ಮುಂಬಯಿ: ನೋಟು ಅಪಮೌಲ್ಯವಾದ ಮೇಲೆ ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದ ವರ್ಷದ ಮೊದಲ ಆರ್‌ಬಿಐನ ಆರನೇ ದ್ವೆಮಾಸಿಕ ಪರಾಮರ್ಶೆ ನೀತಿ ಪ್ರಕಟವಾಗಿದ್ದು, ಬಡ್ಡಿದರವನ್ನು ಯಥಾಸ್ಥಿತಿಯಲ್ಲೇ ಇಡಲಾಗಿದೆ.
ಅಪಮೌಲ್ಯವಾದ ಮೇಲೆ ಹಣದ ಲೆಕ್ಕಾಚಾರ ಸಿಗುವುದು ಕಷ್ಟವಾಗಿದ್ದು, ದ್ವೆ„ಮಾಸಿಕ ಪರಾಮರ್ಶೆ ನೀತಿಯನ್ನು “ಬದಲಾವಣೆ’ಯಿಂದ “ತಟಸ್ಥ’ ಹಂತಕ್ಕೆ ನಿಲ್ಲಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.
ಮುಂಬಯಿಯಲ್ಲಿ ಬುಧವಾರ ಡೆಪ್ಯುಟಿ ಗವರ್ನರ್‌ಗಳ ಜತೆ ಸೇರಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸದ್ಯ ಏಕೆ ರೆಪೋ ಬಡ್ಡಿದರ ಇಳಿಕೆ ಮಾಡುತ್ತಿಲ್ಲವೆಂಬುದಕ್ಕೆ ಹಲವಾರು ಕಾರಣ ನೀಡಿದರು. ಸದ್ಯ ಡಿಸೆಂಬರ್‌ನಲ್ಲಿದ್ದ ಹಾಗೆಯೇ ಶೇ. 6.25ರಷ್ಟಕ್ಕೇ ರೆಪೋ ದರ ನಿಲ್ಲಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಬದಲಾವಣೆ ಕಷ್ಟವೆಂಬ ಸುಳಿವನ್ನೂ ನೀಡಿದ್ದಾರೆ.
ಆದರೆ, ನಾವು ಬಡ್ಡಿದರ ಕಡಿಮೆ ಮಾಡಿಲ್ಲ ವೆಂದ ಮಾತ್ರಕ್ಕೆ, ಬ್ಯಾಂಕ್‌ಗಳು ಗೃಹ, ವಾಹನಗಳ ಸಾಲದ ಮೇಲಿನ ಬಡ್ಡಿದರದಲ್ಲಿ ಕಡಿತ ಮಾಡಬಾರದು ಎಂದೇನಿಲ್ಲ. ಇದು ಸರಕಾರಕ್ಕೆ ಬಿಟ್ಟ ವಿಚಾರ. ಅನುತ್ಪಾದಕ ಆಸ್ತಿಯ ಸಮಸ್ಯೆಯನ್ನು ನಿವಾರಣೆ ಮಾಡಬೇಕು, ಬ್ಯಾಂಕ್‌ಗಳಿಗೆ ಇನ್ನಷ್ಟು ಹಣ ಹರಿದುಬರುವಂತೆ ಮಾಡಬೇಕು ಮತ್ತು ಮೊದಲೇ ನಿರ್ಧರಿಸಿದಂತೆ ಸಣ್ಣ ಉಳಿತಾಯ ಖಾತೆಗಳ ಬಡ್ಡಿದರ ನಿಗದಿ ಮಾಡಬೇಕು ಎಂದು ಹೇಳಿದ್ದಾರೆ. ಒಂದು ವೇಳೆ ಅನುತ್ಪಾದಕ ಆಸ್ತಿ ಸಮಸ್ಯೆ ನಿವಾರಿಸಿದರೆ ಬ್ಯಾಂಕುಗಳಿಗೆ ತನ್ನಿಂತಾನೇ ಹಣ ಹರಿದು ಬರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಠಿನ ಕ್ರಮ ತೆಗೆದುಕೊಳ್ಳಬೇಕು. ಆಗ ಬಡ್ಡಿದರ ಕಡಿಮೆ ಮಾಡಲು ಸಾಧ್ಯವೆಂದು ಊರ್ಜಿತ್ ಪಟೇಲ್ ಹೇಳಿದರು.
