Advertisement

ಬಂಟ್ವಾಳ: ಮುಕ್ಕುಡ ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವ ಸುನೀಲ್‌ ಭೇಟಿ

11:24 AM Jul 07, 2022 | Team Udayavani |

ಬಂಟ್ವಾಳ: ತಾಲೂಕಿನ ಪಂಜಿಕಲ್ಲು ಗ್ರಾಮದ ಮುಕ್ಕುಡ ಗುಡ್ಡ ಕುಸಿತದಿಂದ ಮೂವರು ಕಾರ್ಮಿಕರು ಮೃತಪಟ್ಟ ಸ್ಥಳಕ್ಕೆ ಗುರುವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಘಟನೆ ನಡೆದ ಮಾಹಿತಿ ಸಿಕ್ಕಿದ ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿ ಪೋಲಿಸ್ ಇಲಾಖೆ ತಹಶೀಲ್ದಾರ್ ಪಿ.ಡಿ.ಒ , ಅಗ್ನಿಶಾಮಕ ದಳ, ಎನ್.ಡಿ.ಆರ್.ಎಪ್ ಹಾಗೂ ಕಾರ್ಯಕರ್ತರು ಸ್ಥಳೀಯರು ಆಗಮಿಸಿ ಮಣ್ಣಿನೊಳಗೆ ಸಿಲುಕಿಕೊಂಡಿದ್ದ ನಾಲ್ವರನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಿದ್ದಾರೆ. ದುರದೃಷ್ಟವಶಾತ್  ನಾಲ್ವರು ಕಾರ್ಮಿಕರ ಪೈಕಿ ಓರ್ವನನ್ನು ಮಾತ್ರ ಜೀವಂತವಾಗಿ ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದರು.

ಪ್ರಾಥಮಿಕ ವರದಿಯ ಪ್ರಕಾರ ನಾಲ್ವರು ಕಾರ್ಮಿಕರು ಕೇರಳ ರಾಜ್ಯದವರು ಎಂದು  ತಿಳಿದು ಬಂದಿದೆ. ಪೂರ್ಣ ವರದಿ ಬಂದ ನಂತರ ಸರಕಾರದ ಮಟ್ಟದಲ್ಲಿ ಸಾಧ್ಯವಿರುವ ಪರಿಹಾರವನ್ನು ನೀಡುತ್ತೇವೆ ಎಂದು ಹೇಳಿದರು.

ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುವ ಮಳೆಗೆ ಪ್ರಕೃತಿಯಲ್ಲಿ ದೊಡ್ಡ ಮಟ್ಟದ ನಷ್ಟವನ್ನು ಉಂಟುಮಾಡಿದೆ. ಬೇರೆ ಬೇರೆ ಕಡೆಗಳಲ್ಲಿ ಅನೇಕ ಪ್ರಾಕೃತಿಕ ವಿಕೋಪ ಉಂಟಾಗಿದ್ದು, ಎಲ್ಲಾ ಪ್ರದೇಶಗಳಿಗೆ ಸಚಿವರು , ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೇಟಿ ನೀಡಿ ಪರಿಹಾರದ ಕಾರ್ಯವನ್ನು ಕೈಗೊಳ್ಳಲಿದ್ದೇವೆ. ಜೊತೆಗೆ ಜನರಿಗೆ ಧೈರ್ಯವನ್ನು ನೀಡುತ್ತವೆ. ಇಡೀ ಆಡಳಿತ ಯಂತ್ರವನ್ನು ಚುರುಕುಗೊಳಿಸಿ ಸನ್ನದ್ದ ಮಾಡುವ ಕೆಲಸ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಬಂಟ್ವಾಳ: ಶೆಡ್ ಮೇಲೆ ಗುಡ್ಡ ಕುಸಿದು ಗಾಯಗೊಂಡಿದ್ದ ಮತ್ತಿಬ್ಬರು ಸಾವು

Advertisement

ಪಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಹಾಗೂ ಮುಂಜಾಗೃತ ಕ್ರಮವಾಗಿ ಇಂದು ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ತುರ್ತು ಸಭೆಯನ್ನು ಕರೆಯಲಾಗಿದೆ. ಮುಂದಿನ 48 ಗಂಟೆಯಲ್ಲಿ ಬರಬಹುದಾದ ಮಳೆಯ ಅಂದಾಜು ಮಾಡಿಕೊಂಡು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ದ.ಕ.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹೃಷಿಕೇಶ್ ಭಗವಾನ್ ಸೋನಾವಣೆ, ಬಂಟ್ವಾಳ ತಹಶೀಲ್ದಾರ್ ಡಾ.ಸ್ಮಿತಾ ರಾಮು, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಪಿಡಿಒ ವಿದ್ಯಾಶ್ರೀ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್, ಪಿಎಸ್ಐ ಹರೀಶ್ ಕೆ.ಎ. ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next