Advertisement
ದಾಖಲೆಗಳನ್ನು ಸಲ್ಲಿಸಲು ಡಿಸೆಂಬರ್ 31(ಸೋಮವಾರ) ಕಡೇ ದಿನ ಎಂದು ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಹೇಳಿರುವುದು ಅವರಲ್ಲಿ ಆತಂಕ ಸೃಷ್ಟಿಸಿದೆ. ಸಾಲ ಮನ್ನಾ ವ್ಯಾಪ್ತಿಗೆ ಒಳಪಡುವ ರೈತರೆಲ್ಲರೂ ಬ್ಯಾಂಕುಗಳ ಮುಂದೆ ಪ್ರತಿ ದಿನ ಸರದಿ ಸಾಲಿನಲ್ಲಿ ನಿಲ್ಲುವ ಪ್ರಸಂಗ ಎದುರಾಗಿದೆ. ಆದರೆ, ಬ್ಯಾಂಕುಗಳು ಮಾತ್ರ ಪ್ರತಿ ದಿನ ಕೇವಲ 40 ರೈತರಿಗೆ ಮಾತ್ರ ಚೀಟಿ ನೀಡಿ ದಾಖಲೆಗಳನ್ನು ಪಡೆದುಕೊಳ್ಳುತ್ತಿವೆ. ಹೀಗಾಗಿ ಇದುವರೆಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೃಷಿ ಬೆಳೆಸಾಲ ಪಡೆದ 21 ಲಕ್ಷ ರೈತರಲ್ಲಿ 7 ಲಕ್ಷ ಮಂದಿಗೆ ಮಾತ್ರ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಿದ್ದು, ಇನ್ನೂ ಸುಮಾರು 14 ಲಕ್ಷ ರೈತರು ದಾಖಲೆ ಸಲ್ಲಿಸಿಲ್ಲ. ಆದರೆ, ಬ್ಯಾಂಕ್‌ಗಳು ಡಿಸೆಂಬರ್ 31 ಕೊನೆಯ ದಿನ ಎಂದು ಹೇಳಿರುವುದು ದಾಖಲೆ ಸಲ್ಲಿಸದಿರುವ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ದಾಖಲೆಗಳನ್ನು ಸಲ್ಲಿಸಲು ರೈತರಿಗೆ ಕೊನೆಯ ದಿನಾಂಕದ ಗಡುವು ನೀಡಿಲ್ಲ ಎಂಬುದು ಸರ್ಕಾರದ ಸ್ಪಷ್ಟನೆ. ರೈತರು ಯಾವಾಗ ಬೇಕಾದರೂ ಸರ್ಕಾರ ಸೂಚಿಸಿರುವ ದಾಖಲೆಗಳನ್ನು ಸಲ್ಲಿಸಬಹುದು. ಬ್ಯಾಂಕ್‌ನವರು ಕಡೆಯ ದಿನಾಂಕ ಎಂದು ರೈತರಿಗೆ ಹೇಳುವಂತಿಲ್ಲ. ಅವರು ಎಲ್ಲಿವರೆಗೂ ದಾಖಲೆಗಳನ್ನು ನೀಡುತ್ತಾರೋ ಅಲ್ಲಿಯವರೆಗೂ ಸ್ವೀಕರಿಸಿ, ಸರ್ಕಾರಕ್ಕೆ ಕಳುಹಿಸಬೇಕು ಎಂದು ಸಾಲ ಮನ್ನಾ ಯೋಜನೆ ಅನುಷ್ಠಾನದ ನೋಡಲ್ ಅಧಿಕಾರಿ ಮನೀಶ್ ಮೌದ್ಗಿಲ್ ಹೇಳಿದ್ದಾರೆ. ಬ್ಯಾಂಕ್‌ನವರ ವಾದವೇನು?
ಸಾಲ ಪಡೆದ ರೈತರ ದಾಖಲೆಗಳನ್ನು ಡಿಸೆಂಬರ್ 31 ರೊಳಗೆ ಪಡೆದು ಸಲ್ಲಿಸುವಂತೆ ಸರ್ಕಾರವೇ ಸೂಚಿಸಿದೆ ಎನ್ನುವುದು ಬ್ಯಾಂಕ್‌ನವರ ವಾದ. ಆ ಆದೇಶದ ನಂತರ ಅವಧಿ ವಿಸ್ತರಣೆಯ ಬಗ್ಗೆ ಬ್ಯಾಕ್‌ಗಳಿಗೆ ರಾಜ್ಯ ಸರ್ಕಾರದಿಂದ ಇನ್ನೂ ಅಧಿಕೃತ ಆದೇಶ ಹೋಗಿಲ್ಲ ಎಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿಗಳು 2019 ರ ಜನವರಿ 10 ವರೆಗೆ ದಾಖಲೆ ಸ್ವೀಕರಿಸಲು ಅವಧಿ ವಿಸ್ತರಿಸುವಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಬ್ಯಾಂಕ್‌ನ ಕೆಳ ಹಂತದ ಅಧಿಕಾರಿಗಳು ಸರ್ಕಾರದಿಂದ ಸೂಚನೆ ಬಂದಿದ್ದರೂ, ತಮ್ಮ ಮೇಲಾಧಿಕಾರಿಗಳಿಂದ ಅಧಿಕೃತ ಆದೇಶ ಬರಲಿ ಎಂದು ಕಾಯುತ್ತಿದ್ದಾರೆ. ಆದೇಶ ಬಂದರಷ್ಟೇ ದಾಖಲಾತಿ ಪಡೆಯುವ ಸಮಯ ವಿಸ್ತರಣೆ ಮಾಡಲಾಗುವುದು ಎಂದು ಹೆಸರು ಹೇಳಲಿಚ್ಚಿಸದ ರಾಷ್ಟ್ರೀಕೃತ ಬ್ಯಾಂಕ್ ಒಂದರ ಶಾಖಾ ವ್ಯವಸ್ಥಾಪಕರು ಹೇಳಿದ್ದಾರೆ.
