ಕಲಬುರಗಿ: ಪರಿಶಿಷ್ಟ ಜಾತಿಯಲ್ಲಿರುವ ಬಂಜಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸದ ಡಾ|ಉಮೇಶ ಜಾಧವ ಅವರಿಗೆ ಅಖೀಲ ಭಾರತ ಬಂಜಾರ ಸೇವಾ ಸಂಘದ ರಾಜ್ಯ ಘಟಕದಿಂದ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ಸಂಘದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಸಚಿವ ಬಾಬುರಾವ್ ಚವ್ಹಾಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಸಮುದಾಯವನ್ನು ಹೈಜಾಕ್ ಮಾಡುವ ಉದ್ದೇಶದಿಂದ ಡಾ|ಜಾಧವ ಸಮಾಜದ ಧರ್ಮಗುರುಗಳಾಗಿದ್ದ ದಿ| ರಾಮರಾವ್ ಮಹಾರಾಜರನ್ನು ಪ್ರಧಾನಿ ನರೇಂದ್ರ ಮೋದಿ ಬಳಿಗೆ ಕರೆದೊಯ್ದು ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತ ಪ್ರಸ್ತಾವವನ್ನು ಮನವಿ ರೂಪದಲ್ಲಿ ಸಲ್ಲಿಸಿದ್ದಾರೆ. ಇದರಿಂದ ಸಮುದಾಯದ ಜನರಲ್ಲಿ ಗೊಂದಲ ಮೂಡಿದೆ. ಈ ಸಂಬಂಧ ಸಮುದಾಯದ ಮಟ್ಟದಲ್ಲಿ ಒಂದು ಸುತ್ತಿನ ಸಭೆ ಮಾಡಿ ಚರ್ಚಿಸಲಾಗಿದ್ದು, ಮತ್ತೊಮ್ಮೆ ಸಭೆ ಸೇರಿ ವಿವರಣೆ ನೀಡುವಂತೆ ಡಾ|ಜಾಧವ ಅವರಿಗೆ ನೋಟಿಸ್ ನೀಡಲಾಗುವುದು ಎಂದರು.
ಅವರು ನೋಟಿಸ್‌ಗೆ ವಿವರಣೆ ನೀಡುವ ಆಧಾರದ ಮೇಲೆ ನ್ಯಾಯ ಪಂಚಾಯಿತಿ ಕರೆಯಲಾಗುತ್ತದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜನ ಜಾಗೃತಿ ಸಮಾವೇಶಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಅಧಿಕಾರ ಕೊಟ್ಟಿದ್ಯಾರು?
ಬಂಜಾರ ಸಮುದಾಯ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದೆ. ಇತರೆ ರಾಜ್ಯಗಳಲ್ಲಿ ಹಿಂದಳಿದ ವರ್ಗ, ಪರಿಶಿಷ್ಟ ಪಂಗಡ ಪಟ್ಟಿಯಲ್ಲಿದೆ. ಆದರೆ, ಡಾ|ಉಮೇಶ ಜಾಧವ ಇಡೀ ಬಂಜಾರ ಜನಾಂಗಕ್ಕೆ ಪರಿಶಿಷ್ಟ ಪಂಗಡದಲ್ಲಿನ ಅರಣ್ಯ ಹಕ್ಕು ನಿಯಮಗಳ ವಿನಾಯಿತಿ ಕುರಿತು ಪ್ರಧಾನಿವರೆಗೆ ಮನವಿ ಸಲ್ಲಿಸಿದ್ದಾರೆ. ಇದು ಈಗಾಗಲೇ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯೊಳಗಿರುವ ಸಮುದಾಯಕ್ಕೆ ಯಾವ ಸಂದೇಶ ರವಾನೆ ಮಾಡುತ್ತದೆ? ಸ್ವತಃ ತಂದೆ-ಮಗ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಗೆದ್ದು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಹೇಳುವುದು ಸಮುದಾಯಕ್ಕೆ ಮಾಡಿದ ದ್ರೋಹವಲ್ಲವೇ ಎಂದು ಪ್ರಶ್ನಿಸಿದರು.
ಜಾತಿ-ಧರ್ಮದ ಮೇಲೆ ಸಂಸದರು ರಾಜ ಕೀಯ ಮಾಡಬಾರದು. ಪ್ರಧಾನಿ ಅವರಿಗೆ ಸಲ್ಲಿಸಿ ರುವ ಮನವಿ ಪತ್ರ ವಾಪಸ್ ಪಡೆಯಬೇಕು. ಇಲ್ಲವೇ, ಸಮಾಜದ ಎಲ್ಲ ಗುರುಗಳನ್ನು ಮತ್ತೂಮ್ಮೆ ಪ್ರಧಾನಿ ಬಳಿಗೆ ಕರೆದೊಯ್ದು, ಈ ಗೊಂದಲಕ್ಕೆ ತೆರೆ ಎಳೆಯುವ ಕೆಲಸವನ್ನು ಮಾಡಬೇಕೆಂದು ಒತ್ತಾಯಿಸಿದರು. ಸಂಘದ ಪದಾಧಿಕಾರಿಗಳಾದ ಪ್ರವೀಣ ಜಾಧವ, ಕಿಶನ್ ಚವ್ಹಾಣ, ತುಳಸಿರಾಮ ಪವಾರ, ಬಾಳು ರಾಠೊಡ ಹಾಗೂ ಮತ್ತಿತರರು ಇದ್ದರು.