Advertisement

ವಿಮರ್ಶೆ, ಸಂಶೋಧನೆಗೆ ಇನ್ನೊಂದು ಹೆಸರು ಬನ್ನಂಜೆ

12:18 AM Dec 14, 2020 | sudhir |

ಬನ್ನಂಜೆ ಗೋವಿಂದಾಚಾರ್ಯರ ಇತಿಹಾಸ ಪ್ರಜ್ಞೆ ಅಪೂರ್ವ. ಭಾಗವತ ಗ್ರಂಥದಲ್ಲಿ ಬರುವ ಅವಧೂತನ ಹಾಗೆ ಅವರೇ ಸ್ವತಃ ಅಧ್ಯಯನ ಮಾಡಿದವರು. ತರ್ಕ, ವೇದಾಂತ, ವ್ಯಾಕರಣಕ್ಕೆ ಹೆಸರಾದ ತಂದೆ ನಾರಾಯಣ ಆಚಾರ್ಯರ ಕೊಡುಗೆ ಇತ್ತು. ಅವರ ವಂಶಗುಣ ಇವರಲ್ಲಿಯೂ ಬಂದಿತ್ತು ಎನ್ನಬಹುದು.

Advertisement

ಉಭಯ ಭಾಷಾ ಪ್ರವೀಣ
ಸಂಸ್ಕೃತದಲ್ಲಿ ವ್ಯಾಕರಣ, ಛಂದಸ್ಸು ಕುರಿತು ತಲಸ್ಪರ್ಶಿ ಜ್ಞಾನ ವಿತ್ತು. ಕನ್ನಡ ಅನುವಾದವೂ ಅದ್ಭುತ ವಾಗಿತ್ತು. ಬಾಣ ಭಟ್ಟನ ಕಾದಂಬರಿ ಯನ್ನು ಕನ್ನಡದಲ್ಲಿ ಸುಲಲಿತವಾಗಿ ಅನು ವಾದಿಸಿದ್ದರು. ಬಾಣ ಭಟ್ಟನು ಸಂಸ್ಕೃತದಲ್ಲಿ ಉದ್ಧಾಮ ಪಂಡಿತನಾದರೆ ಇವರು ಸಂಸ್ಕೃತ ಮತ್ತು ಕನ್ನಡದಲ್ಲಿ ಉದ್ಧಾಮ ಪಂಡಿತರು. ಸಂಸ್ಕೃತದ ದೀರ್ಘ‌ವಾಕ್ಯವನ್ನು ಕನ್ನಡದಲ್ಲಿ ಚಿಕ್ಕ ಚಿಕ್ಕ ವಾಕ್ಯಗಳಿಗೆ ಇಳಿಸಬೇಕಾದರೆ ವೈದುಶ್ಯ ಹೇಗಿರಬೇಕು?

ಪ್ರಾಚೀನ ಗ್ರಂಥದ ಸಂಪಾದನೆ
ಅವರ ಸಂಶೋಧನ ಪ್ರವೃತ್ತಿಗೆ ಪಲಿಮಾರು ಮಠದ ಸರ್ವಮೂಲ ಗ್ರಂಥದ ಸಂಶೋಧನೆ, ಸಂಪಾದನೆ ಉತ್ತಮ ಉದಾಹರಣೆ. ಈ ಗ್ರಂಥ ಸುಮಾರು 700 ವರ್ಷಗಳ ಹಿಂದೆ ಪಲಿಮಾರು ಮಠದ ಆದ್ಯ ಯತಿ ಶ್ರೀ ಹೃಷಿಕೇಶತೀರ್ಥರಿಂದ ರಚನೆಗೊಂಡಿತ್ತು.

ಇಂದಿಗೂ ಇದು ಪೂಜೆಗೊಳ್ಳುತ್ತಿದೆ. ಅದನ್ನು ಬರೆಹಕ್ಕೆ ಇಳಿಸಿ ಮುದ್ರಣ ಮಾಡಿಸಿ ಸಮಾಜಕ್ಕೆ ಕೊಟ್ಟ ಕೀರ್ತಿ ಬನ್ನಂಜೆಯವರಿಗೆ ಇದೆ. ಅಷ್ಟು ಹಳೆಯ ಗ್ರಂಥ, ಮೋಡಿ ಅಕ್ಷರ, ಗಾತ್ರದಲ್ಲಿ ಉದ್ದವಾದ ಪುಸ್ತಕವನ್ನು ತೆರೆದು ಓದುವುದು ಬಹು ಕಷ್ಟ. ಮುಟ್ಟಿದರೆ ಜರ್ಝರಿತವಾಗುವ ಸ್ಥಿತಿ. ಆದರೆ ಬನ್ನಂಜೆಯವರು ರಾತ್ರಿ ಇಡೀ ಮಿಣಿಮಿಣಿ ಎಣ್ಣೆ ದೀಪದಲ್ಲಿ ಅದನ್ನು ಓದಿ ದಾಖಲಿಸಿದರು.

