ಬಂಟ್ವಾಳ: ವ್ಯಕ್ತಿಯೋರ್ವರಿಗೆ ಪತ್ನಿ ಸಹಿತ ತಂಡವೊಂದು ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಜ. 23ರಂದು ಮೆಲ್ಕಾರ್ನಲ್ಲಿ ನಡೆದಿದೆ.
ಮಂಗಳೂರು ನಿವಾಸಿ ಕಿಶೋರ್ ಕುಮಾರ್ಬೋಳಾರ್ ಗಾಯಗೊಂಡವರು. ಅವರ ಪತ್ನಿ ಶುಭಾ, ಶಿವಪ್ರಸಾದ್ ಶೆಟ್ಟಿ ಹಾಗೂ ಇತರ ಇಬ್ಬರು ಪ್ರಕರಣದ ಆರೋಪಿಗಳಾಗಿದ್ದಾರೆ.
ಕಿಶೋರ್ ಅವರು 2008ರಲ್ಲಿ ಶುಭಾ ಅವರನ್ನು ವಿವಾಹವಾಗಿದ್ದು, ಈ ನಡುವೆ ಆಕೆಯ ಸಹೋದ್ಯೋಗಿ ಶಿವಪ್ರಸಾದ್ ಶೆಟ್ಟಿ ಆಕೆಗೆ ಸಂದೇಶವೊಂದನ್ನು ಕಳುಹಿಸಿದ್ದನು. ಅದನ್ನು ಪ್ರಶ್ನಿಸಿದ ಕಾರಣಕ್ಕೆ ಅವರಿಬ್ಬರ ಮಧ್ಯೆ ಕೌಟುಂಬಿಕ ತಕರಾರು ಎದುರಾಗಿ ಪ್ರಕರಣ ನ್ಯಾಯಾಲಯದಲ್ಲಿತ್ತು.
ಜ. 23ರಂದು ಸಂಜೆ ಕಿಶೋರ್ ಮೆಲ್ಕಾರಿನ ವಸತಿ ಸಮುಚ್ಚಯಕ್ಕೆ ಬಂದಿದ್ದ ವೇಳೆ ಪತ್ನಿ ಹಾಗೂ ಆರೋಪಿಗಳ ತಂಡ ಆಗಮಿಸಿ ಮನೆಯನ್ನು ಖಾಲಿ ಮಾಡಬೇಕು ಎಂದು ಹೇಳಿದ್ದಾರೆ. ಬಳಿಕ ಶಿವಪ್ರಸಾದ್ ಶೆಟ್ಟಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳು ಕಾರಿನಲ್ಲಿ ಪರಾರಿಯಾಗುವ ವೇಳೆ ನಿಲ್ಲುವಂತೆ ಸೂಚನೆಕೊಟ್ಟಾಗ ಕಾರನ್ನು ಮೈಮೇಲೆ ಹತ್ತಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯಿಂದ ಕಿಶೋರ್ಗೆ ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.