ಬೆಂಗಳೂರು: ಸಂಸದ ಡಿ.ಕೆ.ಸುರೇಶ್ ನಿವಾಸದಲ್ಲಿ ಶುಕ್ರವಾರ ರಾತ್ರಿ ಸಚಿವರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಬಹುತೇಕ ಎಲ್ಲರೂ ಭಾಗವಹಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭಾ ಅಭ್ಯರ್ಥಿ ಅಜಯ್ ಮಾಕೆನ್, ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಸಚಿವರಾದ ಡಾ| ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಮಧು ಬಂಗಾರಪ್ಪ, ರಾಮಲಿಂಗಾ ರೆಡ್ಡಿ, ಶಿವಾನಂದ ಪಾಟೀಲ್, ಈಶ್ವರ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ವೆಂಕಟೇಶ್, ಸಂಸದ ಡಿ.ಕೆ.ಸುರೇಶ್ ಸಹಿತ ಅನೇಕರು ಭಾಗವಹಿಸಿದ್ದರು.
ಆದರೆ ಡಾ| ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ ಗೈರು ಹಾಜರಾಗಿದ್ದರು.
ಈ ಸಭೆಯಲ್ಲಿ ಭೋಜನದ ಜತೆಗೆ ರಾಜ್ಯಸಭೆ ಮತ್ತು ಲೋಕಸಭೆ ಚುನಾವಣೆ ಬಗ್ಗೆಯೂ ಚರ್ಚೆ ನಡೆಯಿತು. ವಿಶೇಷವಾಗಿ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಮೂವರು ಅಧಿಕೃತ ಅಭ್ಯರ್ಥಿಗಳು ಗೆಲುವಿನ ದಡ ಸೇರಬೇಕು, ಯಾವುದೇ ಕಾರಣಕ್ಕೂ ನಮ್ಮ ಮತಗಳು 5ನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕಡೆ ವಾಲದಂತೆ ನೋಡಿಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗಿದೆ.
ಅಧಿವೇಶನದ ಬಳಿಕ ದಿಲ್ಲಿಗೆ ತೆರಳಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ ಸಾಧ್ಯವಾದರೆ ಮಾರ್ಚ್ ಮೊದಲ ಇಲ್ಲವೇ 2ನೇ ವಾರದೊಳಗೆ ಕನಿಷ್ಠ 15 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವಂತೆ ನೋಡಿಕೊಳ್ಳಬೇಕು. ಅಭ್ಯರ್ಥಿಗಳ ಪಟ್ಟಿ ವಿಳಂಬವಾದರೆ ಪ್ರಚಾರಕ್ಕೆ ಸಮಯದ ಕೊರತೆಯಿಂದಾಗಿ ಗೆಲ್ಲುವುದು ಕಷ್ಟವಾಗುತ್ತದೆ. ಆದಷ್ಟು ಬೇಗ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ.