ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಕೊಡುವ ಸಂದರ್ಭದಲ್ಲಿ ಶೇ.20 ರಷ್ಟು ಷೇರು ಹಿಡಿದಿಟ್ಟು ಕೊಳ್ಳಲಾಗುತ್ತಿದೆ. ಕೂಡಲೇ ಈ ಪದ್ಧತಿ ಕೈಬಿಡದಿದ್ದರೆ ಬ್ಯಾಂಕ್ ಸೂಪರ್‌ಸೀಡ್ ಮಾಡಲಾಗುವುದು ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಸುಧಾಕರ್ ಎಚ್ಚರಿಕೆ ನೀಡಿದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಹಾರೋಬಂಡೆ, ತಿಪ್ಪೇನಹಳ್ಳಿ, ಪೋಶೆಟ್ಟಿಹಳ್ಳಿ, ಗೊಲ್ಲಹಳ್ಳಿ, ಚಿಕ್ಕಬಳ್ಳಾಪುರ ನಗರ ಸೇರಿ ವಿವಿಧ ಗ್ರಾಪಂಗಳ ಒಟ್ಟು 119 ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸುಮಾರು 6.1 ಕೋಟಿ ರೂ.ಮೊತ್ತದ ಸಾಲ ವಿತರಿಸಿ ಅವರು ಮಾತಾಡಿದರು.
ಸರ್ಕಾರ ನಿಯಮಗಳಂತೆ ನಡೆದುಕೊಳ್ಳಿ: ಡಿಸಿಸಿ ಬ್ಯಾಂಕ್ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಸಾಲ ಪಡೆದವರಲ್ಲಿ ಶೇ.20 ರಷ್ಟು ಷೇರು ಹಿಡಿದುಕೊಂಡರೆ ಫಲಾನುಭವಿಗಳಿಗೆ ಸಾಲದ ಲಾಭ ಹೇಗೆ ಸಿಗಲು ಸಾಧ್ಯ? ಈ ನಿಯಮವನ್ನು ಕೂಡಲೇ ಕೈಬಿಡಬೇಕು. ಇದು ನಿಮ್ಮ ಸ್ವಂತ ಬ್ಯಾಂಕ್ ಅಲ್ಲ, ಸರ್ಕಾರದ ಬ್ಯಾಂಕ್, ಸರ್ಕಾರ ನಿಯಮಗಳಂತೆ ನಡೆದುಕೊಳ್ಳಿ. ಇಲ್ಲವಾದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಡ್ಡಿರಹಿತ ಸಾಲ: ಕೇಂದ್ರ ಹಾಗೂ ರಾಜ್ಯ ಸರ್ಕಾರ ನಬಾರ್ಡ್‌ಯೋಜನೆಯಡಿಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದೆ. ಮಹಿಳೆಯರು ಈ ದೇಶದ ಆಸ್ತಿ ಇವರ ಸಬಲೀಕರಣವಾದರೆ ದೇಶವೇ ಅಭಿವೃದ್ಧಿ ಯಾದಂತೆ. ಮೊದಲೆಲ್ಲಾ ಬಡ್ಡಿಗೆ ಸಾಲ ಕೊಟ್ಟು, ನಂತರ ಬಡ್ಡಿ ಮನ್ನಾ ಮಾಡಲಾಗುತ್ತಿತ್ತು. ಅದಕ್ಕಿಂತ ಕೊಡುವಾಗಲೇ ಬಡ್ಡಿರಹಿತವಾಗಿ ನೀಡುವುದು ಸೂಕ್ತ ಎಂಬ ಕೇಂದ್ರ ಸರ್ಕಾರದ ನಿರ್ದೇಶನದಂತೆ ಇಂದು
ಮಹಿಳಾ ಸಂಘಟನೆಗಳಿಗೆ ಬಡ್ಡಿರಹಿತ ಸಾಲ ಕೊಡಲಾಗಿದೆ ಎಂದರು.
ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಕೆಲಸ ಸಾಗುತ್ತಿದ್ದು, ಮೊದಲ ಮಹಡಿ ಮುಕ್ತಾಯ ವಾಗಿದೆ.ಕಳೆದ ತಿಂಗಳು 29 ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ್ದೇವೆ. 1,4,29ನೇ ವಾರ್ಡ್‌ಗಳಲ್ಲಿ ಈ ಘಟಕಗಳು ಕಾರ್ಯಾರಂಭ ಮಾಡಿವೆ ಎಂದರು.
ಎತ್ತಿನಹೊಳೆ ಯೋಜನೆ ಶೀಘ್ರ: ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ ಎರಡೂವರೆ ವರ್ಷದೊಳಗೆ ಪೂರ್ಣಗೊಳಿಸಿ ಮೊದಲ ಪ್ರಾಶಸ್ತ್ಯದಲ್ಲಿ ಜಿಲ್ಲೆಗೆ ನೀರು ಹರಿಸುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದೇನೆ ಎಂದು ವಿವರಿಸಿದರು. ಜಿಪಂ ಸದಸ್ಯ ಪಿ.ಎನ್.ಕೇಶವರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಶ್ವತ್ಥನಾರಾಯಣ, ವೇದಾ ಸುದರ್ಶನ್‌ರೆಡ್ಡಿ, ದ್ಯಾವಪ್ಪ, ತಾಪಂ ಅಧ್ಯಕ್ಷ ರಾಮಸ್ವಾಮಿ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಮುಖಂಡರಾದ ಮರುಳುಕುಂಟೆ ಕೃಷ್ಣಮೂರ್ತಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಭೂ ಅಭಿವೃದ್ಧಿ ಅಧ್ಯಕ್ಷ ನಾಗೇಶ್, ನಿದೇಶಕ ಕಾಗೇಗೌಡ, ಮಾಜಿ ನಗರಸಭಾಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಕೋಚಿಮುಲ್ ನಿರ್ದೇಶಕ ಸುಬ್ಟಾರೆಡ್ಡಿ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಕೃಷ್ಣಾರೆಡ್ಡಿ, ಬಾಲಕೃಷ್ಣ, ನಾರಾಯಣಸ್ವಾಮಿ, ಉಮಾ ಶಂಕರ್ ಉಪಸ್ಥಿತರಿದ್ದರು.