ನಷ್ಟದಲ್ಲಿರುವ ಕೆಲವೊಂದು ಬ್ಯಾಂಕ್‌ಗಳನ್ನು ಲಾಭದಲ್ಲಿರುವ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸಿದ ಬಳಿಕ ಎಟಿಎಂಗಳು ಕೂಡ ಬರಿದಾಗತೊಡಗಿವೆ. ಹಣದ ತುರ್ತು ಆವಶ್ಯಕತೆ ಇದ್ದಾಗ ಎಟಿಎಂ ಕೇಂದ್ರಕ್ಕೆ ತೆರಳಿದ ವೇಳೆ ಹಣವಿಲ್ಲ ಎಂಬ ಬೋರ್ಡ್ ಗಳು ಮಾಮೂಲಿಯಾಗಿವೆ. ಇದರಿಂದಾಗಿ ಜನರು ಹಣಕ್ಕಾಗಿ ಒಂದು ಎಟಿಎಂನಿಂದ ಇನ್ನೊಂದು ಎಟಿಎಂಗಳಿಗೆ ಅಲೆದಾಡುವಂತಾಗಿದೆ. ಈ ಸಂಬಂಧ ಬ್ಯಾಂಕ್‌ಗಳ ಗ್ರಾಹಕರಿಂದ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬಲು ವಿಫಲವಾದ ಬ್ಯಾಂಕ್‌ಗಳಿಗೆ ದಂಡ ವಿಧಿಸಲು ನಿರ್ಧರಿಸಿದೆ.
ಗ್ರಾಹಕರಿಗೆ ಏನು ಲಾಭ?:
ಬ್ಯಾಂಕ್‌ಗಳು ಮತ್ತು ಎಟಿಎಂಗಳಿಗೆ ನಗದು ತುಂಬಿಸುವ ಸೇವೆಯನ್ನು ನಿರ್ವಹಿಸುತ್ತಿರುವ ಸಂಸ್ಥೆ ಅಥವಾ ಕಂಪೆನಿಗಳು ಎಟಿಎಂಗಳ ಮರುಪೂರಣದ ಕುರಿತು ಆರ್‌ಬಿಐನ ಹೊಸ ಮಾರ್ಗಸೂಚಿಯನ್ನು ಅನುಸರಿ ಸಲೇಬೇಕಿದೆ. ಸಾರ್ವಜನಿಕರಿಗೆ ಅಡೆತಡೆಯಿಲ್ಲದೆ ಸಾಕಷ್ಟು ಪ್ರಮಾಣದಲ್ಲಿ ನಗದು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಎಟಿಎಂಗಳಲ್ಲಿ ನಗದು ನಿರ್ವಹಣೆಯನ್ನು ಮುನ್ಸೂಚಿಸಲು ಬ್ಯಾಂಕ್‌ಗಳು ಡೇಟಾ ಚಾಲಿತ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
ಯಾಕಾಗಿ ಈ ನಿಯಮ? :
ಎಟಿಎಂ ಯಂತ್ರಗಳಿಗೆ ನಗದು ತುಂಬಿಸಲು ಆರ್‌ಬಿಐ ರೂಪಿಸಿರುವ ಹೊಸ ನಿಯಮಗಳನ್ನು ಬ್ಯಾಂಕ್‌ಗಳು ಪಾಲನೆ ಮಾಡದೇ ಇದ್ದಲ್ಲಿ ದಂಡ ತೆರಬೇಕಾಗುತ್ತದೆ. ಈ ಹೊಸ ನಿಯಮವು ಅಕ್ಟೋಬರ್ 1ರಂದು ಜಾರಿಯಾಗಲಿದ್ದು, ಎಟಿಎಂಗಳಲ್ಲೇ ಸಾಕಷ್ಟು ನಗದು ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ಮೂಲಕ ಬ್ಯಾಂಕ್ ಶಾಖೆಗಳಿಂದ ನಗದು ವಿಥ್‌ಡ್ರಾ ಪ್ರಮಾಣ ಕಡಿಮೆ ಗೊಳ್ಳಲಿದೆ ಎಂಬ ಲೆಕ್ಕಾಚಾರ ಆರ್‌ಬಿಐನದ್ದಾಗಿದೆ. ಅಷ್ಟು ಮಾತ್ರವಲ್ಲದೆ ದೇಶ ದಲ್ಲಿ ಡಿಜಿಟಲ್ ವ್ಯವಹಾರಕ್ಕೆ ಸರಕಾರ ಹೆಚ್ಚಿನ ಉತ್ತೇಜನ ನೀಡುತ್ತಿರುವುದರಿಂದ ಇದರ ಭಾಗವಾಗಿ ಎಟಿಎಂ ಕೇಂದ್ರಗಳನ್ನು ಮುಚ್ಚಲು ಸರಕಾರ ಮುಂದಾಗಿದೆ ಎಂಬ ಅನುಮಾನ ಜನರನ್ನು ಕಾಡತೊಡಗಿತ್ತು. ಇದೀಗ ಆರ್‌ಬಿಐ ಎಟಿಎಂಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಗದು ಲಭ್ಯವಿರುವುದನ್ನು ಖಾತರಿಪಡಿಸಬೇಕು ಎಂದು ಕಟ್ಟಾಜ್ಞೆ ಹೊರಡಿಸುವ ಮೂಲಕ ಜ®ರಲ್ಲಿನ ಅನುಮಾನವನ್ನು ದೂರ ಮಾಡಿದೆ.
ದಂಡದ ಪ್ರಮಾಣ ಎಷ್ಟು? :
ಅ. 1ರಿಂದ ಒಂದು ತಿಂಗಳಲ್ಲಿ ಎಟಿಎಂಗಳು ಒಟ್ಟು 10 ಗಂಟೆಗಳ ಕಾಲ ನಗದು ರಹಿತವಾಗಿದ್ದರೆ ಆರ್‌ಬಿಐ ಬ್ಯಾಂಕ್‌ಗಳಿಗೆ ದಂಡ ವಿಧಿಸುತ್ತದೆ. ದಂಡದ ಪ್ರಮಾಣಕ್ಕೆ ಸಂಬಂಧಿಸಿ ತಿಂಗಳಲ್ಲಿ 10 ಗಂಟೆಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಯಾವುದೇ ಎಟಿಎಂನಲ್ಲಿ ನಗದು ಇಲ್ಲದೇ ಇದ್ದರೆ ಆಗ 10 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಆರ್‌ಬಿಐ ಸ್ಪಷ್ಟ ಸೂಚನೆಯನ್ನು ನೀಡಿದೆ.