ಗ್ರಂಥವನ್ನು ಸಂಪಾದನೆ ಮಾಡುವಾಗ ಅಷ್ಟೂ ಶ್ರದ್ಧೆ. ಅವರು ಎಷ್ಟು ಪ್ರಾಮಾಣಿಕರೆಂದರೆ ಅದರ ಒಂದಕ್ಷರವನ್ನೂ ತಿದ್ದಲಿಲ್ಲ. ಅಲ್ಲಿ ಇದ್ದಂತೆಯೇ ಕೊಟ್ಟಿದ್ದಾರೆ. ತುಲನಾತ್ಮಕ ಅಧ್ಯಯನ ಮಾಡುತ್ತಾರೆಯೇ ವಿನಾ ಮೂಲದಲ್ಲಿ ತಿದ್ದುವ ಪ್ರವೃತ್ತಿ ಅವರದಲ್ಲ. ಈ ಗ್ರಂಥದ ಮೇಲೆ ಎಷ್ಟು ಪ್ರೀತಿ ಎಂದರೆ ನಮ್ಮ ಶಿಷ್ಯ ಶ್ರೀ ವಿದ್ಯಾರಾಜೇಶ್ವರತೀರ್ಥರಿಗೆ ಆಶ್ರಮವಾಗುವ ಮುನ್ನ ಬನ್ನಂಜೆಯವರ ಮನೆಗೆ ಕಳುಹಿಸಿದಾಗ ಗ್ರಂಥವನ್ನು ಆಸ್ಥೆಯಿಂದ ರಕ್ಷಿಸಬೇಕು ಎಂದು ಕಿವಿಮಾತು ನುಡಿದಿದ್ದರು. ಸರ್ವಮೂಲ ಗ್ರಂಥ ಮತ್ತೆ ಮುದ್ರಣಗೊಳ್ಳಬೇಕು ಎಂಬ ಅವರ ಆಶಯವನ್ನು ಆದಷ್ಟು ಬೇಗ ಈಡೇರಿಸುತ್ತೇವೆ. ಇದು ಶ್ರೀ ರಘುವಲ್ಲಭತೀರ್ಥರ ಕಾಲದಲ್ಲಿ ಆರಂಭವಾಗಿ ಶ್ರೀ ವಿದ್ಯಾಮಾನ್ಯತೀರ್ಥರ ಕಾಲದಲ್ಲಿ ಪೂರ್ಣಗೊಂಡಿತ್ತು.

Advertisement

ಕಡ್ತಿಲದ ಶೋಧ
ಅದಮಾರು ಮಠದ ಆಡಳಿತದಲ್ಲಿರುವ ಕಡ್ತಿಲ ದ.ಕ. ಜಿಲ್ಲೆಯ ಒಂದು ಅಪೂರ್ವ ಸ್ಥಳ. ಇಲ್ಲಿ ಒಂದು ತೀರ್ಥವಿದೆ. ಇದನ್ನು ಗ್ರಂಥ ತೀರ್ಥ ಎಂದೇ ಕರೆಯುತ್ತಾರೆ. ಇಲ್ಲಿ ಮಧ್ವಾಚಾರ್ಯರ ಸರ್ವಮೂಲ ಗ್ರಂಥವನ್ನು ತಾಮ್ರದ ಹಾಳೆಯಲ್ಲಿ ಬರೆಸಿ ಭೂಗತ ಮಾಡಿದ್ದಾರೆ ಎಂಬ ನಂಬಿಕೆ ಇದೆ. ಅಲ್ಲಿಗೆ ಹೋಗಿ ನೀರನ್ನು ನೋಡಿ ತಾಮ್ರದ ಹಾಳೆಯಲ್ಲಿ ಗ್ರಂಥಸ್ಥವಾಗಿರುವುದನ್ನು ಖಚಿತಪಡಿಸಿಕೊಂಡರು.

ಪಾಣಿನಿ ಮತ್ತು ವೇದವ್ಯಾಸರ ವ್ಯಾಕರಣಕ್ಕೆ ವಿರೋಧ ಬಂದಾಗ ವ್ಯಾಸರ ಪ್ರಯೋಗ ಅತ್ಯುಚ್ಚ ಎಂದು ಧೈರ್ಯವಾಗಿ ಹೇಳಿದವರು. ವ್ಯಾಕರಣವನ್ನು ಜೀರ್ಣಿಸಿಕೊಂಡವರಿಗೆ ಮಾತ್ರ ಹೀಗೆ ಮಾತನಾಡಲು ಸಾಧ್ಯ. ಸತ್ಯವನ್ನು ಹೇಳುವಾಗ ಯಾರ ಭಯವೂ ಇಲ್ಲ. ಅದಕ್ಕೆ ಸಮರ್ಥನೆ ಕೊಡುತ್ತಿದ್ದರು.

ಬನ್ನಂಜೆ ಅವರ ವಿಮರ್ಶೆ ಕ್ರಮವೂ ವಿಶಿಷ್ಟವಾದುದು. ಶ್ರೀ ರಘುವರ್ಯರ ದಾಖಲೆಗಳನ್ನು ವಿಮರ್ಶೆ ಮಾಡಿ ಕೃಷ್ಣ ಪ್ರತಿಷ್ಠೆ ವಿಷಯವನ್ನು ಸ್ಪಷ್ಟಪಡಿಸಿದ್ದರು. ಸಮುದ್ರದಲ್ಲಿ ಮುಳುಗಿದ್ದ ಕೃಷ್ಣನ ವಿಗ್ರಹವನ್ನು ಮಧ್ವಾಚಾರ್ಯರು ತೆಗೆದು ಪ್ರತಿಷ್ಠೆ ನಡೆಸಿದರು ಎಂದು ತಿಳಿಸಿದ್ದರು. ಉಪನ್ಯಾಸ ದಲ್ಲಿ ಹೊಸತನವನ್ನು ಹೇಳುತ್ತಿದ್ದರು. ವಿಮರ್ಶೆಗೆ ಇನ್ನೊಂದು ಹೆಸರು ಬನ್ನಂಜೆ.

Advertisement

Udayavani is now on Telegram. Click here to join our channel and stay updated with the latest news.

Next