Advertisement

ಬಂಟ್ವಾಳ ಪುರಸಭೆ ಸಾಮಾನ್ಯ ಸಭೆ ಜಾರಿಯಾಗದ ನಿರ್ಣಯ: ಆಕ್ರೋಶ

12:12 PM May 19, 2022 | Team Udayavani |

ಬಂಟ್ವಾಳ: ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಸೇರಿದಂತೆ ಯಾವುದೇ ಕೆಲಸಗಳು ಸರಿಯಾದ ಸಮಯಕ್ಕೆ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪುರಸಭಾ ಸದಸ್ಯರು ಯಾರ್ಯಾರು ಯಾವ ಯಾವ ಕೆಲಸ ನಿರ್ವಹಿಸುತ್ತಾರೆ ಎಂಬ ಪಟ್ಟಿ ನೀಡುವಂತೆ ಆಗ್ರಹಿಸಿದರು.

Advertisement

ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್‌ ಶರೀಫ್‌ ಅಧ್ಯಕ್ಷತೆಯಲ್ಲಿ ಪುರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಗಂಗಾಧರ ಪೂಜಾರಿ ವಿಷಯ ಪ್ರಸ್ತಾವಿಸಿ, ಪುರಸಭಾ ಪಂಪುಹೌಸ್‌ಗೆ ಸಿಬಂದಿ ನೇಮಕಕ್ಕೆ ಕಳೆದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಅದು ಏನಾಗಿದೆ ಎಂದರು. ಇನ್‌ವರ್ಟರ್‌ ಅಳವಡಿಕೆಯ ನಿರ್ಣಯವೂ ಪ್ರಸ್ತಾವವಾಯಿತು. ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗದೇ ಇದ್ದಾಗ ಸದಸ್ಯರೆಲ್ಲರೂ ಆಕ್ರೋಶ ವ್ಯಕ್ತಪಡಿಸಿದರು. ಎಂಜಿನಿಯರ್‌ ಡೊಮಿನಿಕ್‌ ಡಿ’ಮೆಲ್ಲೊ ಮಾತನಾಡಿ, ತನಗೆ ಹಲವು ಜವಾಬ್ದಾರಿಗಳನ್ನು ನೀಡಿದ ಪರಿಣಾಮ ಯಾವುದೇ ಕೆಲಸಗಳನ್ನು ಮಾಡಲು ಆಗುತ್ತಿಲ್ಲ ಎಂದರು. ಇಲ್ಲಿ ಯಾವುದೇ ಕೆಲಸಕ್ಕೆ ಸಮರ್ಪಕ ಸಿಬಂದಿಯಿಲ್ಲ ಎಂದು ಸಿಬಂದಿ ರಝಾಕ್‌ ಹೇಳಿದರು. ನಿರ್ಣಯಗಳು ಅನುಷ್ಠಾನ ಆಗದೇ ಇರುವ ಕುರಿತು ಸದಸ್ಯ ಎ.ಗೋವಿಂದ ಪ್ರಭು ಅಧ್ಯಕ್ಷರ ವಿರುದ್ಧ ಆರೋಪಿಸಿದಾಗ, ಅಧಿಕಾರಿಗಳು ಯಾಕೆ ಇರುವುದು, ಕೇವಲ ಸಂಬಳ ತೆಗೆದುಕೊಳ್ಳುವುದಕ್ಕಾ ಎಂದು ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.

ನಗರ ವ್ಯಾಪ್ತಿಯಲ್ಲಿ ಕಸ ಹಾಕುವುದನ್ನು ತಡೆಯಲು ಅಳವಡಿಸಿರುವ ಸಿಸಿ ಕೆಮರಾ ಕಾರ್ಯಾಚರಿಸದ ಕುರಿತು ಸದಸ್ಯ ಗೋವಿಂದ ಪ್ರಭು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶೀಘ್ರ ಆ್ಯಕ್ಟಿವೇಟ್‌ ಆಗುತ್ತದೆ ಎಂದು ಎಂಜಿನಿಯರ್‌ ಉತ್ತರಿಸಿದರು.