ಇದಕ್ಕಿಂತ ಮುಖ್ಯವಾಗಿ 500 ಮತ್ತು 1000 ರೂ. ನೋಟುಗಳ ಅಪಮೌಲ್ಯವಾದ ಮೇಲೆ ಎಷ್ಟು ಹಣ ಹೋಗಿದೆ ಮತ್ತು ಬಂದಿದೆ ಎಂಬ ಲೆಕ್ಕಾಚಾರವೇ ಗೊತ್ತಾಗುತ್ತಿಲ್ಲ. ಹೀಗಾಗಿಯೂ ಬಡ್ಡಿದರ ಕಡಿತ ಮಾಡುವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಊರ್ಜಿತ್ ಪಟೇಲ್ ತಿಳಿಸಿದರು. ಇದರ ಜತೆಯಲ್ಲೇ ಹಣದುಬ್ಬರವೂ ಹೆಚ್ಚುವ ಅಪಾಯವಿದ್ದು, ಇದರ ನಿಯಂತ್ರಣಕ್ಕಾಗಿ ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದಿದ್ದಾರೆ. ಅಂದರೆ 2017-18ರ ವಿತ್ತೀಯ ವರ್ಷದ ಮೊದಲಾರ್ಧದಲ್ಲಿ ಶೇ. 4-4.5 ಮತ್ತು ದ್ವಿತೀಯಾರ್ಧದಲ್ಲಿ ಶೇ. 4.5-5ಕ್ಕೆ ನಿಲ್ಲಿಸಬೇಕಿದೆ. ಒಟ್ಟಾರೆಯಾಗಿ ವರ್ಷದಲ್ಲಿ ಶೇ.4ಕ್ಕೆ ಹಣದುಬ್ಬರ ನಿಯಂತ್ರಿಸುವ ಅನಿವಾರ್ಯ ಇದೆ ಎಂದು ಅವರು ತಿಳಿಸಿದ್ದಾರೆ.
ವಿಶೇಷವೆಂದರೆ, ಕಳೆದ ಸೆಪ್ಟಂಬರ್‌ನಲ್ಲಿ ರಚಿಸಲಾದ 6 ಮಂದಿ ಸದಸ್ಯರ ವಿತ್ತೀಯ ನೀತಿ ಸಮಿತಿ ಸತತ ಎರಡನೇ ಬಾರಿಯೂ ಬಡ್ಡಿ ದರ ಬದಲಾವಣೆ ಮಾಡಿಲ್ಲ. ಆದರೆ ಈಗಿರುವ ಶೇ.6.25 ಬಡ್ಡಿದರ ಕಳೆದ ಆರು ವರ್ಷಗಳ ಹಿಂದಿನದ್ದಾಗಿದೆ. 2015ರ ಜನವರಿಯಿಂದ ಈಚೆಗೆ 175 ಬೇಸ್ ಪಾಯಿಂಟ್‌ನಷ್ಟು ಕಡಿಮೆ ಮಾಡಲಾಗಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.
ಶೇ.6.9ಕ್ಕೆ ಪ್ರಗತಿದರದ ಅಂದಾಜು: ಅಪಮೌಲ್ಯ ಆರ್ಥಿಕತೆಯ ಮೇಲೆ ಹೊಡೆತ ನೀಡಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಿರುವ ಆರ್‌ಬಿಐ, 2017ರ ವಿತ್ತೀಯ ವರ್ಷದಲ್ಲಿ ಶೇ. 6.9ರಷ್ಟು ಆರ್ಥಿಕ ಬೆಳವಣಿಗೆ ಕಾಣಬಹುದಾಗಿದೆ ಎಂದು ಅಂದಾಜಿಸಿದೆ. ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಇದು ಶೇ. 7.4ಕ್ಕೆ ಮುಟ್ಟಲಿದೆ ಎಂದೂ ಅದು ಹೇಳಿದೆ. ಆದರೆ ಕಳೆದ ಡಿಸೆಂಬರ್‌ನಲ್ಲಿ 2017ರ ವಿತ್ತೀಯ ವರ್ಷದಲ್ಲಿ ಶೇ. 7.1ರಷ್ಟು ಪ್ರಗತಿ ದರ ಮುಟ್ಟಬಹುದು ಎಂದು ಹೇಳಿತ್ತು. ಇದಕ್ಕೂ ಹಿಂದೆ ಶೇ. 7.6ರಷ್ಟಕ್ಕೆ ತಲುಪಬಹುದು ಎಂದು ಅಂದಾಜಿಸಿತ್ತು.