ಬಂಗಾರಪೇಟೆ: ಡಿಸಿಸಿ ಬ್ಯಾಂಕ್‌ನಿಂದ ಕಳೆದ ಅವಧಿಯಲ್ಲಿ ತಾಲೂಕಿನ ಮಹಿಳಾ ಸಂಘಗಳಿಗೆ ಹಾಗೂ ರೈತರಿಗೆ ಅವಶ್ಯಕವಾಗಿರುವಷ್ಟು ಸಾಲ ನೀಡಿಲ್ಲ. ಈ ಅವಧಿಯಲ್ಲಾದರೂ ತಾಲೂಕಿಗೆ 300 ಕೋಟಿ ರೂ. ಸಾಲ ನೀಡುವುದರ ಮೂಲಕ ತಾಲೂಕಿನ ರೈತರು ಹಾಗೂ ಮಹಿಳೆಯರು ಆರ್ಥಿಕವಾಗಿ ಮುಂದುವರಿಯಲು ಸಹಕಾರಿಯಾಗಲಿದೆ ಎಂದು ಶಾಸಕ ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಗುಲ್ಲಹಳ್ಳಿ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಡಿಸಿಸಿ ಬ್ಯಾಂಕ್‌ನಿಂದ 1.16 ಕೋಟಿಗಳ ಸಾಲವನ್ನು ಮಹಿಳಾ ಸಂಘಗಳಿಗೆ ಹಾಗೂ ರೈತರಿಗೆ ಸಾಲ ವಿತರಣೆಯ ಚೆಕ್ ವಿತರಿಸಿ ಮಾತನಾಡಿ, ಕಳೆದ ವರ್ಷ ಡಿಸಿಸಿ ಬ್ಯಾಂಕ್‌ನಿಂದ ನಿರ್ದಿಷ್ಟವಾಗಿ ಅಗತ್ಯವಾದ ಸಾಲ ವಿತರಣೆ ಮಾಡಿಲ್ಲ. ಇನ್ನಾದರೂ ಡಿಸಿಸಿ ಬ್ಯಾಂಕ್ ಎಚ್ಚೆತ್ತುಕೊಂಡು ಸಾಲ ವಿತರಣೆ ಮಾಡುವಂತೆ ತಿಳಿಸಿದರು.
ಸಾಲ ಪಾವತಿಸಿ: ಹಿಂದಿನ ಸಿಎಂ ಸಿದ್ದರಾಮಯ್ಯರನ್ನು ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಭೇಟಿ ಮಾಡಿ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಮಾಡಬೇಕು ಹಾಗೂ ಸಾಲಕ್ಕೆ ಬಡ್ಡಿ ವಿಧಿಸದೇ ರಾಜ್ಯ ಸರ್ಕಾರವೇ ಬಡ್ಡಿ ಕಟ್ಟುವ ಜವಾಬ್ದಾರಿ ವಹಿಸಿಕೊಂಡಿರುವುದರ ಮೂಲಕ ಮಹಿಳೆಯರು ಆರ್ಥಿಕವಾಗಿ ಮುಂದು ವರಿಯಲು ಶ್ರಮಿಸಲಾಗುತ್ತಿದೆ. ಗುಲ್ಲಹಳ್ಳಿ ವಿಎಸ್‌ಎಸ್‌ಎನ್ ಕಳೆದ 20 ವರ್ಷಗಳಿಂದ ಮುಚ್ಚಿದ್ದು, ಈ ವರ್ಷದಿಂದ ಪ್ರಾಣ ನೀಡಲಾಗಿದೆ ಎಂದರು.
ಗೌರವಕ್ಕೆ ಧಕ್ಕೆ ಬರದಿರಲಿ: ಇಡೀ ಕೋಲಾರ ಜಿಲ್ಲೆಯಲ್ಲಿಯೇ ಇದುವರೆಗೂ ಡಿಸಿಸಿ ಬ್ಯಾಂಕ್ ಮೂಲಕ ಮಹಿಳಾ ಸಂಘಗಳು ತೆಗೆದುಕೊಂಡಿರುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವುದರ ಮೂಲಕ ತಾಲೂಕಿನ ಗೌರವ ಉಳಿಸಿದ್ದಾರೆ. ಮಹಿಳೆಯರು ಹೆಚ್ಚಾಗಿ ಗೌರವಕ್ಕೆ ಧಕ್ಕೆ ಬರದೇ ಹಾಗೆ ಎಚ್ಚರವಹಿಸಿಕೊಂಡು ಸಾಲವನ್ನು ಒಂದು ದಿನ ಮುಂಚಿತವಾಗಿ ಬ್ಯಾಂಕ್‌ಗೆ ಕಟ್ಟುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದ ಅವರು, ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮದ ಮಹಿಳಾ ಸಂಘಗಳಿಗೆ ತಪ್ಪದೇ ಸಾಲ ವಿತರಣೆ ಮಾಡಬೇಕೆಂದು ಹೇಳಿದರು.
ಹೆಚ್ಚಿನ ಸಾಲ ನೀಡಲು ಕ್ರಮ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ, ಇಡೀ ಕೋಲಾರ ಜಿಲ್ಲೆಯಲ್ಲಿ ಬಂಗಾರಪೇಟೆ ತಾಲೂಕಿಗೆ ಕಡಿಮೆ ಸಾಲವನ್ನು ನೀಡಲಾಗಿದ್ದು, ಪ್ರಸ್ತುತ ಈ ವರ್ಷದಲ್ಲಿ ಎಲ್ಲಾ ತಾಲೂಕಿಗಳಿಗೂ ಮೀರಿ ಹೆಚ್ಚಿನ ಸಾಲ ನೀಡಲು ಕ್ರಮಕೈಗೊಳ್ಳಲಾಗುವುದು. ಮಹಿಳಾ ಸಂಘಗಳು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡುವಂತೆ ತಿಳಿಸಿದರು.
ತಾಲೂಕಿನಲ್ಲಿ 93 ಸಾವಿರ ಬಿಪಿಲ್ ಕಾರ್ಡ್‌ಗಳ ಮಹಿಳಾ ಸದಸ್ಯರಿದ್ದಾರೆ. ಈ ಎಲ್ಲಾ ಹೆಣ್ಣು ಮಕ್ಕಳಿಗೆ ಬಡ್ಡಿ ರಹಿತ ಸಾಲವನ್ನು ನೀಡಲು ತೀರ್ಮಾನಿಸಿದ್ದು, ಸ್ಥಳೀಯರ ಮೀಟರ್ ಬಡ್ಡಿಯನ್ನು ತಪ್ಪಿಸುವ ಉದ್ದೇಶದಿಂದ ಸಾಲ ನೀಡಲು ಎಷ್ಟೇ ಕೋಟಿಗಳಾಗಿದ್ದರೂ ಸಹ ಧೈರ್ಯದಿಂದ ಡಿಸಿಸಿ ಬ್ಯಾಂಕ್ ಸಾಲ ನೀಡಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು, ಗುಲ್ಲಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಚಲಪತಿ, ಜಿಪಂ ಸದಸ್ಯೆ ಪಾರ್ವತಮ್ಮ, ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ.ನಾಗರಾಜ್ ಇತರರು ಇದ್ದರು.