾಮ ಮನೆಗೆ ಹೋಗಿ ಮರ ಕೊಟ್ಟ ಕಾಯಿಯ ಚೀಲವನ್ನು ಸೋಮಿಯ ಕೈಗೆ ಕೊಟ್ಟ. ಸೋಮಿ ಅದನ್ನು ತೆರೆದು ನೋಡಿದಾಗ ಅದರ ತುಂಬ ಬಂಗಾರದ ನಾಣ್ಯಗಳಿದ್ದವು. ಅವಳಿಗೆ ಆಶ್ಚರ್ಯದ ಜತೆಗೆ ರಾಮನ ಮಾತುಗಳ ಮೇಲೆ ನಂಬಿಕೆಯೂ ಬಂತು.

Advertisement

ಹೀಗೆ ನಿತ್ಯವೂ ರಾಮ ಕಾಡಿಗೆ ಹೊರಟಾಗ ಸೋಮಿ ಏನಾದರೊಂದು ಹೇಳಿ ಮರದ ಬಳಿ ಕೇಳಿ ತರುವಂತೆ ರಾಮನಿಗೆ ಒತ್ತಾಯಿಸ ತೊಡಗಿದಳು. ರಾಮನಿಗೂ ಈಗ ಖುಷಿಯಾಗುತ್ತಿತ್ತು. ತಾನು ಕಟ್ಟಿಗೆ ಸಂಗ್ರಹಿಸುವುದನ್ನು ಬಿಟ್ಟು ಮರದ ಬಳಿ ಬಂದು ತನಗೆ ಬೇಕಾದ್ದನ್ನು ಕೇಳಿ ಪಡೆದು ಹೋಗುತ್ತಿದ್ದ.

ಬಡವರಾಗಿದ್ದ ರಾಮ, ಈಗ ಶ್ರೀಮಂತನಾದ. ಆದರೆ ಊರಿನವರಿಗೆಲ್ಲ ಅಚ್ಚರಿ. ಏಕಾಏಕಿ ಇವನು ಇಷ್ಟು ಶ್ರೀಮಂತನಾಗಲು ಕಾರಣವೇನು ಎಂಬ ಪ್ರಶ್ನೆ ಕೆಲವರಲ್ಲಿ ಕಾಡುತ್ತಿದ್ದು. ಅದರಲ್ಲಿ ದುರಾಸೆಯ ಭೀಮನೂ ಇದ್ದ.

ಒಂದು ದಿನ ರಾಮ ಕಾಡಿಗೆ ಹೋಗುತ್ತಿದ್ದದನ್ನು ನೋಡಿ ಅವನಿಗೆ ಅರಿವಾಗದಂತೆ ಹಿಂಬಾಲಿಸತೊಡಗಿದ. ರಾಮ ಮರದ ಬಳಿ ಬಂದು ಚಿನ್ನವನ್ನು ಕೇಳಿದ. ಮರ ಕೊಟ್ಟಿತು. ಇದನ್ನು ನೋಡಿದ ಭೀಮನಿಗೆ ಆಶ್ಚರ್ಯವಾಯಿತು. ರಾಮ ಅಲ್ಲಿಂದ ಹೋದ ಮೇಲೆ ಅವನೂ ಮರದ ಬಳಿ ಬಂದು ಸ್ವಲ್ಪ ನಾಣ್ಯ ಕೊಡುವಂತೆ ಕೇಳಿದ ಮರ ನಾಣ್ಯ ಕೊಟ್ಟಿತು, ಚಿನ್ನ ಕೊಡುವಂತೆ ಕೇಳಿದ ಅದನ್ನೂ ಕೊಟ್ಟಿತು, ಬಟ್ಟೆ, ಪಾತ್ರೆಗಳನ್ನು ಕೇಳಿದ. ಅದನ್ನೂ ಕೊಟ್ಟಿತು. ಇಷ್ಟೊಂದು ಒಳ್ಳೆಯ ಮರವನ್ನು ತಾನು ತನ್ನ ಹಿತ್ತಲಿನಲ್ಲಿ ನೆಡಬೇಕು. ಆಗ ನಾನೂ ಇನ್ನಷ್ಟು ಶ್ರೀಮಂತನಾಗಬಹುದು ಎಂಬ ದುರಾಸೆ ಭೀಮನ ತಲೆಯಲ್ಲಿ ಹೊಳೆಯಿತು.

