Advertisement

ಷೇರು ಮಾರುಕಟ್ಟೆಗಳಲ್ಲಿ ಅನಿಶ್ಚಿತತೆ

06:47 PM Mar 14, 2023 | |

ವಾಷಿಂಗ್ಟನ್‌/ಮುಂಬೈ:ಅಮೆರಿಕದಲ್ಲಿ ಎರಡು ಬ್ಯಾಂಕುಗಳಿಗೆ ಬೀಗ ಬೀಳುತ್ತಿರುವಂತೆಯೇ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ತಲ್ಲಣ ತೀವ್ರಗೊಂಡಿದೆ. ಜಗತ್ತಿನ ಬಹುತೇಕ ಮಾರುಕಟ್ಟೆಗಳು ಮಂಗಳವಾರವೂ ಕುಸಿತದ ಬಿಸಿ ಅನುಭವಿಸಿವೆ.

Advertisement

ಯುರೋಪ್‌ ಮಾರುಕಟ್ಟೆಯಲ್ಲಿ ಬ್ಯಾಂಕ್‌ ಷೇರುಗಳು ಸಾಧಾರಣ ಕುಸಿತ ಕಂಡರೆ, ಏಷ್ಯಾದಲ್ಲಿ ಬಹುತೇಕ ಮಾರುಕಟ್ಟೆಗಳು ಭಾರೀ ನಷ್ಟ ಅನುಭವಿಸಿವೆ. ಮಂಗಳವಾರ ಜಪಾನ್‌ನ ನಿಕ್ಕಿ 225 ಅಂಕಗಳಷ್ಟು ಕುಸಿದಿದ್ದು, ಆಸ್ಟ್ರೇಲಿಯಾದ ಎಸ್‌ಆ್ಯಂಡ್‌ಪಿ ಶೇ.1.4, ದಕ್ಷಿಣ ಕೊರಿಯಾದ ಕೋಸ್ಪಿ ಶೇ.2.6, ಹಾಂಕಾಂಗ್‌ನ ಹ್ಯಾಂಗ್‌ಸೆಂಗ್‌ ಶೇ.2.3, ಶಾಂಘೈ ಮಾರುಕಟ್ಟೆ ಶೇ.0.7ರಷ್ಟು ಕುಸಿದಿವೆ.

ಸೆನ್ಸೆಕ್ಸ್‌ ಪತನ:
ಅಮೆರಿಕ ಬ್ಯಾಂಕುಗಳ ಪರಿಸ್ಥಿತಿಯ ಜೊತೆಗೆ, ಬಡ್ಡಿ ದರ ಏರಿಕೆಯ ಭೀತಿಯು ಭಾರತೀಯ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಪರಿಣಾಮ, ಸತತ 4ನೇ ದಿನವೂ ಮುಂಬೈ ಷೇರು ಮಾರುಕಟ್ಟೆ ಪತನಗೊಂಡಿದೆ. ಮಂಗಳವಾರ ಆಟೋ, ಐಟಿ, ಹಣಕಾಸು ಕ್ಷೇತ್ರಗಳ ಷೇರುಗಳ ಮಾರಾಟ ಹೆಚ್ಚಿದ ಕಾರಣ, ಬಿಎಸ್‌ಇ ಸೂಚ್ಯಂಕ 337.66 ಅಂಕ ಕುಸಿದು, 5 ತಿಂಗಳಲ್ಲೇ ಗರಿಷ್ಠ ಅಂದರೆ 57,900ಕ್ಕೆ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 111 ಅಂಕ ಇಳಿಕೆಯಾಗಿ, ದಿನಾಂತ್ಯಕ್ಕೆ 17,043ಕ್ಕೆ ತಲುಪಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯ 26 ಪೈಸೆ ಕುಸಿದು, 82.49 ರೂ. ಆಗಿದೆ.

ಉತ್ತರಿಸದೇ ಹೊರನಡೆದ ಬೈಡೆನ್‌!
ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಪತನಕ್ಕೆ ಸಂಬಂಧಿಸಿ ಸುದ್ದಿಗಾರರು ಪ್ರಶ್ನೆ ಕೇಳುತ್ತಿದ್ದರೂ, ಉತ್ತರಿಸದೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸುದ್ದಿಗೋಷ್ಠಿಯ ಮಧ್ಯದಲ್ಲೇ ಹೊರನಡೆದ ಪ್ರಸಂಗ ವರದಿಯಾಗಿದೆ. ಬ್ಯಾಂಕಿಂಗ್‌ ವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಬೈಡೆನ್‌ ನುಡಿದಾಗ ವರದಿಗಾರರೊಬ್ಬರು, “ಇಂಥ ಪರಿಸ್ಥಿತಿ ಬರಲು ಕಾರಣವೇನು ಮತ್ತು ಇದರಿಂದ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗದು ಎಂಬ ಭರವಸೆಯನ್ನು ನೀವು ಅಮೆರಿಕನ್ನರಿಗೆ ನೀಡುತ್ತೀರಾ’ ಎಂದು ಪ್ರಶ್ನಿಸಿದರು. ಇದಕ್ಕೆ ಏನೂ ಉತ್ತರಿಸದ ಬೈಡೆನ್‌, ಎದ್ದು ಹೊರನಡೆಯುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅಲ್ಲದೇ, ಶ್ವೇತಭವನದ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ವಿಡಿಯೋವನ್ನು 40 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅದಕ್ಕೆ ಬರುವ ಕಮೆಂಟ್‌ಗಳನ್ನು ಬ್ಲಾಕ್‌ ಮಾಡಲಾಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next