Advertisement

Bantwal: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತ್ಯು

01:34 AM May 06, 2024 | Team Udayavani |

ಬಂಟ್ವಾಳ: ಕಾಲು ಜಾರಿ ನೇತ್ರಾವತಿ ನದಿಗೆ ಬಿದ್ದ ಉಳ್ಳಾಲ ಮೂಲದ ಇಬ್ಬರು ಬಾಲಕಿಯರು ತಾಯಿ ಹಾಗೂ ಮನೆಮಂದಿಯ ಕಣ್ಣೆದುರೇ ಮುಳುಗಿ ಮೃತಪಟ್ಟ ದಾರುಣ ಘಟನೆ ರವಿವಾರ ಸಂಜೆ ನಾವೂರು ಗ್ರಾಮದ ನೀರಕಟ್ಟೆಯಲ್ಲಿ ಸಂಭವಿಸಿದೆ.

Advertisement

ಉಳ್ಳಾಲ ಬನ್ನಿಕೊಟ್ಯ ದರ್ಗಾ ರೋಡ್‌ ನಿವಾಸಿ ಇಲಿಯಾಸ್‌ ಅವರ ಪುತ್ರಿ ಮರಿಯಮ್‌ ನಾಫಿಯಾ (14) ಹಾಗೂ ಕೋಣಾಜೆ ಅಸೈಗೋಳಿ ನಿವಾಸಿ ಮೊಹಮ್ಮದ್‌ ಅನ್ಸಾರ್‌ ಅವರ ಪುತ್ರಿ ಆಶುರಾ (11) ಮೃತಪಟ್ಟವರು.

ಶಾಲೆಗೆ ರಜೆಯ ಹಿನ್ನೆಲೆಯಲ್ಲಿ ಮನೆ ಮಂದಿ ನಾವೂರಿನ ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದು, ರವಿವಾರ ಸಂಜೆ 5ರ ಸುಮಾರಿಗೆ ಮನೆ ಮಂದಿ ಎಲ್ಲರೂ ನೇತ್ರಾವತಿ ನದಿ ಕಿನಾರೆಗೆ ವಿಹಾರಕ್ಕಾಗಿ ತೆರಳಿದ್ದರು ಎನ್ನಲಾಗಿದೆ.

ಆಗ ಎಲ್ಲರೂ ನೀರಿನಲ್ಲಿ ಆಟ ವಾಡುತ್ತಿದ್ದು, ಇಬ್ಬರು ಬಾಲಕಿಯರು ಮುಂದೆ ಹೋಗಿ ಆಕಸ್ಮಿಕವಾಗಿ ನೀರಿನ ಆಳಕ್ಕೆ ಬಿದ್ದಿದ್ದಾರೆ. ಆದರೆ ಜತೆಗಿದ್ದ ಮನೆ ಮಂದಿಯಲ್ಲಿ ಯಾರಿಗೂ ಈಜಲು ಬಾರದೆ ಅವರನ್ನು ರಕ್ಷಿಸುವುದಕ್ಕೆ ಸಾಧ್ಯವಾಗದೆ ಬೊಬ್ಬೆ ಹಾಕಿದರು. ಮಕ್ಕಳು ಮನೆಮಂದಿಯ ಕಣ್ಣೆದುರೇ ನೀರಿನಲ್ಲಿ ಮುಳುಗಿದ್ದು, ರಕ್ಷಣೆಗಾಗಿ ಕೈ ಸನ್ನೆ ಮಾಡಿದರೂ ರಕ್ಷಿಸಲು ಸಾಧ್ಯವಾಗದ ಕರುಣಾಜನಕ ಸ್ಥಿತಿ ಅವರದಾಗಿತ್ತು.

ಬಳಿಕ ಸ್ಥಳೀಯ ಯುವಕರು ಆಗಮಿಸಿ ಮಕ್ಕಳನ್ನು ಮೇಲಕ್ಕೆತ್ತಿದ್ದು, ಅದಾಗಲೇ ಇಬ್ಬರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮೃತ ಬಾಲಕಿ ನಾಸಿಯಾ ಅವರ ತಂದೆ ಇಲಿಯಾಸ್‌ ಅವರು ಹಿಂದೆ ನಾವೂರಿನ ಮೈಂದಾಳದಲ್ಲೇ ನೆಲೆಸಿದ್ದು, ಕಳೆದ ಕೆಲವು ವರ್ಷಗಳಿಂದ ಅವರು ಉಳ್ಳಾಲದಲ್ಲಿ ವಾಸ್ತವ್ಯವಿದ್ದರು. ಮೃತ ಬಾಲಕಿಯರಿಬ್ಬರು ಸಂಬಂಧಿ ಗಳಾಗಿದ್ದು, ನಾಸಿಯಳು ಮೃತ ಆಶುರಾಳ ತಂದೆಯ ಅಕ್ಕನ ಮಗಳು.

