ಬಂಟ್ವಾಳ: ಒಂಟಿ ಮಹಿಳೆ ವಾಸವಿದ್ದ ಮನೆಯೊಂದರ ಹೊರಗಡೆ ತೊಳೆದು ಒಣಗಲು ಇಟ್ಟಿದ್ದ ಪಾತ್ರೆಗಳನ್ನು ಕಳ್ಳರು ಎಗರಿಸಿದ ಘಟನೆ ಜೂ. 25ರಂದು ಮಣಿನಾಲ್ಕೂರು ಗ್ರಾಮದ ಅಗರಗಂಡಿ ಬಳಿಯ ಹಂಡೀರಿನಲ್ಲಿ ನಡೆದಿದೆ.
ಹಂಡೀರು ನಿವಾಸಿ ಮುತ್ತು ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಒಬ್ಬಂಟಿಯಾಗಿ ವಾಸಿಸುತ್ತಿರುವ ಅವರು ಮನೆಯ ಸಮೀಪದಲ್ಲೇ ಇರುವ ಮಗಳ ಮನೆಗೆ ಹೋಗಿದ್ದ ವೇಳೆ ಘಟನೆ ನಡೆದಿದೆ. ಸ್ನಾನ ಮಾಡಲು ಉಪಯೋಗಿಸುವ ದೊಡ್ಡ ಹಂಡೆ, ಅಡುಗೆಯ 3 ಪಾತ್ರೆಗಳು, 2 ಫೈಬರ್ ಕುರ್ಚಿಗಳನ್ನು ಕಳವು ಮಾಡಲಾಗಿದ್ದು, ಅದರ ಮೌಲ್ಯ ಒಟ್ಟು 3,500 ರೂ. ಎಂದು ಅಂದಾಜಿಸಲಾಗಿದೆ.
ಘಟನೆಯ ಕುರಿತು ಮುತ್ತು ಅವರ ಅಳಿಯ ಅಗರಗಂಡಿ ನಿವಾಸಿ ಪದ್ಮನಾಭ ನಾಯ್ಕ ಅವರು ದೂರು ನೀಡಿದ್ದು, ಜೂ. 25ರ ಬೆಳಗ್ಗೆ 10ರ ಸುಮಾರಿಗೆ ಅವರ ಪತ್ನಿ ತಾಯಿ ಮನೆಗೆ ತೆರಳಿ ಪಾತ್ರೆಗಳನ್ನು ತೊಳೆದು ಮನೆಯ ಹೊರಗಡೆ ಇಟ್ಟಿದ್ದು, ಬಳಿಕ ತಾಯಿಯೊಂದಿಗೆ ತಮ್ಮ ಮನೆಗೆ ಆಗಮಿಸಿದ್ದರು. ಸಂಜೆ 5ರ ಸುಮಾರಿಗೆ ಪಾತ್ರೆಗಳನ್ನು ಒಳಗಡೆ ಇಡಲು ತೆರಳಿದಾಗ ಪಾತ್ರೆಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಪಿಎಸ್‌ಐ ಸಂಜೀವ ಹಾಗೂ ಸಿಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ.
Related Articles
ಗ್ರಾಮದಲ್ಲಿ ಹೆಚ್ಚಿದ ಕಳ್ಳತನ
ಕಳೆದ ಹಲವು ಸಮಯಗಳಿಂದ ಮಣಿನಾಲ್ಕೂರು ಗ್ರಾಮದಲ್ಲಿ ನಿರಂತರವಾಗಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಇದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ. ಜತೆಗೆ ಪ್ರತೀ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ ಕಳ್ಳರ ಕುರಿತು ಸಾರ್ವಜನಿಕ ಮಾಹಿತಿ ನೀಡಿದರೆ ಮುಂದಿನ ದಿನಗಳಲ್ಲಿ ಅಂತಹ ಆರೋಪಿಗಳ ಕುರಿತು ನಾವು ಎಚ್ಚರಿಕೆಯಿಂದ ಇರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.