ಬಂಟ್ವಾಳ: ಪ್ರತೀ ಚುನಾವಣೆಯ ಸಂದರ್ಭದಲ್ಲೂ ಸರಕಾರ ಸುರಕ್ಷೆಯ ದೃಷ್ಟಿಯಿಂದ ಮುನ್ನೆಚ್ಚರಿಕೆಯಾಗಿ ರೈತರಲ್ಲಿರುವ ಕೋವಿಗಳನ್ನು ಠೇವಣಿ ಇಡುವಂತೆ ತಿಳಿಸುತ್ತದೆ. ಆದರೆ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡುವ ಕೋವಿಗಳನ್ನು ಸಮರ್ಪಕವಾಗಿ ಇಡದೇ ಇರುವ ಕಾರಣ ಕೋವಿಗಳಲ್ಲಿ ತಾಂತ್ರಿಕ ದೋಷ ಕಂಡುಬರುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಚುನಾವಣೆ ಘೋಷಣೆಯ ಸಂದರ್ಭ ಜಿಲ್ಲಾಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆ ಅಥವಾ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಅಧಿಕೃತ ಕೋವಿ, ಮದ್ದುಗುಂಡು ವ್ಯಾಪಾರಸ್ಥರಲ್ಲಿ ಠೇವಣಿ ಇಡುವಂತೆ ಆದೇಶ ಮಾಡುತ್ತಾರೆ. ಅದರಂತೆ ಕೃಷಿಕರು ವ್ಯಾಪಾರಸ್ಥರ ಬಳಿ ಠೇವಣಿ ಇಟ್ಟರೆ ಅವರು ಜೋಪಾನವಾಗಿ ದಾಸ್ತಾನು ಇಡುತ್ತಾರೆ. ಅದಕ್ಕೆ ತಿಂಗಳಿಗೆ 200 ರೂ.ಗಳಂತೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಆದರೆ ಠಾಣೆಗಳಲ್ಲಿ ಠೇವಣಿ ಇಟ್ಟರೆ ಅವರು ಎಲ್ಲವನ್ನೂ ಗೋಣಿ ಚೀಲದಲ್ಲಿ ತುಂಬಿಸಿ ಇಡುತ್ತಿದ್ದು, ಅದು ಕೊಂಚ ಬಾಗುವ (ಬೆಂಡ್) ಸಾಧ್ಯತೆ ಇರುತ್ತದೆ. ಮೇಲ್ನೋಟಕ್ಕೆ ಅದು ಗಮನಕ್ಕೆ ಬಾರದೇ ಇದ್ದರೂ ಬಳಕೆ ಮಾಡುವಾಗ ಗೊತ್ತಾಗುತ್ತದೆ ಎಂದು ಬಂಟ್ವಾಳದ ಗ್ರಾಮೀಣ ಪ್ರದೇಶದ ರೈತರೊಬ್ಬರು ಅಭಿಪ್ರಾಯಿಸಿದ್ದಾರೆ.
ಹಿಂದೆ ಠಾಣೆಯಲ್ಲಿ ಠೇವಣಿ ಇಟ್ಟರೆ ಅದಕ್ಕೆ ಯಾವುದೇ ಶುಲ್ಕ ಪಾವತಿ ಇರಲಿಲ್ಲ. ಆದರೆ ಈಗ 200 ರೂ. ಶುಲ್ಕವನ್ನೂ ತೆಗೆದುಕೊಳ್ಳುತ್ತಿದ್ದು, ಶುಲ್ಕ ಪಡೆದೂ ಕೂಡ ಆ ರೀತಿ ಇಡುವುದು ಎಷ್ಟರಮಟ್ಟಿಗೆ ಸರಿ ಎಂದು ರೈತರು ಪ್ರಶ್ನಿಸುವಂತಾಗಿದೆ.