ಉಡುಪಿ: ಡಾ|ಬನ್ನಂಜೆ ಗೋವಿಂದಾಚಾರ್ಯರ ಅಂತ್ಯಕ್ರಿಯೆ ಸರಕಾರದ ಸಕಲ ಗೌರವದೊಂದಿಗೆ ಅಂಬಲಪಾಡಿಯ ಸ್ವಗೃಹದಲ್ಲಿ ರವಿವಾರ ಸಂಜೆ ನಡೆಯಿತು.
ಪೊಲೀಸ್ ಬ್ಯಾಂಡ್‌ನೊಂದಿಗೆ ರಾಷ್ಟ್ರಗೀತೆ ನುಡಿಸಿದ ಬಳಿಕ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜವನ್ನು ಹೊದೆಸಿ ನಮನಸಲ್ಲಿಸಲಾಯಿತು. ಆ ಬಳಿಕ ಪೊಲೀಸ್ ಗೌರವ ರಕ್ಷೆಯೊಂದಿಗೆ ಮೂರು ಸುತ್ತು ಕುಶಾಲ ತೋಪು ಹಾರಿಸಿ ಅಂತಿಮ ಗೌರವ ಸಲ್ಲಿಸಲಾಯಿತು.
ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಹಾಜರಿದ್ದು ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಡಾ| ಜಿ.ಶಂಕರ್, ಎಂ.ಎಲ್. ಸಾಮಗ, ಪ್ರದೀಪ್ ಕುಮಾರ್ ಕಲ್ಕೂರ, ಕೃಷ್ಣ ಭಟ್ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.
ಗೋವಿಂದಾಚಾರ್ಯರ ಹಿರಿಯ ಪುತ್ರ ವಿನಯ ಭೂಷಣ ಆಚಾರ್ಯ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಗುರ್ಮೆ ಸುರೇಶ್ ಶೆಟ್ಟಿ ಸೇರಿದಂತೆ ಆಚಾರ್ಯರ ಅಭಿಮಾನಿಗಳು, ಶಿಷ್ಯ ವೃಂದ ಮನೆಗೆ ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.