Advertisement

Bantwala: ಹಿಟಾಚಿ, ಸಕ್ಕಿಂಗ್‌ ಯಂತ್ರವಿದ್ದೇನು ಫ‌ಲ!

12:46 PM Dec 10, 2024 | Team Udayavani |

ಬಂಟ್ವಾಳ: ಸಾಮಾನ್ಯವಾಗಿ ಯಂತ್ರಗಳು, ವಾಹನಗಳು ಚಾಲನ ಸ್ಥಿತಿಯಲ್ಲಿದ್ದರೆ ಮಾತ್ರ ಸುಸ್ಥಿತಿಯಲ್ಲಿರಲು ಸಾಧ್ಯ. ಆದರೆ ಬಂಟ್ವಾಳ ಪುರಸಭೆಗೆ ಸುಮಾರ 2 ವರ್ಷಗಳ ಹಿಂದೆ ಖರೀದಿಸಿ ರುವ ಹೊಸ ಹಿಟಾಚಿ ಯಂತ್ರಕ್ಕೆ ಇನ್ನೂ ಕೂಡ ಆಪರೇಟರ್‌ ನೇಮಕವಾಗದೆ ಟರ್ಪಾಲು ಹಾಕಿ ನಿಲ್ಲಿಸಲಾಗಿದ್ದು, ಅಪರೇಟರ್‌ ನೇಮಕವಾಗುವ ವೇಳೆಗೆ ಯಂತ್ರದ ಸ್ಥಿತಿ ಹೇಗಿರಬಹುದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅದೇ ಸಮಯದಲ್ಲಿ ಖರೀದಿಸಿರುವ ಸಕ್ಕಿಂಗ್‌ ಯಂತ್ರ ಕೂಡ ನಿಂತ ಸ್ಥಿತಿಯಲ್ಲೇ ಇದೆ.

Advertisement

ಬಂಟ್ವಾಳ ಪುರಸಭೆಗೆ ಅಮೃತ ನಿರ್ಮಲ್‌ ಯೋಜನೆಯ ಮೂಲಕ ಮಂಜೂರಾದ 1 ಕೋ.ರೂ. ಅನುದಾನವನ್ನು ಬಿ.ಸಿ. ರೋಡಿ ನಲ್ಲಿ ನಿರ್ಮಿಸಿದ ಪಿಂಕ್‌ ಟಾಯ್ಲೆಟ್‌ ನಿರ್ಮಾಣ, ಹಿಟಾಚಿ, ಸಕ್ಕಿಂಗ್‌ ಯಂತ್ರ ಖರೀದಿ ಸೇರಿದಂತೆ ಮೊದಲಾದ ಯೋಜ ನೆಗೆ ಬಳಕೆ ಮಾಡಲಾಗಿದೆ. ಆದರೆ ಯಂತ್ರ ಖರೀದಿಸಿ ಹಾಗೇ ಇಟ್ಟರೆ ಅನುದಾನ ಬಳಕೆ ಮಾಡಿಯೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಕಂಚಿನಡ್ಕಪದವು ತ್ಯಾಜ್ಯ ಘಟಕದ ಬಳಕೆಗೆ ಖರೀದಿ
ಬಂಟ್ವಾಳ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕವು ಸಜೀಪನಡು ಗ್ರಾಮದ ಕಂಚಿನಡ್ಕಪದವುನಲ್ಲಿದ್ದು, ಅಲ್ಲಿ ಕಸ ವಿಲೇವಾರಿಯ ಉದ್ದೇಶದಿಂದ ಈ ಹಿಟಾಚಿ ಯಂತ್ರವನ್ನು ಖರೀದಿಸಲಾಗಿದೆ. ಪುರಸಭೆಯ ಅಧೀನದಲ್ಲಿ ಒಂದು ಜೆಸಿಬಿ ಯಂತ್ರವಿದ್ದು, ಚರಂಡಿಯ ಹೂಳೆತ್ತುವಿಕೆ, ನೀರಿನ ಪೈಪುಲೈನ್‌ ಕಾಮಗಾರಿಗೆ ಅದನ್ನು ಬಳಕೆ ಮಾಡಲಾಗುತ್ತದೆ. ಆದರೆ ಈಗ ತ್ಯಾಜ್ಯ ಘಟಕದಲ್ಲಿ ಕಸ ವಿಲೇವಾರಿಯ ಕಾಮಗಾರಿಯನ್ನೂ ಇದೇ ಜೆಸಿಬಿ ಯಂತ್ರವೇ ನಿರ್ವಹಿಸುತ್ತಿದೆ.

ವಿಶೇಷವೆಂದರೆ ಈ ಜೆಸಿಬಿ ಯಂತ್ರಕ್ಕೂ ಆಪರೇಟರ್‌ ಇಲ್ಲವಾಗಿದ್ದು, ಪೌರಕಾರ್ಮಿಕ ರೊಬ್ಬರು ಅದನ್ನು ನಿರ್ವಹಣೆ ಮಾಡುತ್ತಿ ದ್ದಾರೆ. ಅವರು ನಿರ್ವಹಣೆ ಮಾಡದೇ ಇದ್ದರೆ ಹಿಟಾಚಿ ರೀತಿಯಲ್ಲಿ ಅದನ್ನು ಕೂಡ ಹಾಗೇ ನಿಲ್ಲಿಸಬೇಕಾದ ಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ. ಹಿಟಾಚಿ ನಿರ್ವಹಣೆಗೆ ಹೆಚ್ಚು ಎಕ್ಸ್‌ಪರ್ಟ್‌ಗಳೇ ಬೇಕಿರುವುದರಿಂದ ಆಪರೇಟರ್‌ ನೇಮಕವಾಗದೆ ಇರುವುದ ರಿಂದ ಹಾಗೇ ನಿಲ್ಲಸಬೇಕಾಗಿದೆ.

