ಬಂಕಾಪುರ: ಪಟ್ಟಣದಲ್ಲಿ ಬುಧವಾರ ಕೂಡಾ ವರುಣನ ಅರ್ಭಟ ಮುಂದುವರಿದಿದ್ದು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೆಲವು ಗ್ರಾಮಗಳಲ್ಲಿ ವಿದ್ಯತ್ ಸಂಪರ್ಕ ಕಡಿತಗೊಂಡು ಕತ್ತಲು ಆವರಿಸಿದೆ.
ಸಿಂಗಾಪುರ, ಹುವಗುಂದ, ಹೋತನಹಳ್ಳಿ, ಮೂಕಬಸರಿಕಟ್ಟಿ, ಚಂದಾಪುರ, ಹಳೆಬಂಕಾಪುರ, ಹುಲಿಕಟ್ಟಿ, ಶಿಡ್ಲಾಪುರ, ಹೊಟ್ಟೂರ ಗ್ರಾಮಗಳ ರಸ್ತೆಗಳು ಜಲಾವೃತಗೊಂಡು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ವಿದ್ಯುತ್ ಸಂಪರ್ಕ ಇಲ್ಲದೇ ಇರುವುದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಬಾಡ ಗ್ರಾಮದಲ್ಲಿ ಟಿ.ಸಿ.ಜಲಾವೃತಗೊಂಡು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಜನಜೀವನ ತತ್ತರ: ವರುಣನ ರುದ್ರತಾಂಡವಕ್ಕೆ ಜನಜೀವನ ತತ್ತರಗೊಂಡಿದ್ದು, ಮನೆ, ಅಂಗಡಿ ಮುಂಗ್ಗಟ್ಟುಗಳಲ್ಲಿ ನೀರು ಹೊಕ್ಕು ಹಾನಿ ಸಂಭವಿಸಿದೆ. ಪಟ್ಟಣದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಗೋಡೆ, ಮೇಲ್ಛಾವಣಿಗಳು ಕುಸಿಯುವುದು ಮುಂದುವರಿದಿದೆ. ಅಶೋಕ ಆಲದಕಟ್ಟಿ, ಇರ್ಶದ ಖತೀಬ, ಮನಿಯಾರ, ಪಠಾಣ, ಶಬ್ಬರ ದೊಡ್ಡಮನಿ ಸೇರಿದಂತೆ ಮತ್ತಿತರ ಮನೆ ಗೋಡೆಗಳು ಕುಸಿದಿವೆ. ಕಲ್ಯಾಣ ಗ್ರಾಮದಲ್ಲಿಯ 2 ಮನೆಗಳು, ಹನಕನಹಳ್ಳಿ ಗ್ರಾಮದ 3 ಮನೆಗಳು ಲಕ್ಕಿಕೋಪ್ಪ ಗ್ರಾಮದ 6 ಮನೆಗಳು ಕುಸಿದಿರುವ ಬಗ್ಗೆ ತಿಳಿದು ಬಂದಿದೆ.
ಬಹುತೇಕ ಕೆರೆಗಳು ಭರ್ತಿ: ಬಂಕಾಪುರ ಹೋಬಳಿಯ ಹೋತನಹಳ್ಳಿ ಎಂಟೆತ್ತಿನ ಕೆರೆ, ಲಿಂಗದೇವರಟ್ಟಿಯ ಕೆರೆ, ಹುಲಿಕಟ್ಟಿ ಶಿಡ್ಲಾಪುರ ಮದ್ಯದಲ್ಲಿರುವ ಡೊಂಕೇರೆ, ಜೇಸನಕಟ್ಟಿ ಕೆರೆ, ಜೊಂಡಿಗೇರಿ ಕೆರೆ, ಹುನಗುಂದ ಕೆರೆ, ಹಳೆಬಂಕಾಪುರ ಎರಿಕೆರೆ, ಮಲ್ಲನಾಯಕನಕೊಪ್ಪದ ಕೆರೆ ಸೇರಿದಂತೆ ಹೋಬಳಿ ಭಾಗದ ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದಿವೆ.
ಅಧಿಕಾರಿಗಳ ಭೇಟಿ-ಪರಿಶೀಲನೆ: ಕಂದಾಯ, ಕೃಷಿ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಜಲಾವೃತಗೊಂಡ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಹೆಸ್ಕಾಂ ಲೈನ್‌ಮನ್‌ಗಳು ವಿದ್ಯುತ್ ಸಂಪರ್ಕ ಕಡಿತಗೊಂಡ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮಳೆಯನ್ನೂ ಲೆಕ್ಕಿಸದೇ ಶ್ರಮಿಸುತ್ತಿದ್ದಾರೆ.
ಸುಮಾರು 833 ಹೆಕ್ಟೇರ್‌ಗಿಂತಲೂ ಅಧಿಕ ಪ್ರದೇಶದಲ್ಲಿ ಸೋಯಾಬೀನ್, ಹತ್ತಿ, ಶೇಂಗಾ, ಗೋವಿನಜೋಳ, ಕೆಲವು ಭಾಗಗಳಲ್ಲಿ ಭತ್ತದ ಬೆಳೆಗಳು ಜಲಾವೃತಗೊಂಡಿದ್ದು, ಮಳೆಯ ಅರ್ಭಟ ಮುಂದುವರಿದಿದ್ದು, ಹಾನಿಗೊಳಗಾಗುವ ಬೆಳೆಗಳ ಪ್ರದೇಶ ಇನ್ನು ಅಧಿಕವಾಗುವ ಸಾಧ್ಯತೆಯಿದೆ.
•
ಅರುಣಕುಮಾರ ಕ್ಯಾಲಕೊಂಡ,
ಸಹಾಯಕ ಕೃಷಿ ಅಧಿಕಾರಿ.