Advertisement

ಕೋಮು ಸಾಮರಸ್ಯಕ್ಕೆ  ವಿದ್ಯಾರ್ಥಿಗಳಿಂದ ‘ಬಣ್ಣ’

10:23 AM May 24, 2018 | |

ಉಳ್ಳಾಲ: ಧರ್ಮದ ಹೆಸರಿನಲ್ಲಿ ಅಲ್ಲಲ್ಲಿ ಸಾಮರಸ್ಯ ಕದಡುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಇನ್ನೊಂದೆಡೆ ರಾಜಕೀಯವಾಗಿಯೂ ಧರ್ಮಗಳು ಬೆರೆತು ಸಂಘರ್ಷಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸ್ಥಳೀಯ ಯುವಕರ ತಂಡದೊಂದಿಗೆ ಸೇರಿಕೊಂಡು ಯುವ ಸಮುದಾಯದಲ್ಲಿ ಕೋಮು ಸಾಮರಸ್ಯ ಬೆಳೆಸುವ ನಿಟ್ಟಿನಲ್ಲಿ ಕಿರು ಚಿತ್ರವೊಂದನ್ನು ನಿರ್ಮಿಸಿದ್ದು, ಸೋಮೇಶ್ವರ ಪಿಲಾರ್‌ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಾಗೃತಿಗಾಗಿ ‘ಬಣ್ಣ’ ಹಚ್ಚಿದ್ದಾರೆ.

Advertisement

‘ಸ್ಟೋರಿ ಬೋರ್ಡ್‌ ಕ್ರಿಯೇಷನ್ಸ್‌’ ಅನ್ನುವ ಲಾಂಛನದಡಿ ‘ಬಣ್ಣ’ ಅನ್ನುವ ಕಿರುಚಿತ್ರವನ್ನು ರಚಿಸಿ ಶಾಲಾ ಆರಂಭದಲ್ಲೇ ಜಾಗೃತಿ ಮೂಡಿಸಲು ಮುಂದಾಗಿದೆ. ಸೋಮೇಶ್ವರ ಪಿಲಾರು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಜತೆಗೂಡಿಸಿ ಶಾಲಾ ವಠಾರದಲ್ಲೇ ಕಿರುಚಿತ್ರವನ್ನು ರಚಿಸಿದೆ. ಆರು ನಿಮಿಷಗಳ ಕಿರುಚಿತ್ರ ರಚನೆಗೆ ತಂಡ ಐದು ದಿನಗಳವರೆಗೆ ದುಡಿದಿದೆ. ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಮತ್ತು ಸಿಬಂದಿಯನ್ನು ಒಳಗೊಂಡ ತಂಡ ಕಿರುಚಿತ್ರದಲ್ಲಿ ಭಾಗಿಯಾಗಿದೆ.

ತೇಜೇಶ್‌ ಗಟ್ಟಿ ಚಿತ್ರಕಥೆ ಬರೆದಿದ್ದು, ಚಿತ್ರದಲ್ಲಿ ಸರಕಾರಿ ಶಾಲೆಯ ಅಕ್ಷತಾ ಸಾಲ್ಯಾನ್‌, ಪ್ರದ್ವಿನ್‌, ಪದ್ಮನಾಭ, ಧನುಷ್‌, ಪುನೀತ್‌ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ವಾಹಿನಿ ಪತ್ರಕರ್ತ ತೇಜೇಶ್‌ ಗಟ್ಟಿ ಚಿತ್ರಕ್ಕೆ ಕಥೆ ಬರೆದಿದ್ದು, ಕೌಶಿಕ್‌ ಕೆ.ಎಸ್‌. ಸಂಭಾಷಣೆಯ ಜತೆಗೆ ನಿರ್ದೇಶನವನ್ನು ಮಾಡಿದ್ದಾರೆ.

ಚಂದ್ರು ಭಾನಾಪುರ್‌ ನಿರ್ದೇಶನದಲ್ಲಿ ಸಹಾಯ ಮಾಡಿದ್ದಾರೆ. ನಿಖೀಲ್‌ ರಾವ್‌ ಕುಂಪಲ ಛಾಯಾಗ್ರಹಣದಲ್ಲಿ ಸಂಪೂರ್ಣ ಚಿತ್ರ ಮೂಡಿಬಂದಿದೆ. ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಅಬೂಬಕ್ಕರ್‌ ಸಿದ್ದೀಕ್‌ ಹೊತ್ತಿದ್ದು, ನಿತೀಶ್‌ ಪಿ. ಬೈಂದೂರ್‌ ಸ್ಥಿರ ಛಾಯಗ್ರಾಹಕರಾಗಿ ಚಿತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ಹಿಂದೆಯೂ ಕಿರುಚಿತ್ರ ನಿರ್ಮಿಸಿ ಯೂಟ್ಯೂಬ್‌ ಮೂಲಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಈ ತಂಡದ ನೂತನ ಕಿರುಚಿತ್ರ ‘ಬಣ್ಣ’ ಮೇ 24ರಂದು ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next