ಈ ರೀತಿ ಹೊಸ ಯಂತ್ರವು ಹಾಗೇ ನಿಂತಿರುವುದರಿಂದ ಅದರ ಭಾಗಗಳು ತುಕ್ಕು ಹಿಡಿಯುವ ಸಾಧ್ಯತೆ ಹೆಚ್ಚಿದ್ದು, ಇನ್ನೂ ಹಾಗೇ ಬಿಟ್ಟರೆ ಮುಂದೆ ಹೊಸ ಯಂತ್ರವನ್ನೇ ಗುಜರಿಗೆ ಹಾಕಬೇಕಾದ ಅಪಾಯವೂ ಇದೆ. ಸಂಬಂಧಪಟ್ಟ ಅಧಿಕಾರ ವರ್ಗ ಸಮಸ್ಯೆಯನ್ನು ಗಂಭೀರ ವಾಗಿ ಪರಿಗಣಿಸಿ ಸರಕಾರದ ಲಕ್ಷಗಟ್ಟಲೆ ಹಣ ಪೋಲಾಗುವುದನ್ನು ತಪ್ಪಿಸಲು ಶೀಘ್ರ ಆಪರೇಟರ್‌ ನೇಮಕದ ಕಾರ್ಯ ಮಾಡಬೇಕಿದೆ.

Advertisement

ಸಕ್ಕಿಂಗ್‌ ಯಂತ್ರ
ಶೌಚಾಲಯಗಳ ಬಿಟ್‌ ತುಂಬಿದರೆ ಅದನ್ನು ಖಾಲಿ ಮಾಡುವ ದೃಷ್ಟಿಯಿಂದ ಪುರಸಭೆಗೆ ಒಂದು ಸಕ್ಕಿಂಗ್‌ ಯಂತ್ರವನ್ನೂ ಖರೀದಿ ಮಾಡಲಾಗಿದ್ದು, ಪ್ರಸ್ತುತ ಚಾಲಕರಿಲ್ಲದೆ ಅದು ಕೂಡ ಹಾಗೇ ನಿಂತಿದೆ. ಪ್ರಸ್ತುತ ಪುರಸಭಾ ವ್ಯಾಪ್ತಿಯಲ್ಲಿ ಬಿಟ್‌ ತುಂಬಿದರೆ ಖಾಸಗಿಯವರ ಮೂಲಕವೇ ಖಾಲಿ ಮಾಡಿಸಬೇಕಿದೆ. ಪುರಸಭೆಗೆ ನಿರ್ವಹಣೆ ಮಾಡುವುದು ಸಾಧ್ಯವಾಗದೆ ಇದ್ದರೆ ರಿಯಾಯಿತಿ ದರವನ್ನು ನಿಗದಿ ಮಾಡಿ ಖಾಸಗಿಯವರ ಮೂಲಕವೂ ನಿರ್ವಹಣೆ ಮಾಡಿಸಬಹುದು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

-ಪೌರಕಾರ್ಮಿಕರೊಬ್ಬರಿಂದ ಜೆಸಿಬಿಯ ನಿರ್ವಹಣೆ
-ಜನರ ತೆರಿಗೆ ಹಣ ಪೋಲು ತಪ್ಪಿಸಲು ಆಗ್ರಹ
-ತುಕ್ಕು ಹಿಡಿಯಲಾರಂಭಿಸಿದ ಯಂತ್ರೋಪಕರಣ
-ತ್ಯಾಜ್ಯ ಘಟಕದಲ್ಲಿ ಜೆಸಿಬಿಯೇ ಬಳಕೆ
-ಜಿಲ್ಲಾದಿಕಾರಿಗೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆ ವಾಪಸ್‌

3 ತಿಂಗಳಿನಿಂದ ಪ್ರಯತ್ನ
ಪುರಸಭಾವಾಸಿಗಳಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಆಪರೇಟರ್‌-ಡ್ರೈವರ್‌ಗಳ ನೇಮಕಕ್ಕೆ ಸಂಬಂಧಿಸಿ 3 ತಿಂಗಳಿಂದ ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ಈ ಕುರಿತು ಯೋಜನಾ ನಿರ್ದೇಶಕರ ಬಳಿಯೂ ಮಾತುಕತೆ ಮಾಡಿದ್ದೇನೆ. ಈ ನಿಟ್ಟಿನಲ್ಲಿ ಪುರಸಭೆಯ ಅಧಿಕಾರ ಗಳ ಪ್ರಯತ್ನವೂ ಬೇಕಿದೆ.
-ಬಿ. ವಾಸು ಪೂಜಾರಿ ಲೊರೆಟ್ಟೋ, ಅಧ್ಯಕ್ಷರು, ಬಂಟ್ವಾಳ ಪುರಸಭೆ

ಅನುಮೋದನೆಗೆ ಪ್ರಸ್ತಾವನೆ
ಹಿಟಾಚಿ ಯಂತ್ರದ ಆಪರೇಟರ್‌ ಸೇರಿದಂತೆ ಪುರಸಭೆಯ ಎಲ್ಲ ವಾಹನಗಳಿಗೆ ಚಾಲಕರ ನೇಮ ಕಾತಿಯ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಕೆ ಯಾದ ಪ್ರಸ್ತಾವನೆಯು ಹಿಂದೆ ಬಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಉತ್ತರವನ್ನು ನೀಡಿ ಮತ್ತೆ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುತ್ತಿದೆ.
– ಲೀನಾ ಬ್ರಿಟ್ಟೋ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next