Related Articles
ಸಾಲ ಮನ್ನಾ ಪ್ರಯೋಜನ ಪಡೆಯಲು ರೈತರು ಕಡ್ಡಾಯವಾಗಿ ಪಡಿತರ ಕಾರ್ಡ್, ಆಧಾರ್ ಕಾರ್ಡ್, ಹೊಲದ ಪಹಣಿ ಹಾಗೂ ಬ್ಯಾಂಕ್ ಖಾತೆಯ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಬ್ಯಾಂಕ್ ಖಾತೆ, ಪಹಣಿ ಜೊತೆಗೆ ಆಧಾರ್ ಕಾರ್ಡ್ ನೀಡುವುದರಿಂದ ರೈತರ ವಿಳಾಸದ ಜೊತೆಗೆ ಎಲ್ಲ ಮಾಹಿತಿಯೂ ದೊರೆಯುತ್ತದೆ. ಆದರೆ, ಪಡಿತರ ಕಾರ್ಡ್ ಕಡ್ಡಾಯ ಮಾಡಿರುವುದರಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ರೈತರು ಸಾಲ ಮನ್ನಾ ಯೋಜನೆಯ ಲಾಭ ಪಡೆಯುವುದರಿಂದ ವಂಚಿತರಾಗುತ್ತಾರೆ ಎಂದು ಹೇಳಲಾಗುತ್ತಿದೆ.
Advertisement
ಅನೇಕ ರೈತರು ಚುನಾವಣೆಗೂ ಮೊದಲು ಹೊಸ ಪಡಿತರ ಕಾರ್ಡ್ ಕಾರ್ಡ್‌ಗಳ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದು, ಆ ನಂತರ ರಾಜ್ಯ ಸರ್ಕಾರ ಪಡಿತರ ಕಾರ್ಡ್ ನೀಡುವುದನ್ನು ನಿಲ್ಲಿಸಿದೆ. ಹೀಗಾಗಿ ಸಾಲ ಮನ್ನಾ ಘೋಷಣೆಯಾದ ನಂತರ ಹೊಸ ಪಡಿತರ ಕಾರ್ಡ್ ದೊರೆಯದಿರುವ ಸಾಧ್ಯತೆಯಿದೆ.
ಇಂದಿನಿಂದ ಬ್ಯಾಂಕ್ ಖಾತೆಗೆ ಹಣರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರು ಸೂಕ್ತ ದಾಖಲೆ ಸಲ್ಲಿಸಿದ್ದರೆ, ಸೋಮವಾರದಿಂದಲೇ ಅವರ ಖಾತೆಗೂ ಮೊದಲ ಕಂತಿನ 50 ಸಾವಿರ ರೂ. ಹಣ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರ ಖಾತೆಗೂ ಸೋಮವಾರದಿಂದ ಹಣ ವರ್ಗಾವಣೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಜಾಗರಣೆ ಮಾಡಿದ್ದ ರೈತರು
ದಾಖಲೆ ಸಲ್ಲಿಸಲು ಡಿ.31 ಕಡೇ ದಿನ ಎಂಬ ಬ್ಯಾಂಕುಗಳ ಮಾಹಿತಿಯಿಂದಾಗಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹೆಬ್ಟಾಳು ಗ್ರಾಮದಲ್ಲಿ ರೈತರು ರಾತ್ರಿಯಿಡೀ ಬ್ಯಾಂಕಿನ ಮುಂದೆ ಜಾಗರಣ ಮಾಡಿರುವ ಘಟನೆಯೂ ನಡೆದಿದೆ. ಪ್ರತಿ ದಿನ ಕೇವಲ 40 ರೈತರ ದಾಖಲೆ ಸ್ವೀಕರಿಸುತ್ತಿರುವ ಕಾರಣ, ರೈತರು ರಾತ್ರಿಯೇ ಬ್ಯಾಂಕಿನ ಮುಂದೆ ಮಲಗುತ್ತಿದ್ದಾರೆ. ಅಲ್ಲದೆ ಅವ್ಯವಸ್ಥೆಗೆ ಕಾರಣವಾದ ಬ್ಯಾಂಕು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. – ಶಂಕರ ಪಾಗೋಜಿ