Advertisement

ತಾಂಡಾ ಅಭಿವೃದ್ಧಿಯಿಂದ ಬಂಜಾರರು ಮುಖ್ಯವಾಹಿನಿಗೆ: ಬಾಲರಾಜ

02:26 PM Aug 22, 2017 | |

ವಿಜಯಪುರ: ಗ್ರಾಮಗಳಿಂದ ದೂರದಲ್ಲಿರುವಂತಹ ತಾಂಡಾಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಬಂಜಾರಾ ಸಮುದಾಯದ ಸಮಗ್ರ ಅಭಿವೃದ್ಧಿ ಮೂಲಕ ಮುಖ್ಯವಾಹಿನಿಗೆ ತರಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಬಾಲರಾಜ್‌ ಹೇಳಿದರು. ಸೋಮವಾರ ನಗರದ ಬಂಜಾರಾ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಹಮ್ಮಿಕೊಂಡಿದ್ದ ಅರಣ್ಯ ಹಕ್ಕು ಕಾಯ್ದೆ, ಅಕ್ರಮ-ಸಕ್ರಮ ಜಮೀನು ಸಾಗುವಳಿ ಮತ್ತು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕುರಿತು ಬಂಜಾರಾ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಸಾಂಸ್ಕೃತಿಕವಾಗಿ ಬಂಜರಾ ಸಮುದಾಯ ಅತ್ಯಂತ ಹಿಂದುಳಿದೆ. ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಿಲ್ಲ. ಕಾರಣ ಅರಣ್ಯ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸಲು ನಿಗಮದಿಂದ ಪ್ರಯತ್ನಿಸಲಾಗುತ್ತಿದೆ ಎಂದರು. ಅದರಂತೆ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕುರಿತು ನಿಗಮವು ಅದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅದರಂತೆ ವಿವಿಧ ತಾಂಡಾಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ನಡೆದಿದೆ ಎಂದು ಹೇಳಿದರು. ಸಮುದಾಯವನ್ನು ಕಳಂಕಿತ ಮತ್ತು ಅನಿಷ್ಠ ಪದ್ಧತಿಗಳಿಂದ ದೂರ ಉಳಿಯಲು ಎಲ್ಲ ನೆರವು ನೀಡುತ್ತಿದೆ. ಕಳ್ಳಭಟ್ಟಿ ನಿವಾರಣೆ, ಬಾಧಿತರಿಗೆ ಪುನರ್ವಸತಿ, ಮದ್ಯಪಾನದಂತಹ ದುಶ್ಚಟ ಹೋಗಲಾಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮೌಡ್ಯ ಮತ್ತು ಅಂಧಶ್ರದ್ಧೆ ವಿರುದ್ಧ ಜಾಗೃತಿ ಸಹ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಈ ಜನಾಂಗದಲ್ಲಿ ಅರಣ್ಯ ಹಕ್ಕು ಕಾಯ್ದೆ ಮತ್ತು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ರೂಪಿಸುವ ಕುರಿತಂತೆ ಅವಶ್ಯಕತೆ ಇರುವ ಮಾನದಂಡಗಳ ಬಗ್ಗೆ ಮತ್ತು ಇತರೆ ಮಾಹಿತಿಯನ್ನು ತಿಳಿಹೇಳಲು ತರಬೇತಿ ಕಾರ್ಯಾಗಾರಗಳನ್ನು ಈಗಾಗಲೇ ಕಲಬುರಗಿ, ರಾಯಚೂರು, ಬೀದರ, ವಿಜಯಪುರ ಸೇರಿದಂತೆ ಒಟ್ಟು 5
ಜಿಲ್ಲೆಗಳಲ್ಲಿ ಇಂತಹ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು. ಸಮಾಜದ ವಿದ್ಯಾವಂತ ಯುವತಿಯರಿಗೆ ಬಂಜಾರಾ ಸಾಂಪ್ರದಾಯಿಕ ಕಸೂತಿ, ಪೂರಕ ಹೊಲಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಈ ಕುರಿತು ಸೂಕ್ತ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ. ಹೀರಾಲಾಲ್‌, ಅಧಿಕಾರೇತರ ನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಉಪ ಅರಣ್ಯ ಸಂರಕ್ಷಣಾ ಧಿಕಾರಿ ಕೆ.ನಾಯಕ ಅವರು ಅರಣ್ಯ
ಹಕ್ಕು ಕಾಯ್ದೆ ಹಾಗೂ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕುರಿತು ಮಾಹಿತಿ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ಅಧ್ಯಕ್ಷ ಅರ್ಜುನ ರಾಠೊಡ, ಮಾಜಿ ಸದಸ್ಯೆ ಅನುಸೂಯಾ ಜಾಧವ, ಎಂ.ಎಸ್‌. ನಾಯಕ, ರಾಜಪಾಲ ಚವ್ಹಾಣ, ಬಂಜಾರಾ ಮುಖಂಡ ಡಿ.ಎಲ್‌. ಚವ್ಹಾಣ, ತಾಪಂ ಅಧ್ಯಕ್ಷ ಪ್ರಕಾಶ ರಾಠೊಡ, ತಾಂಡಾ ಅಭಿವೃದ್ಧಿ ನಿಗಮದ ಸಂಪನ್ಮೂಲ ವ್ಯಕ್ತಿ ಅರುಣಕುಮಾರ ಇದ್ದರು. ಈ ಸಂದರ್ಭದಲ್ಲಿ ಬಂಜಾರಾ ಧರ್ಮಗುರು ಸಂತ ಸೇವಾಲಾಲ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಲಯ ಅಭಿವೃದ್ಧಿ ಅಧಿಕಾರಿ ಎನ್‌.ಎಸ್‌. ಭುಸಗೊಂಡ ಸ್ವಾಗತಿಸಿದರು. ವಲಯ ಅಭಿವೃದ್ಧಿ ಅಧಿಕಾರಿ ವಸಂತ ರಾಠೊಡ ವಂದಿಸಿದರು. ಶಿಕ್ಷಕ ಬಿ.ಡಿ. ಚವ್ಹಾಣ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next