ಬೆಳ್ತಂಗಡಿ: ತುಮಕೂರು ನಗರದ ವಿದ್ಯಾನಗರ ಬಡಾವಣೆಯಲ್ಲಿ ಮತ್ತು ಬೆಳಗಾವಿ ಜಿಲ್ಲೆಯ ಅಸ್ತವಾಡ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ಥಾಪಿಸಲಾಗುತ್ತಿರುವ ಶುದ್ಧಗಂಗಾ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬ್ಯಾಂಕ್ ಆಫ್ ಬರೋಡಾ ಧರ್ಮಸ್ಥಳ ಶಾಖೆಯ ವತಿಯಿಂದ 9.20 ಲಕ್ಷ ರೂ. ಅನುದಾನದ ಚೆಕ್ ಹಸ್ತಾಂತರ ಕಾರ್ಯಕ್ರಮ ಸೋಮವಾರ ಧರ್ಮಸ್ಥಳದ ಡಾ.ಹೆಗ್ಗಡೆ ಬೀಡಿನಲ್ಲಿ ಜರಗಿತು.
ಬ್ಯಾಂಕ್ ಆಫ್ ಬರೋಡಾ ಫೈನಾನ್ಶಿಯಲ್ ಸರ್ವೀಸಸ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೈಲೇಂದ್ರ ಸಿಂಗ್‌ರವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅನುದಾನದ ಚೆಕ್‌ಗಳನ್ನು ಹಸ್ತಾಂತರಿಸಿದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್.ಮಂಜುನಾಥ್‌ರವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯದಾದ್ಯಂತ ಇದುವರೆಗೆ 323 ಶುದ್ಧಗಂಗಾ ಘಟಕಗಳನ್ನು ಸ್ಥಾಪಿಸಲಾಗಿದ್ದು, ಇದಕ್ಕಾಗಿ 15 ಕೋಟಿಯಷ್ಟು ಮೊತ್ತವನ್ನು ವಿನಿಯೋಗಿಸಲಾಗಿದೆ. ಘಟಕಗಳಿಂದ ಪ್ರತಿ ದಿನ ಒಂದು ಲಕ್ಷ ಕುಟುಂಬಗಳು ಶುದ್ಧ ನೀರನ್ನು ಒಯ್ಯುತ್ತಿದ್ದು, ಪ್ರತಿ ದಿನ 20 ಲಕ್ಷ ಶುದ್ಧ ನೀರಿನ ಉತ್ಪಾದನೆ ಮಾಡಲಾಗುತ್ತಿದೆ ಎಂದರು.
ಪ್ರಸ್ತುತ ವರ್ಷ ಉತ್ತರ ಕರ್ನಾಟಕದ ಗುಲ್ಬರ್ಗಾ ಪ್ರದೇಶದಲ್ಲ 100 ಶುದ್ಧಗಂಗಾ ಘಟಕಗಳನ್ನು ಸ್ಥಾಪಿಸುವ ಆಶಯವನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಪ್ರಬಂಧಕ ವಿಜಯ್ ಪಾಟೀಲ್, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್ ಮಂಜುನಾಥ್, ಆಡಳಿತಾಧಿಕಾರಿ ಅನಿಲ್ ಕುಮಾರ್, ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಮಂಗಳೂರು ವಿಭಾಗದ ಜನರಲ್ ಮ್ಯಾನೇಜರ್ ಗಾಯತ್ರಿ ಮೊದಲಾದವರು ಉಪಸ್ಥಿತರಿದ್ದರು.
ಬ್ಯಾಂಕ್ ಆಫ್ ಬರೋಡಾದ ಪ್ರಬಂಧಕ ವಿಜಯ್ ಪಾಟೀಲ್ ಸ್ವಾಗತಿಸಿ, ಯೋಜನೆಯ ನಿರ್ದೇಶಕರಾದ ಲಕ್ಷ್ಮಣ್ ವಂದಿಸಿದರು.