Advertisement

ಕಂಡದ್ದನ್ನು ಕಂಡಂತೆ ಹೇಳುತ್ತಿದ್ದ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು

01:34 AM Aug 04, 2024 | Team Udayavani |

ಬೆಂಗಳೂರು: ಯಾವುದೇ ವಿಷಯವಾಗಲಿ ಸತ್ಯವಾಗಿ ಕಂಡದ್ದನ್ನು ಯಾರ ಮುಲಾಜು ಇಲ್ಲದೇ ಹೇಳುವಂತಹ ಗುಣವನ್ನು ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು ರೂಢಿಸಿಕೊಂಡಿದ್ದರು ಎಂದು ವಿದ್ವಾಂಸ ಪ್ರೊ| ಪಾದೇಕಲ್ಲು ವಿಷ್ಣು ಭಟ್ಟ ಅಭಿಪ್ರಾಯಪಟ್ಟರು.

Advertisement

ನಗರದ ಬೆಂಗಳೂರು ಗಾಯನ ಸಮಾಜದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಆಚಾರ್ಯರ ಜನ್ಮಾರಾಧನೆ 88′ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಗೋವಿಂದಾಚಾರ್ಯರು ಉದಯ ವಾಣಿ ಪತ್ರಿಕೆಯಲ್ಲಿ ಬರೆಯುತ್ತಿದ್ದ “ಕಿಷ್ಕಿಂದ ಕಾಂಡ’ ಎಂಬ ಅಂಕಣವನ್ನು ನಾನು ಪ್ರೌಢಶಾಲೆಯಲ್ಲಿ ಇದ್ದಾಗ ಮಕ್ಕಳೆಲ್ಲಾ ಅತ್ಯಂತ ಕುತೂಹಲ ದಿಂದ ಓದುತ್ತಿದ್ದೆವು. ಸರಳವಾಗಿ, ಸ್ಪಷ್ಟವಾಗಿ ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಿದ್ದರು. ಜತೆಗೆ ಯಾವುದೇ ವಿಶೇಷ ದಿನ ಅಥವಾ ಹಬ್ಬಗಳ ಸಂದರ್ಭದಲ್ಲಿ ವಿಶೇಷಗಳ ಲೇಖನಗಳು ಅವರಲ್ಲಿ ಸದಾ ಸಿದ್ಧವಾಗಿರುತ್ತಿದ್ದವು ಎಂದರು.

ಬನ್ನಂಜೆ ಅವರು 44 ವರ್ಷಗಳ ಕಾಲ ಈ ಉತ್ಸವದಲ್ಲಿ ಉಪನ್ಯಾಸ ಮಾಡಿದ್ದಾರೆ. ರಾಮಾಯಣ, ಮಹಾಭಾರತ ಅವರಿಗೆ ಕಂಠಸ್ಥವಾಗಿತ್ತು. ಅವರು ಸಾಂಪ್ರದಾಯಿಕರನ್ನು ಹಾಗೂ ಆಧುನಿಕತೆಯರನ್ನೂ ಟೀಕಿಸುತ್ತಿದ್ದರು. ಆದರೂ ಇವರಿಬ್ಬರಿಗೂ ಪ್ರಿಯರಾಗಿದ್ದರು. ಆಕಾಶವಾಣಿಯವರು ಬನ್ನಂಜೆ ಅವರನ್ನು ಸಂದರ್ಶನ ಮಾಡುವ ಅವಕಾಶವನ್ನು ಒದಗಿಸಿಕೊಟ್ಟಿದ್ದರು. ಆದ್ದರಿಂದ ಅವರ ಧ್ವನಿ ಮುದ್ರಣ ಭಂಡಾರ ಜೀವಂತವಾಗಿದೆ ಎಂದು ತಿಳಿಸಿದರು.

