ಆಳಂದ: ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳ ಅಂಚೆ ಇಲಾಖೆಯ ಮನಿಆರ್ಡ್‌ರ್ ಮೂಲಕ ನೀಡುವ ಮಾಸಾಶನವನ್ನು ಇನ್ನು ಮುಂದೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಹೇಳಿದರು.
ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ ನಡೆದ ತಾಲೂಕಿನ ಅಂಚೆ ಕಚೇರಿ ಮತ್ತು ಅಂಚೆ ಶಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಫಲಾನುಭವಿಗಳ ಖಾತೆಗೆ ಹಣ ಜಮಾಗೊಳಿಸಲು ಫಲಾನುಭವಿಗಳ ವ್ಯಾಪ್ತಿಯಲ್ಲಿನ ಅಂಚೆ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಗತ್ಯ ದಾಖಲೆ ಪಡೆದು ಖಾತೆ ತೆರೆದು ಸಂಖ್ಯೆ ನೀಡಬೇಕು.
ನಂತರ ತಿಂಗಳ ಹಣ ನೇರವಾಗಿ ಅವರ ಖಾತೆಗೆ ಜಮಾಗೊಳ್ಳುತ್ತದೆ. ಇದರಿಂದ ಫಲಾನುಭವಿಗಳಿಗೆ ಮತ್ತು ಅಂಚೆ ಸಿಬ್ಬಂದಿಗಳಿಗೆ ಆಗುತ್ತಿದ್ದ ತೊಂದರೆ ನಿವಾರಣೆ ಆಗಲಿದೆ ಎಂದರು. ಸಾಮಾಜಿಕ ಭದ್ರತೆ ಯೋಜನೆಯ ವಿವಿಧ ಪಿಂಚಣಿ ಪಡೆಯುವ ತಾಲೂಕಿನ ಒಟ್ಟು 30645 ಫಲಾನುಭವಿಗಳ ಪೈಕಿ ರಾಷ್ಟ್ರೀಕೃತ ಬ್ಯಾಂಕ್ ಖಾತೆ ಮೂಲಕ 1123 ಫಲಾನುಭವಿಗಳು
ಮತ್ತು ಬ್ಯಾಂಕ್ ಗಳಲ್ಲಿ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ಹೊಂದದೆ ಮನಿ ಆರ್ಡ್‌ರ್ (ಇಎಂಇ) ಮೂಲಕ ಹಣ ಪಡೆಯುವ ಸುಮಾರು 29522 ಫಲಾನುಭವಿಗಳಿದ್ದಾರೆ. ಇವರೆಲ್ಲರಿಗೂ ಅಂಚೆ ಇಲಾಖೆಯಲ್ಲಿ ಅಥವಾ ಬ್ಯಾಂಕ್‌ನಲ್ಲಿ ಖಾತೆ ತೆರೆದುಕೊಟ್ಟರೆ ಅನುಕೂಲವಾಗಲಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಕಲಬುರಗಿಯ ಸಹಾಯಕ ಅಂಚೆ ಅಧಿಧೀಕ್ಷಕ ರಮೇಶ ಕೆ. ಉಮರಾನೆ ಮಾತನಾಡಿ, ಸುಮಾರು 82 ಅಂಚೆ ಶಾಖೆಗಳಿದ್ದು, ಫಲಾನುಭವಿಗಳಿಗೆ ಅನುಕೂಲ ಸ್ಥಳದಲ್ಲಿ ಆಧಾರ ಕಾರ್ಡ್ ಸಂಖ್ಯೆ, ಒಪ್ಪಿಗೆ ಪತ್ರ, ಮಂಜೂರಾತಿ ಝರಾಕ್ಸ್ ಪ್ರತಿ ಅಥವಾ ಮನಿಆರ್ಡ್‌ರನ ಚೀಟಿ ಕೊಟ್ಟರೆ ಅಂಚೆ ಉಳಿತಾಯ ಖಾತೆ ತೆರೆದುಕೊಡಲಾಗುವುದು ಎಂದರು.
ಈಗಾಗಲೇ ಈ ಕಾರ್ಯ ಚಾಲ್ತಿಯಲ್ಲಿದೆ. ಫಲಾನುಭವಿಗಳು ಸಿಬ್ಬಂದಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆ ನೀಡಿದರೆ ಖಾತೆಗಳನ್ನು ತೆರೆದುಕೊಡಲಾಗುವುದು ಎಂದರು. ಗ್ರೇಡ್-2 ತಹಶೀಲ್ದಾರ ಪ್ರಕಾಶ ಸಿಂದಗಿ ಈ ಕುರಿತು ವಿವರಣೆ ನೀಡಿದರು.
ಉಪ ಖಜಾನೆ ಸಹಾಯಕ ನಿರ್ದೇಶಕ ಸುಧೀಂದ್ರ ಕುಲಕರ್ಣಿ, ಅಂಕುಶ, ಅಂಚೆ ಕಚೇರಿ ವ್ಯವಸ್ಥಾಪಕ ಎಸ್.ಪಿ.ಎಂ. ಪುರಾಣಿಕ, ತಾಲೂಕಿನ ಅಂಚೆ ಪಾಲಕ ಶೇಖರ ವಡಗಾಂವ, ದಾನೇಶ್ವರ ಮಂಟಕಿ, ವಿಠಲ ಹೆಬಳಿ, ಬಸವಲಿಂಗಯ್ಯ ಸ್ವಾಮಿ, ಸಾತಲಿಂಗಪ್ಪ ತೊರಕಡೆ, ಶ್ರೀಶೈಲ ಜಳಕೋಟಿ, ವೀರಣ್ಣಾ ವಾಲಿ, ಪರಮೇಶ್ವರ ಪಾಟೀಲ ಹಾಗೂ ಸಿಬ್ಬಂದಿ ಹಾಜರಿದ್ದರು.