ಅವನು ನಾಲ್ಕೈದು ಮಂದಿ ಕೂಲಿಯಾಳುಗಳನ್ನು ಕರೆಸಿ ರಾತ್ರೋರಾತ್ರಿ ಮರವನ್ನು ಬುಡ ಸಮೇತ ಕೀಳಲು ಯೋಜನೆ ರೂಪಿಸಿದ. ಆಗ ಮರ, ಇಲ್ಲಿ ನನ್ನ ಬಂಧುಬಾಂಧವರಿದ್ದಾರೆ, ಸ್ನೇಹಿತರಿದ್ದಾರೆ. ಇವರಿಂದೆಲ್ಲ ದೂರವಿದ್ದು ಜೀವಿಸಲಾರೆ. ಇಲ್ಲಿರುವ ಪ್ರೀತಿ ನನಗೆ ನಿನ್ನ ಹಿತ್ತಲಿನಲ್ಲಿ ಸಿಗಲು ಸಾಧ್ಯವಿಲ್ಲ. ಹೀಗಾಗಿ ನನ್ನನ್ನು ಇಲ್ಲಿಂದ ಸಾಗಿಸಬೇಡ. ನಿನಗೆ ಏನು ಬೇಕೋ ಅದನ್ನು ಇಲ್ಲಿಯೇ ಕೊಡುತ್ತೇನೆ ಎಂದಿತು. ಆಗ ಭೀಮ, ನಿನಗೆ ಬೇಕಾದಷ್ಟು ನೀರು, ಆಹಾರ ಕೊಡುತ್ತೇನೆ. ಖಂಡಿತಾ ನಿನ್ನನ್ನು ಬದುಕಿಸುತ್ತೇನೆ ಎಂದು ಹೇಳಿ ಮರವನ್ನು ಕಿತ್ತು ತಂದು ತನ್ನ ಹಿತ್ತಲಿನೊಳಗೆ ಗುಂಡಿ ತೋಡಿ ನೆಟ್ಟ. ಅದಕ್ಕೆ ನೀರು, ಗೊಬ್ಬರವನ್ನೂ ಹಾಕಿದ. ಮರದ ಬಳಿಯೇ ನಾಣ್ಯಗಳನ್ನು ಕೇಳಿ ಕೂಲಿಯಾಳುಗಳಿಗೆ ಕೊಟ್ಟ. ಆದರೆ ಮರಕ್ಕೆ ತನ್ನ ಬಂಧುಬಾಂಧವರ, ಸ್ನೇಹಿತರ ನೆನಪಾಗತೊಡಗಿತು. ಜತೆಗೆ ಅತಿಯಾಗಿ ನೀರು, ಗೊಬ್ಬರ ಹಾಕಿದ್ದರಿಂದ ರೋಗವು ಮುತ್ತಿತು. ಕ್ರಮೇಣ ಅದರ ಬೇರು, ಕಾಂಡಗಳು ಕೊಳೆಯಲಾರಂಭಿಸಿ ವಾರದೊಳಗೆ ಮರ ಬಿದ್ದು ಸತ್ತು ಹೋಯಿತು. ಮರವನ್ನು ನಂಬಿ ಸಾಕಷ್ಟು ಮಂದಿಯಿಂದ ಸಾಲ ಮಾಡಿದ್ದ ಭೀಮನಿಗೆ ಈಗ ಚಿಂತೆಯಾಗತೊಡಗಿತು.

ಕಾಡಿನಲ್ಲಿ ಮರವಿಲ್ಲದೆ ಬೇಸರಗೊಂಡಿದ್ದ ರಾಮ ಅದರ ಬುಡದಲ್ಲಿ ಹುಟ್ಟುತ್ತಿದ್ದ ಮರಿಗೆ ನೀರು, ಗೊಬ್ಬರ ಹಾಕಿ ಬೆಳೆಸಿದ. ಕ್ರಮೇಣ ಅದು ದೊಡ್ಡದಾಯಿತು. ಅದು ರಾಮನ ಬಳಿ ಮಾತನಾಡ ತೊಡಗಿತು. ಆಗ ರಾಮ, ನಿನ್ನ ತಂದೆಗಾದ ಸ್ಥಿತಿ ನಿನಗೆ ಬಾರದೇ ಇರಲಿ. ನೀನು ಈ ಕಾಡಿನಲ್ಲಿ ಚೆನ್ನಾಗಿರು. ಯಾರಿಗೂ ಏನನ್ನೂ ಕೊಡಬೇಡ ಎಂದ. ಅಲ್ಲಿಗೆ ಆ ಮರ ಮೌನವಾಯಿತು.

ರಿಷಿಕಾ                    

Advertisement

Udayavani is now on Telegram. Click here to join our channel and stay updated with the latest news.

Next