ಆಚಾರ್ಯರು ಹೇಳಿದ ಆತ್ಮ ಕಥನ “ಆತ್ಮನಿವೇದನೆ’ ಮತ್ತು “ಪಡುಮುನ್ನೂರು ನಾರಾಯಣಾಚಾರ್ಯರು ನನ್ನ ಪಿತಾಮಹ’ ಕೃತಿ ಗಳನ್ನು ಬಿಡುಗಡೆಗೊಳಿಸಲಾಯಿತು.

ತದನಂತರ ಆತ್ಮಕಥನ ಕೃತಿಯ ಬಗ್ಗೆ ಶತಾವಧಾನಿ ಡಾ| ಆರ್‌. ಗಣೇಶ್‌ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ವ್ಯಕ್ತಿಗಳ ದಾಖಲೆ ಗಳಿಂತ ಅವರ ವಿಚಾರಗಳು ದಾಖಲೆಗಳಾಗುತ್ತಿದ್ದವು. ಇದೀಗ ಬನ್ನಂಜೆ ಅವರ ಬಗ್ಗೆ ಪುಸ್ತಕ ರೂಪದಲ್ಲಿ ದಾಖಲಾಗಿರುವುದು ಸಂತಸದ ವಿಷಯ ಎನ್ನುತ್ತಾ ಈ ಪುಸ್ತಕ ಅಪ್ಪ, ಅಮ್ಮ, ನನ್ನ ಕುಟುಂಬ, ಬಾಲ್ಯ-ಅಧ್ಯಯನ, ಸ್ವಾಮಿಗಳು-ವಿದ್ವಾಂಸರು ಹೀಗೆ 17 ಶೀರ್ಷಿಕೆಗಳಲ್ಲಿ ಈ ಪುಸ್ತಕ ಮೂಡಿ ಬಂದಿದೆ. ಈ ಪುಸ್ತಕದಲ್ಲಿ ಬನ್ನಂಜೆ ವ್ಯಕ್ತಿತ್ವ ತುಂಬಾ ಪ್ರಾಮಾಣಿಕವಾಗಿ ಕಾಣುತ್ತದೆ ಎಂದರು.

Advertisement

ಶೂನ್ಯದಿಂದ ಅಧ್ಯಯನ ಅಗತ್ಯ

ಬನ್ನಂಜೆಯವರು ಏನಾದರೂ ಕಲಿ ಯಬೇಕಾದರೆ ಶೂನ್ಯದಿಂದ ಅಧ್ಯಯ ನವನ್ನು ಪ್ರಾರಂಭಿಸಿದಾಗ ಮಾತ್ರ ಸಂಪೂರ್ಣ ದರ್ಶನ ಆಗುತ್ತದೆ ಎನ್ನುತ್ತಿ ದ್ದರು. ಪವಾಡಗಳ ಹಿಂದೆ ಹೋಗುವ ಬದಲು ಆಚಾರ-ವಿಚಾರ ತತ್ವಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ವಿದೇಶಗಳಲ್ಲಿಯ ಬಹುತೇಕ ಕಾರ್ಯ ಕ್ರಮದಲ್ಲಿ ಕನ್ನಡದಲ್ಲಿಯೇ ಉಪನ್ಯಾಸ ಮಾಡುತ್ತಿದ್ದರು ಎಂದು ಉಡುಪಿಯ ಪ್ರಕಾಶ್‌ ಮಲ್ಪೆ ಸ್ಮರಿಸಿದರು.

ಅವಧೂತ ವಿನಯ ಗುರೂಜಿ ಆಚಾರ್ಯರು, ಸತ್ಯಕಾಮ ಮತ್ತು ಉಡುಪಿಯ ಅಜ್ಜ-ಕರ್ನಾಟಕದ ಋಷಿ
ಗಳು ವಿಷಯ ಕುರಿತು ಮಾತನಾಡಿ ದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾ ಲಯದ ವಿಶ್ರಾಂತ ಕುಲಪತಿ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ್‌, ಗೋವಿಂದಾಚಾರ್ಯರ ಪುತ್ರಿ ವೀಣಾ ಬನ್ನಂಜೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next