Advertisement

Bantwal: ಮೇಲ್ಪತ್ತರ ಶಾಲಾ ಬಾವಿ ಕುಸಿತ

11:44 PM Jun 26, 2024 | Team Udayavani |

ಪುಂಜಾಲಕಟ್ಟೆ: ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸುಮಾರು 60 ವರ್ಷ ಹಳೆಯ ಬಾವಿಯೊಂದು ಸಂಪೂರ್ಣ ಕುಸಿದ ಘಟನೆ ಬುಧವಾರ ಸಂಭವಿಸಿದೆ.

Advertisement

ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ಮೇಲ್ಪತ್ತರ ಸ.ಕಿ.ಪ್ರಾ.ಶಾಲೆಯ ಮೈದಾನದಲ್ಲಿದ್ದ ಈ ಬಾವಿ ಮಧ್ಯಾಹ್ನ ಸುಮಾರು 11 ಗಂಟೆಯ ಹೊತ್ತಿಗೆ ದಿಢೀರನೆ ಕುಸಿದಿದೆ.

ಬಾವಿ ಸುಮಾರು 75 ಅಡಿ ಆಳವಿದ್ದು, ಹಿಂದೆ ಊರವರೆಲ್ಲರೂ ಈ ಬಾವಿಯನ್ನು ಆಶ್ರಯಿಸಿದ್ದರು. ಬಾವಿ ಕುಸಿದಿರುವುದರಿಂದ ಶಾಲೆಯ ಅಗತ್ಯಕ್ಕೆ ನೀರಿನ ಆತಂಕ ಎದುರಾಗಿದೆ ಎಂದು ಮುಖ್ಯ ಶಿಕ್ಷಕ ಸೀತಾರಾಮ ಬಿ.ಕೆ. ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಈ ಪ್ರದೇಶದಲ್ಲಿ ಬಿರುಗಾಳಿ ಸಹಿತ ಸಿಡಿಲು ಬಂದಿದ್ದು, ಹತ್ತಿರದ ತೋಟಕ್ಕೆ ಸಿಡಿಲು ಬಡಿದಿತ್ತು. ಇದರಿಂದ ಬಾವಿಯ ಅಡಿ ಭಾಗದ ಕಲ್ಲು ಸಡಿಲಗೊಂಡಿದ್ದು, ಕಲ್ಲುಗಳು ಕದಲಿದಂತೆ ಕಾಣುತ್ತಿತ್ತು. ಘಟನೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನರಿಕೊಂಬು: ಮನೆಗೆ ನುಗ್ಗಿದ ನೀರು
ಬಂಟ್ವಾಳ: ನರಿಕೊಂಬು ಗ್ರಾಮದ ಮೊಗರ್ನಾಡು ರಥಬೀದಿ ಪರಿಸರದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯ ಪರಿಣಾಮ ಗುಡ್ಡದ ನೀರು ಮನೆ ಹಾಗೂ ಇತರ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದೆ.

Advertisement

ರಥಬೀದಿಯಲ್ಲಿ ಬಾಡಿಗೆ ಮನೆ ಯೊಂದರಲ್ಲಿ ವಾಸವಾಗಿದ್ದ ಶ್ರೀಕಾಂತ್‌ ಅವರ ಮನೆಗೆ ನೀರು ನುಗ್ಗಿದ್ದು, ಮನೆಯಲ್ಲಿ ಶ್ರೀಕಾಂತ್‌ ದಂಪತಿ, ಇಬ್ಬರು ಮಕ್ಕಳು ಹಾಗೂ ತಂದೆ- ತಾಯಿ ಸಹಿತ ಹಲವರಿದ್ದರು. ಅವರೆಲ್ಲರೂ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಅಲ್ಲೇ ಪಕ್ಕದ ಆಹಾರ ಉತ್ಪನ್ನ ಗೋದಾಮು ಹಾಗೂ ಹಲವು ಅಂಗಡಿಗಳಿಗೂ ನೀರು ನುಗ್ಗಿದೆ. ದಿವಾಕರ ಭಂಡಾರಿ ಅವರ ಮನೆಯ ಆವರಣಕ್ಕೂ ನೀರು ನುಗ್ಗಿದೆ.

ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಕುಟ್ಟಿಕಳ ಸರಕಾರಿ ಶಾಲೆಯ ಹಿಂಬದಿಯ ಬರೆ ಹಾಗೂ ಆವರಣ ಗೋಡೆ ಕುಸಿದು ಹಾನಿಯಾಗಿದ್ದು, ಶಾಲಾ ಕಟ್ಟಡಕ್ಕೆ ಆತಂಕ ಎದುರಾಗಿದೆ.

ನೇತ್ರಾವತಿ: ಹೆಚ್ಚಿದ ನೀರಿನ ಹರಿವು
ಉಪ್ಪಿನಂಗಡಿ: ಬುಧವಾರದ ಭಾರೀ ಮಳೆಗೆ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯು ಮೈ ತುಂಬಿ ಹರಿಯುತ್ತಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲೂ ತೀವ್ರ ಭಾರೀ ಮಳೆ ಆಗುತ್ತಿರುವುದರಿಂದ ನದಿಯ ನೀರಿನ ಮಟ್ಟದಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ. ಸಮುದ್ರ ಮಟ್ಟಕ್ಕಿಂತ 26.1 ಮೀಟರ್‌ ಎತ್ತರದಲ್ಲಿ ನದಿಯ ನೀರಿನ ಹರಿವು ದಾಖಲಾಗಿದ್ದು, ಒಂದೇ ದಿನದಲ್ಲಿ 2 ಮೀಟರ್‌ನಷ್ಟು ನೀರು ಹೆಚ್ಚಳ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next