ನವದೆಹಲಿ:ಕೋವಿಡ್ 19 ಮಹಾಮಾರಿ ವೈರಸ್ ತಡೆಗಟ್ಟಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಸಾಲ ಮರುಪಾವತಿಸಲು ಮೂರು ತಿಂಗಳ ಇಎಂಐಗೆ ಆರ್ ಬಿಐ ರಿಯಾಯ್ತಿ ನೀಡಿತ್ತು. ಕ್ರೆಡಿಟ್ ಕಾರ್ಡ್ ಹೊರತುಪಡಿಸಿ ಎಲ್ಲಾ ಬ್ಯಾಂಕ್, ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದ ಸಾಲಕ್ಕೆ ಇದು ಅನ್ವಯವಾಗಲಿದೆ ಎಂದು ತಿಳಿಸಿತ್ತು. ಆದರೆ ಇದೀಗ ಬಹುತೇಕ ಪ್ರತಿಷ್ಠಿತ
ಬ್ಯಾಂಕುಗಳು ಆರ್ ಬಿಐ ಆದೇಶವನ್ನು ಅನುಸರಿಸದೇ ಸಾಲಗಾರರಿಗೆ ಇಎಂಐ ಕಟ್ಟುವಂತೆ ಅಲರ್ಟ್ ಸಂದೇಶ ಕಳುಹಿಸಿದ್ದು, ಇದರಿಂದ ಗ್ರಾಹಕರು ಗೊಂದಲಕ್ಕೆ ಒಳಗಾಗುವಂತಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್ ಹಾಗೂ ಆ್ಯಕ್ಸಿಸ್ ಬ್ಯಾಂಕ್ ಇಎಂಐ ವಿನಾಯ್ತಿ ನೀಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ.
ಸೋಮವಾರ ಹಲವಾರು ಗ್ರಾಹಕರಿಗೆ ಇಎಂಐ ಕಟ್ಟುವ ಸಂದೇಶ ಬಂದಿದ್ದು, ನಿಮ್ಮ ಖಾತೆಯಲ್ಲಿ ನಿರ್ದಿಷ್ಟ ಹಣ ಮೀಸಲಾಗಿಡಿ ಎಂದು ತಿಳಿಸಿದ್ದು, ಇದರಿಂದ ಗ್ರಾಹಕರು ಗೊಂದಲಕ್ಕೆ ಒಳಗಾಗಿದ್ದಾರೆ. ಸಾಲಗಾರರು ತಮ್ಮ ಕಂತನ್ನು ಕಟ್ಟಲು ತಯಾರಾಗಿದ್ದಾರೆ. ಆದರೆ ಬ್ಯಾಂಕ್ ಗಳು ಆರ್ ಬಿಐ ನೀಡಿರುವ ಕಂತು ವಿನಾಯ್ತಿ ಜಾರಿಗೆ ತರಲು ಇನ್ನೂ ಸಿದ್ದವಾಗಿಲ್ಲ ಎಂದು ವರದಿ ವಿವರಿಸಿದೆ.
ಸಾಲಗಾರರ ಕಂತನ್ನು ಮುಂದೂಡುವ ಬಗ್ಗೆ ಬ್ಯಾಂಕ್ ಗಳ ಕೇಂದ್ರ ಕಚೇರಿಯಿಂದ ಯಾವುದೇ ಸೂಚನೆ ಬಹುತೇಕ ಬ್ಯಾಂಕ್ ಗಳಿಗೆ ಬಂದಿಲ್ಲ. ಇಎಂಐ ಕಂತು ಮುಂದೂಡಿಕೆ ಸಾಲಗಾರರಿಗೆ ಒಂದು ಆಯ್ಕೆಯಾಗಿದೆ ಎಂದು ತಿಳಿಸಿದೆ.
ಗ್ರಾಹಕರು ಮೊದಲು ತಿಳಿದುಕೊಳ್ಳಬೇಕಾದ ಅಂಶವೇನೆಂದರೆ ಇದು ಸಾಲ ಮನ್ನಾ ಅಲ್ಲ. ಆದರೆ ಹಣಕಾಸಿನ ತೊಂದರೆ ಇದ್ದಲ್ಲಿ ಮೂರು ತಿಂಗಳ ಕಂತು ಪಾವತಿಯನ್ನು ಮುಂದೂಡುವುದಾಗಿದೆ ಅಷ್ಟೇ. ಅಲ್ಲದೇ ಇಎಂಐ ಕಟ್ಟುವುದು ತಡ ಮಾಡಿದರೆ ಬಡ್ಡಿ ಮುಂದುವರಿಯುತ್ತಿರುತ್ತದೆ. ಮೂರು ತಿಂಗಳ ವಿನಾಯ್ತಿ ನಂತರ ಕಂತು ಮುಂದಿನ ದಿನಗಳಲ್ಲಿ ಕಟ್ಟಬೇಕಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.