ಬಿ.ಸಿ.ರೋಡ್‌ನ‌ ಕಟ್ಟಡವೊಂದರ ಪ್ರವೇಶ ಪತ್ರ ರದ್ದು ಪಡಿಸುವ ರಾಜ್ಯ ಅಗ್ನಿಶಾಮಕ ನಿರ್ದೇಶನಾಲಯದ ಮಹಾನಿರ್ದೇಶಕರ ಪತ್ರದ ಕುರಿತು ಸದಸ್ಯ ಗೋವಿಂದ ಪ್ರಭು ಪ್ರಸ್ತಾವಿಸಿ ಯಾವ ರೀತಿ ವ್ಯವಹಾರ ನಡೆದಿದೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದಾಗ ಅಧ್ಯಕ್ಷರು ಹಾಗೂ ಅವರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಬಿ.ಸಿ.ರೋಡ್‌ ಸರ್ಕಲ್‌ನಲ್ಲಿ ಎಲ್ಲ ರಸ್ತೆಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಬ್ಯಾನರ್‌ ಅಳವಡಿಸಿರುವ ವಿರುದ್ಧ ಕ್ರಮಜರಗಿಸಬೇಕು ಎಂದು ಸಭೆಯಲ್ಲಿ ಆಗ್ರಹ ಕೇಳಿಬಂತು. ಪುರಸಭೆಗೆ ಕಾವಲುಗಾರ ನೇಮಕದ ಕುರಿತು ನಿರ್ಣಯ ಆಗಿದ್ದರೂ, ಅನುಷ್ಠಾನ ಆಗದೇ ಇರುವುದಕ್ಕೆ ಸದಸ್ಯ ವಾಸು ಪೂಜಾರಿ ಅವರು ಆಕ್ಷೇಪ ವ್ಯಕ್ತಪಡಿಸಿದರು. ಪಂಪ್‌ ಹೌಸ್‌ ನಿರ್ವಹಣೆ ಇಲ್ಲದಿರುವ ಕುರಿತು ಸದಸ್ಯ ಜನಾರ್ದನ ಚಂಡ್ತಿಮಾರ್‌ ಸಭೆಗೆ ತಿಳಿಸಿದರು. ಪುರಸಭೆಯ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸಂಸ್ಥೆಯೊಂದರ ಅಧಿಕಾರಿಗಳು ಸಭೆಗೆ ಬಂದು ಕೂತಿರುವ ಕುರಿತು ಗೋವಿಂದ ಪ್ರಭು ಆಕ್ಷೇಪಿಸಿ, ಈ ಹಿಂದೆ ರಾಮಕೃಷ್ಣ ಮಿಷನ್‌ ನವರು ಬಂದಾಗ ಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜಾ ಮತ್ತಿತರರು ಉಪಸ್ಥಿತರಿದ್ದರು.

Advertisement

ಸಂಚಾರ ಸಮಸ್ಯೆ ಪ್ರಸ್ತಾವ

ಮೆಲ್ಕಾರ್‌ ಭಾಗದಲ್ಲಿ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಟ್ರಾಫಿಕ್‌ ಸಿಬಂದಿಯನ್ನು ನೇಮಿಸುವಂತೆ ಸದಸ್ಯ ಅಬೂಬಕ್ಕರ್‌ ಸಿದ್ದಿಕ್‌ ಆಗ್ರಹಿಸಿದರು. ಬಂಟ್ವಾಳ ಪೇಟೆಯಲ್ಲಿ ರಸ್ತೆಯಲ್ಲೇ ವಾಹನ ನಿಲ್ಲಿಸಿ ಸಮಸ್ಯೆಯಾಗುತ್ತಿದೆ ಎಂದು ಸದಸ್ಯ ಗೋವಿಂದ ಪ್ರಭು ಹೇಳಿದರು. ಜಕ್ರಿಬೆಟ್ಟು ಭಾಗದಲ್ಲಿ ಹೆಚ್ಚಿನ ಅಪಘಾತಗಳು ಉಂಟಾಗುತ್ತಿದೆ ಎಂದು ಸದಸ್ಯ ಜರ್ನಾರ್ದನ ಚಂಡ್ತಿಮಾರ್‌ ಪ್ರಸ್ತಾವಿಸಿದರು. ಟ್ರಾಫಿಕ್‌ ಜಾಮ್‌ ಹಾಗೂ ವಾಹನಗಳ ಪಾರ್ಕಿಂಗ್‌ ಸಮಸ್ಯೆಗಳ ಕುರಿತು ಸದಸ್ಯರ ದೂರುಗಳನ್ನು ದಾಖಲಿಸಿಕೊಂಡ ಸಂಚಾರ ಪೊಲೀಸ್‌ ಠಾಣೆಯ ವಿಜಯ್‌ ಗರಿಷ್ಠ ಪ್ರಮಾಣದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next