Advertisement
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪವಿರುವ ಕಾಂಪ್ಲೆಕ್ಸ್ ಒಂದರಲ್ಲಿ ರಿಲಯನ್ಸ್ ಕಂಪೆನಿಯ ಟವರ್ ಇದೆ. ಆ ಟವರ್‌ನ ಕೇಬಲ್‌ಗಳನ್ನು ನಗರಸಭೆಯ ಒಳಚರಂಡಿಯೊಂದಿಗೆ ಜೋಡಿಸಿದ್ದಾರೆ. ಅದರ ಸಾಧಕ-ಬಾಧಕಗಳನ್ನು ಅರಿಯದೆ ಕಾರ್ಯನಿರ್ವಹಿಸಿದ ಕಾರಣ ಕೇಬಲ್‌ಗಳು ನಗರಸಭೆಯ ಒಳಚರಂಡಿಗೆ ಅಡ್ಡ ಬಂದು ಡ್ರೈನೇಜ್ ನೀರು ಸರಾಗವಾಗಿ ಇಳಿದು ಮುಂದೆ ಹೋಗದೆ ಅಲ್ಲಿಯೇ ಗೊಬ್ಬರದ ರೀತಿ ಮುದ್ದೆಯಾಗಿ ಉಳಿದುಕೊಂಡಿದೆ. ಪರಿಣಾಮ ಒಳಚರಂಡಿ ಬ್ಲಾಕ್ ಆಗಿ ಗಲೀಜು ನೀರು ಕಾಂಪ್ಲೆಕ್ಸ್‌ನ ಡ್ರೈನೇಜ್‌ನಲ್ಲಿ ಉಕ್ಕಿ ಮೇಲ್ಗಡೆಯಿಂದ ಹರಿದು ಹೋಗುತ್ತಲಿದೆ.
ನಗರಸಭೆಯ ಪೌರಕಾರ್ಮಿಕರು ಹಲವು ಬಾರಿ ಬಂದು ಪರಿಶೀಲಿಸಿದಾಗ ಒಳಚರಂಡಿಯಲ್ಲಿ ಕಂಪೆನಿಯೊಂದರ ಕೇಬಲ್‌ಗಳು ಅಡ್ಡ ಬಂದಿರುವುದು ಗೊತ್ತಾಗಿತ್ತು. ಇದರಿಂದ ಕಾರ್ಯಾಚರಣೆಗೂ ಅಡ್ಡಿಯಾಗಿತ್ತು. ಕಂಪೆನಿಯವರು ಅಗೆದಾಗ ನಗರಸಭೆ ಹಾಕಿದ್ದ ಕೊಳವೆಗಳು ಒಡೆದು ಹೋಗಿತ್ತು. ನಗರಸಭೆ ಮತ್ತು ಕಂಪೆನಿಯವರ ಜಟಾಪಟಿಯಿಂದ ನಾಗರಿಕರಿಗೆ ಸಮಸ್ಯೆ ಹೆಚ್ಚಾಗುತ್ತಿದೆ. ಪರಿಸರ ದುರ್ನಾತದಿಂದ ಕೂಡಿರುವುದು ಮಾತ್ರವಲ್ಲದೆ ಕುಡಿಯುವ ನೀರು ಕೂಡ ಕಲುಷಿತಗೊಂಡಿದೆ. ಸಾಂಕ್ರಾಮಿಕ ರೋಗ ಹಬ್ಬುವ ಭೀತಿಯೂ ಬನ್ನಂಜೆಯಲ್ಲಿದೆ. ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಬನ್ನಂಜೆ ನಾಗರಿಕರು ಆಗ್ರಹಿಸಿದ್ದಾರೆ.