Advertisement

ಮೃತದೇಹಗಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಳ್ಳಾಲದಿಂದ ಸಂಬಂಧಪಟ್ಟವರು ಆಗಮಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂದರ್ಭ ಆಸ್ಪತ್ರೆಯ ಬಳಿ ಹೆಚ್ಚಿನ ಮಂದಿ ಜಮಾಯಿಸಿದ್ದರು. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಾಯಕಾರಿ ಹೊಂಡಗಳು
ಪ್ರಸ್ತುತ ಬೇಸಗೆಯಲ್ಲಿ ನದಿಯಲ್ಲಿ ಬಹುತೇಕ ಭಾಗ ನೀರಿಲ್ಲದೇ ಇದ್ದರೂ ಕೆಲವೆಡೆ ನೀರಿರುವ ಪ್ರದೇಶವು ಹೆಚ್ಚು ಆಳದಿಂದ ಕೂಡಿರುತ್ತದೆ. ಅಲ್ಲಿ ನೀರಿಗಿಳಿಯುವುದು ಬಹಳ ಅಪಾಯಕಾರಿ. ಪ್ರಸ್ತುತ ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿರುವ ನೀರಕಟ್ಟೆ ಪ್ರದೇಶ ಕೂಡ ಹೆಚ್ಚು ಆಳದಿಂದ ಕೂಡಿದ ಪ್ರದೇಶವಾಗಿದ್ದು, ಇದು ಅಣೆಕಟ್ಟಿನ ಹಿನ್ನೀರು ಕೂಡ ಇಲ್ಲದ ಪ್ರದೇಶವಾಗಿದೆ.

2024ರಲ್ಲಿ 6 ಮಂದಿ ಸಾವು
ಬಂಟ್ವಾಳ ಭಾಗದಲ್ಲಿ ನೇತ್ರಾವತಿ ನದಿಯ ನೀರಿಗಿಳಿದು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, 2024ರಲ್ಲಿ ಒಟ್ಟು 6 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕಳೆದ ಜನವರಿ 18ರಂದು ನಾವೂರು ಗ್ರಾಮದ ಕೂಡಿಬೈಲಿನಲ್ಲಿ ನದಿ ಕಿನಾರೆಗೆ ಆಟವಾಡಲು ಹೋಗಿ ಬಾಲಕ ಪ್ರಜ್ವಲ್‌ ನಾಯಕ್‌ (14) ಮೃತಪಟ್ಟಿದ್ದರು. ಮಾ. 18ರಂದು ಶಂಭೂರಿನಲ್ಲಿ ಸ್ನೇಹಿತರ ಜತೆ ಈಜಲು ಬಂದ ಬೆಳ್ತಂಗಡಿಯ ನಡ ಗ್ರಾಮದ ಮಂಜೊಟ್ಟಿ ನಿವಾಸಿ ಲೋಹಿತಾಶ್ವ (30) ಮೃತಪಟ್ಟಿದ್ದರು. ಮಾ. 31ರಂದು ನರಿಕೊಂಬು ಗ್ರಾಮದ ಪೊಯಿತ್ತಾಜೆಯಲ್ಲಿ ಈಜಲು ತೆರಳಿದ ಬಿಕ್ರೋಡಿ ನಿವಾಸಿ ಅನುಷ್‌(20) ಮೃತಪಟ್ಟಿದ್ದರು. ಎ. 20ರಂದು ಕಡೇಶ್ವಾಲ್ಯದ ನೆಚ್ಚಬೆಟ್ಟುನಲ್ಲಿ ಈಜಲು ತೆರಳಿದ್ದ ಬಾಲಕ ಸುಹೈಲ್‌(13) ಮೃತಪಟ್ಟಿದ್ದರು. ಪ್ರಸ್ತುತ ಇಬ್ಬರು ಹೆಣ್ಣು ಮಕ್ಕಳು ಸೇರಿ ಈ ವರ್ಷ ಈ ತನಕ ಒಟ್ಟು 6 ಮಂದಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next