Advertisement

ಭಯದ ವಾತಾವರಣದಲ್ಲೇ ಮಕ್ಕಳ ವ್ಯಾಸಂಗ

04:39 PM Dec 19, 2019 | Naveen |

ಸದಾಶಿವ ಹಿರೇಮಠ
ಬಂಕಾಪುರ:
ಕಿಡಕಿ, ಬಾಗಿಲುಗಳೇ ಇಲ್ಲದ ಕೊಠಡಿಗಳು..ಬಿರುಕು ಬಿಟ್ಟ ಗೋಡೆಗಳು.. ಈಗಲೋ, ಆಗಲೋ ಬೀಳುವ ಸ್ಥಿತಿಯಲ್ಲಿರುವ ಶಾಲೆಯೊಂದರಲ್ಲಿ ಭಯದ ವಾತಾವರಣದಲ್ಲೇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು… ಪಟ್ಟಣದ ಅಂಕದಖಣ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು. ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಒಟ್ಟು 28 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪಾಲಕರು ವಿದ್ಯಾರ್ಥಿಗಳನ್ನು ಆತಂಕದಲ್ಲೇ ಶಾಲೆಗೆ ಕಳುಹಿಸುವಂತಾಗಿದೆ.

Advertisement

ಶಾಲಾ ಮೈದಾನ ಹುಲ್ಲು, ಗಿಡ-ಗಂಟೆಗಳಿಂದ ತುಂಬಿದ್ದು, ಹುಳ, ಹುಪ್ಪಡಿ, ವಿಷಜಂತುಗಳ ತಾಣವಾಗಿ ಪರಿಣಮಿಸಿದೆ. ಈ ಶಾಲೆಯ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯವಾಗಿದ್ದು, ಆಟದ ಮೈದಾನದಲ್ಲಿ ಕಸ, ಕಡ್ಡಿ, ಗಿಡ-ಗಂಟೆಗಳು ಬೆಳೆದಿರುವುದರಿಂದ ವಿದ್ಯಾರ್ಥಿಗಳು ಕ್ರೀಡೆಗಳಿಂದ ವಂಚಿತರಾಗುವಂತಾಗಿದೆ. ಸಂಬಂಧಪಟ್ಟ ಅಧಿ ಕಾರಿಗಳಿಗೆ ಶಾಲಾ ಸುಧಾರಣಾ ಸಮಿತಿಯವರು, ಪಾಲಕರು, ಶಿಕ್ಷಣ ಪ್ರೇಮಿಗಳು ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿ, ಕಿವಿಯಿದ್ದೂ ಕುರುಡರಾಗಿ ವರ್ತಿಸುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.

ಪುಢಾರಿಗಳ ತಾಣ: ಶಾಲೆ ಬಿಟ್ಟನಂತರ ಈ ಶಾಲೆಯ ಆವರಣ ಪುಂಢ,ಪೋಕರಿಗಳ, ಕಳ್ಳ-ಕಾಕರ ತಾಣವಾಗಿ ಪರಿಣಮಿಸುತ್ತಿದೆ. ಈ ಶಾಲೆಯ ಕಿಡಕಿ, ಬಾಗಿಲು, ನೆಲಕ್ಕೆ ಹಾಕಿದ ಪಾಟಿಗಲ್ಲು, ಮೇಲ್ಛಾವಣಿಗೆ ಹಾಕಿದ ಹೆಂಚುಗಳನ್ನೂ ಕೂಡಾ ಕಳ್ಳರು ಹೊತ್ತುಕೊಂಡು ಹೋಗುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಈ ಶಾಲಾ ಆವರಣ ಕುಡುಕರ, ಜೂಜುಕೋರರ,ಅನೈತಿಕ ತಾಣವಾಗಿ ಪರಿಣಮಿಸುತ್ತಿದೆ.

ಆರೋಗ್ಯದ್ದೇ ಸಮಸ್ಯೆ: ಈ ಶಾಲೆಯ ಸುತ್ತ ಗಟಾರು ನಿರ್ಮಿಸದ ಕಾರಣ ಊರಿನ ಗಟಾರದ ಕೊಳಚೆ ನೀರು ಈ ಶಾಲೆಯ ಆವರಣಕ್ಕೆ ಹರಿದು ಬಂದು ದುರ್ನಾತ ಬೀರುತ್ತಿದ್ದು, ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡೇ ಪಾಠ ಆಲಿಸುವಂತಾಗಿದೆ. ಇದರಿಂದ ವಿದ್ಯಾರ್ಥಿಗಳು ಮೇಲಿಂದ ಮೇಲೆ ಖಾಯಿಲೆಗೆ ಒಳಗಾಗುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ: ಇಂತಹ ಅವ್ಯವಸ್ಥೆಯ ಆಗರವಾದ ಈ ಶಾಲೆಗೆ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಸುಮಾರು 60 ವರ್ಷಗಳ ಹಳೆಯದಾದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಈ ಶಾಲೆಯಲ್ಲಿ ಓರ್ವ ಮುಖ್ಯ ಶಿಕ್ಷಕಿ, ಓರ್ವ ಸಹ ಶಿಕ್ಷಕಿ ಕಾರ್ಯ ನಿರ್ವಹಿಸುತ್ತಿದ್ದು ಈ ಶಾಲೆಗೆ ಕಾಯಕಲ್ಪ ಕಲ್ಪಿಸಬೇಕಾದ ಅವಶ್ಯಕತೆಯಿದೆ.

Advertisement

ಸಂಬಂಧಪಟ್ಟ ಅಧಿಕಾರಿಗಳು ಈ ಶಾಲೆಯನ್ನು ಕೂಡಲೇ ತಾತ್ಕಾಲಿಕವಾಗಿ ಬೇರೆ ಕಡೆ ಸ್ಥಳಾಂತರಿಸಿ ನೂತನ ಕಟ್ಟಡ, ಕಾಂಪೌಂಡ್‌ ಗೋಡೆ, ಗಟಾರು ನಿರ್ಮಿಸಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವಂತೆ ಶಿಕ್ಷಣ ಪ್ರೇಮಿಗಳ, ಈ ಶಾಲೆಯ ಹಳೆಯ ವಿದ್ಯಾರ್ಥಿಗಳ ಒತ್ತಾಸೆಯಾಗಿದೆ.

ಶಾಲಾ ಅಭಿವೃದ್ಧಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೌಕಿಕ ಹಾಗೂ ಲಿಖೀತವಾಗಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಶಿಕ್ಷಕರು ಹಾಗೂ ಮಕ್ಕಳ ಜೀವದ ಪ್ರಶ್ನೆಯಾಗಿದ್ದು, ಕೂಡಲೇ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು.
ಎನ್‌.ವಿ. ಪದ್ಮ,
ಪುರಸಭೆ ಮಾಜಿ ಸದಸ್ಯೆ.

Advertisement

Udayavani is now on Telegram. Click here to join our channel and stay updated with the latest news.

Next