ಬೆಂಗಳೂರು: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ 2019ರಲ್ಲಿ ನಡೆದಿದ್ದ ಉದ್ಯಮಿಯೊಬ್ಬರ ಪುತ್ರನ ಅಪಹರಣ ಹಾಗೂ ಕೊಲೆ ಬೆದರಿಕೆ ಪ್ರಕರಣ ಸಂಬಂಧ ಭೂಗತ ಪಾತಕಿ ಬನ್ನಂಜೆ ರಾಜನ ಸಹಚರ ಶಶಿಕುಮಾರ್ ಅಲಿಯಾಸ್ ಶಶಿ ಪೂಜಾರಿ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಶಶಿ ಪೂಜಾರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆರೋಪ ಪಟ್ಟಿಯಲ್ಲಿನ ಹಲವು ಅಂಶಗಳನ್ನು ಉಲ್ಲೇಖೀಸಿ, ಆರೋಪಿ (ಅರ್ಜಿದಾರ) ಹಲವು ಬಾರಿ ಬನ್ನಂಜೆ ರಾಜನನ್ನು ಭೇಟಿಯಾಗಿದ್ದಾನೆ ಎನ್ನುವುದು ತನಿಖೆ ವೇಳೆ ದೃಢಪಟ್ಟಿದೆ. ಹಾಗಾಗಿ, ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ಆರೋಪಿಯನ್ನು ಬಿಡುಗಡೆ ಮಾಡಿದರೆ ಸಮಾಜಕ್ಕೆ ಅಪಾಯವಿದೆ ಎಂದು ಜಾಮೀನು ತಿರಸ್ಕರಿಸಿರುವುದಕ್ಕೆ ಕಾರಣ ನೀಡಿರುವ ನ್ಯಾಯಪೀಠ, ಆರೋಪಿ ತನಗೂ ಕೃತ್ಯಕ್ಕೂ ಸಂಬಂಧವಿಲ್ಲವೆಂದು ಹೇಳುತ್ತಿದ್ದಾನೆ. ಆದರೆ ಅರ್ಜಿದಾರರ ಸಹೋದರ ಮತ್ತು ಈ ಪ್ರಕರಣದ ಪ್ರಮುಖ ಆರೋಪಿ ಜೈಲಿನಲ್ಲಿದ್ದುಕೊಂಡೇ ಅರ್ಜಿದಾರರ ಹೆಸರಿನಲ್ಲಿ ಸಿಮ್ಕಾರ್ಡ್ ಪಡೆದಿದ್ದಾನೆ ಎಂದು ಹೇಳಿದೆ. ಈ ಪ್ರಕರಣದಲ್ಲಿ ಅರ್ಜಿದಾರ ಎರಡನೇ ಆರೋಪಿ ಮತ್ತು ಬನ್ನಂಜೆ ರಾಜ ಮೊದಲನೇ ಆರೋಪಿ.